
ವಿಜಯಪುರ (ಏ.4): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಸಾವಿರಾರು ಜನರ ಪ್ರಾರ್ಥನೆ ಫಲಿಸಿದ್ದು, 20 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರತೆಗೆದಿದೆ. ಬುಧವಾರ ಸಂಜೆ 6 ಗಂಟೆಗೆ ಕೊಳವೆ ಬಾವಿಗೆ ಬಿದ್ದ ಮಗು 20 ಗಂಟೆಗಳಿಂದ ಅನ್ನ ನೀರು ಇಲ್ಲದೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು.
ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಬಳಿಕ ಆಂಬುಲೆನ್ಸ್‌ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದೆ. ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿಯ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಮಗು ಜೀವಂತವಾಗಿ ಬಂದಿದೆ. ರಕ್ಷಣಾ ಕಾರ್ಯಾಚರಣೆ ಇನ್ನೇನು ಕೊನೆ ಕ್ಷಣಕ್ಕೆ ತಲುಪುತ್ತಿದ್ದಂತೆಯೇ ಮಗು ಅಳುವ ಸದ್ದು ಜೋರಾಗಿ ಕೇಳಿಸುತ್ತಿತ್ತು.
ಮಗು ಬಾವಿಗೆ ಬಿದ್ದ ತಕ್ಷಣ ಅರ್ಧ ಗಂಟೆ ಊರವರು ಮತ್ತು ಸ್ಥಳೀಯರು ಮಗುವಿನ ರಕ್ಷಣೆಗೆ ಮುಂದಾಗಿ ಸಾಧ್ಯವಾಗದೇ ಇದ್ದಾಗ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆ 11 ಗಂಟೆಯವರೆಗೆ ಒಂದು ನಿಮಿಷವೂ ಬಿಡುವು ನೀಡದೆ ನಿರಂತರ ಕಾರ್ಯಾಚರಣೆ ನಡೆಸಿದ್ದರು. ಇದರ ಜೊತೆಗೆ ಮಗುವಿನ ಚಲನವಲನಗಳ ಬಗ್ಗೆ ಕ್ಯಾಮಾರದಲ್ಲಿ ಸೆರೆಹಿಡಿಯಲಾಗಿತ್ತು. ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿತ್ತು. ಬಳಿಕ ಮಗುವಿಗೆ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಲಾಗಿತ್ತು.
ನೀರಿಲ್ಲದೆ ಬಳ್ಳಾರಿಯ 20 ಜೀನ್ಸ್ ಯೂನಿಟ್ ಬಂದ್..!
ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. 2000 ನೇ ಇಸವಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ , ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ಪ್ರಕರಣಗಳು ನಡೆದಿದೆ. ಆದರೆ ಬದುಕಿ ಬಂದಿದ್ದು ಮಾತ್ರ ಕೇವಲ ಒಂದು ಘಟನೆ, 2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲೂ ಕೊಳವೆಬಾವಿ ದುರಂತದಲ್ಲಿ 20 ವರ್ಷದ ಕಲ್ಲವ್ವ ಎಂಬುವವರು ಬದುಕಿ ಬಂದಿದ್ದರು. ಆಗ ಅವಳಿಗೆ ಬದುಕಿ ಬಂದ ಫ್ರಿನ್ಸ್ ಅಂತ ಹೆಸರು ಕೊಡಲಾಗಿತ್ತು. ಇದಾದ ಬಳಿಕ ಬದುಕಿ ಬಂದ ಪ್ರಕರಣ ಎಪ್ರಿಲ್ 3ರಂದು ಬೋರ್‌ವೆಲ್‌ಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ