
ಬೆಂಗಳೂರು (ಮಾ.12): ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳು ಮೊಬೈಲ್ ಪೋನ್‌ನಲ್ಲಿ ಸಂಗ್ರಹಿಸಿಟ್ಟಿರುವುದು ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (ಐಟಿ) ಅಪರಾಧವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೊಬೈಲ್‌ನಲ್ಲಿ ಹೇರಳವಾಗಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯೊಬ್ಬರ ವಿರುದ್ಧ ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 15 ಮತ್ತ ಐಟಿ ಕಾಯ್ದೆ-2000ರ ಸೆಕ್ಷನ್ 67(ಬಿ) ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ.ಜೆ.ಬಿನೋಜ್ (38) ಎಂಬಾತ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ‘ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳು ಮೊಬೈಲ್ ಪೋನ್‌ನಲ್ಲಿ ಸಂಗ್ರಹಿಸಲಾಗಿದೆಯಷ್ಟೆ. ಆದರೆ, ಅದನ್ನು ಯಾರಿಗೂ ಕಳುಹಿಸಿಲ್ಲ. ಹಾಗಾಗಿ, ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಅಪರಾಧಗಳು ತನಗೆ ಅನ್ವಯವಾಗುವುದಿಲ್ಲ’ ಎಂಬ ಅರ್ಜಿದಾರನ ವಾದ ತಿರಸ್ಕರಿಸಿದೆ.
ಅಲ್ಲದೆ ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಪ್ರಸರಣ ಮಾಡುವುದಷ್ಟೇ ಅಲ್ಲ, ಪ್ರಸಾರವಾಗುವ ಸಾಮರ್ಥ್ಯ ಹೊಂದಿರುವ ಮಕ್ಕಳ ಅಶ್ಲೀಲ ಪೋಟೋ ಹಾಗೂ ವಿಡಿಯೋ ಸಂಗ್ರಹಿಸಿಡುವುದು ಸಹ ಪೋಕ್ಸೊ ಕಾಯ್ದೆಯ ಸೆಕ್ಷನ್ 15ರ ಅಡಿ ಅಪರಾಧವಾಗುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್ ಸಹ ತೀರ್ಪು ನೀಡಿದೆ ಎಂದು ಪೀಠ ಸ್ಪಷ್ಟಪಡಿಸಿತು.
ಅರ್ಜಿದಾರರು ತಮ್ಮ ಫೋನ್‌ನಿಂದ ಮಕ್ಕಳ ಅಶ್ಲೀಲ ಚಿತ್ರ ಮತ್ತು ಪೋಟೋ ರವಾನಿಸಿಲ್ಲ ಎಂಬ ಕಾರಣಕ್ಕಾಗಿ ಅವರು ಅಪರಾಧಕ್ಕೆ ಹೊಣೆಗಾರರಾಗಿರುವುದಿಲ್ಲ ಎಂದು ಅರ್ಥೈಸಲಾಗದು. ಈಗಾಗಲೇ ಅರ್ಜಿದಾರನ ವಿರುದ್ಧ ದೋಷಾರೋಪಗಳನ್ನು ಹೊರಡಿಸಿದೆ. ಸಾಕ್ಷ್ಯಧಾರಗಳು ವಿಚಾರಣೆ ಹಂತದಲ್ಲಿ ಪ್ರಕರಣವಿದೆ. ಆತ ಪೂರ್ಣ ಪ್ರಮಾಣದ ವಿಚಾರಣೆಯಿಂದಲೇ ದೋಷಮುಕ್ತವಾಗಿ ಬರಲಿ. ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗದು ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿದೆ.
ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಅರ್ಜಿದಾರರ ಮೊಬೈಲ್ ಫೋನ್ ಅನ್ನು ಪೊಲೀಸರು ತನಿಖೆ ವೇಳೆ ವಶಕ್ಕೆ ಪಡೆದಿದ್ದರು. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿತ್ತು. ಈ ವೇಳೆ ಮೊಬೈಲ್ ಸ್ಟೋರೇಜ್ ಬಾಕ್ಸ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳು ಹೇರಳವಾಗಿರುವುದು ಪತ್ತೆಯಾಗಿತ್ತು.
ಇದರಿಂದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ಅರ್ಜಿದಾರನ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 67(ಬಿ) ಮತ್ತು ಪೋಕ್ಸೋ ಕಾಯ್ದೆ ಸೆಕ್ಷನ್ 15ರ ಅನ್ವಯ ಮಕ್ಕಳ ಅಶ್ಲೀಲ ಚಿತ್ರಗಳ ರಚನೆ, ಬ್ರೌಸಿಂಗ್, ಸಂಗ್ರಹಣೆ ಮತ್ತು ಪ್ರಸರಣ ಶಿಕ್ಷಾರ್ಹ ಅಪರಾಧ ಎಂಬ ಅಂಶಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರನ ವಿರುದ್ಧ ನಗರದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ದೋಷಾರೋಪ ಹೊರಿಸಿ ವಿಚಾರಣೆ ನಡೆಸುತ್ತಿತ್ತು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ