ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅನ್ಯಭಾಷಿಕ ಮಹನೀಯರ ಕೃತಿಗಳು ಕನ್ನಡಕ್ಕೆ!

Kannadaprabha News, Ravi Janekal |   | Kannada Prabha
Published : Mar 12, 2026, 10:28 AM IST
Kuvempu Bhasha Bharathi Authority

ಸಾರಾಂಶ

ಯುವ ಸಮಾಜದಲ್ಲಿ ಮಹಾಪುರುಷರ ಆದರ್ಶಗಳನ್ನು ಬಿತ್ತುವ ಉದ್ದೇಶದಿಂದ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಒಂದು ಕೋಟಿ ರು. ವೆಚ್ಚದಲ್ಲಿ ಪೆರಿಯಾರ್, ಜ್ಯೋತಿಬಾ ಫುಲೆ ಮತ್ತು ನಾರಾಯಣಗುರು ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆ ಕೈಗೆತ್ತಿಕೊಂಡಿದೆ.

ಸಂಪತ್‌ ತರೀಕೆರೆ

ಬೆಂಗಳೂರು (ಮಾ.12): ಮಹಾಪುರುಷರ ಆದರ್ಶಗಳು, ತತ್ವಗಳು ಅರಿತುಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವ ಸಮಾಜ ಮುಂದಾಗಬೇಕೆಂಬ ಉದ್ದೇಶದಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬ್ರಹ್ಮಶ್ರೀ ನಾರಾಯಣಗುರು ಸೇರಿ ಮೂವರು ಮಹಾತ್ಮರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆ ಕೈಗೆತ್ತಿಕೊಂಡಿದೆ.

ಮಹಾತ್ಮರ ಕೃತಿಗಳಲ್ಲಿರುವ ಜ್ಞಾನವನ್ನು ಅರಿತು ಯುವಜನತೆ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಮಹಾತ್ಮರ ಆದರ್ಶ, ತತ್ವ, ಸಿದ್ಧಾಂತಗಳ ಒಳಸಾರವನ್ನೊಳಗೊಂಡ ಅನ್ಯಭಾಷೆಯಲ್ಲಿರುವ ಕೃತಿಗಳನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೈಹಾಕಿದೆ. ಅದಕ್ಕಾಗಿ ಒಂದು ಕೋಟಿ ರು.ವೆಚ್ಚ ಮಾಡಲು ಯೋಜಿಸಿದೆ.

ತಮಿಳುನಾಡಿನ ಸಮಾಜ ಸುಧಾರಕ, ವೈಚಾರಿಕ ಚಿಂತಕ ಮತ್ತು ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ಇ.ವಿ.ರಾಮಸ್ವಾಮಿ, ಮಹಾರಾಷ್ಟ್ರದ ದಲಿತ ಮತ್ತು ಮಹಿಳಾ ಶಿಕ್ಷಣದ ಹರಿಕಾರ ಜ್ಯೋತಿ ಬಾ ಪುಲೆ, ಕೇರಳದ ತತ್ವಜ್ಞಾನಿ, ಸಮಾಜ ಸುಧಾರಕ ನಾರಾಯಣಗುರು ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಸಂಪುಟಗಳನ್ನು ಹೊರತರಲು ಸಮಿತಿಗಳನ್ನು ರಚನೆ ಮಾಡಲಾಗಿದೆ.

ಸಂಪಾದಕ ಮಂಡಳಿ ರಚನೆ:

ಪೆರಿಯಾರ್‌ ಅವರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಸಂಪಾದಕ ಮಂಡಳಿಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ಪ್ರಧಾನ ಸಂಪಾದಕರಾಗಿದ್ದಾರೆ. ಸದಸ್ಯರಾಗಿ ಡಾ। ಸಿ.ರಾಮಸ್ವಾಮಿ, ಪ್ರೊ.ಎಸ್‌.ಕಾರ್ಲೋಸ್‌ ಇದ್ದಾರೆ. ಅಂದಾಜು ₹50 ಲಕ್ಷ ವೆಚ್ಚದಲ್ಲಿ ನಾಲ್ಕು ಸಂಪುಟಗಳನ್ನು ಒಟ್ಟು ಒಂದು ಸಾವಿರ ಪುಟಗಳಲ್ಲಿ ಪ್ರಕಟಿಸಲು ಯೋಜಿಸಲಾಗಿದೆ.

ಅದೇ ರೀತಿಯಲ್ಲಿ ಜ್ಯೋತಿಬಾ ಪುಲೆ ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಯೋಜನೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರು ಪ್ರಧಾನ ಸಂಪಾದಕರಾಗಿ ಇರಲಿದ್ದು, ಜೆ.ಪಿ.ದೊಡ್ಡಮನಿ, ಡಾ। ಸಿ.ಎಸ್‌.ಚೌಗಲೆ ಸಂಪಾದಕ ಮಂಡಳಿ ಸದಸ್ಯರಾಗಿದ್ದಾರೆ. ಸುಮಾರು ₹34 ಲಕ್ಷ ವೆಚ್ಚದಲ್ಲಿ 3 ಸಂಪುಟಗಳನ್ನು ಒಟ್ಟು 900 ಪುಟಗಳಲ್ಲಿ ಪ್ರಕಟಿಸಲು ಯೋಜಿಸಲಾಗಿದೆ. ಬ್ರಹ್ಮಶ್ರೀ ನಾರಾಯಣಗುರುಗಳ ಕೃತಿಗಳನ್ನು ಪ್ರಕಟಿಸುವ ಸಂಪಾದಕ ಮಂಡಳಿಯಲ್ಲಿ ಮುದ್ದುಮೂಡು ಬೆಳ್ಳೆ, ಪಾರ್ವತಿ ಐತಾಳ್‌ ಅವರು ಸದಸ್ಯರಾಗಿದ್ದಾರೆ. ಅಂದಾಜು ₹12 ಲಕ್ಷ ವೆಚ್ಚದಲ್ಲಿ 2 ಸಂಪುಟಗಳನ್ನು ಒಟ್ಟು 300 ಪುಟಗಳಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ। ಚನ್ನಪ್ಪ ಕಟ್ಟಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಈಗಾಗಲೇ ಮೂವರು ಮಹನೀಯರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಪ್ರಕಟಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ಪ್ರಾಧಿಕಾರದಿಂದ ಡಾ। ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನರಾಂ ಸೇರಿ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಓದುಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಡಾ। ರಾಮಮನೋಹರ ಲೋಹಿಯಾ ಅವರ ಕೃತಿಗಳು ಕೂಡ ಕನ್ನಡಕ್ಕೆ ಭಾಷಾಂತರಗೊಂಡಿವೆ ಎಂದು ಹೇಳಿದರು.

ಜ್ಞಾನ, ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿ

ಅನ್ಯಭಾಷೆಗಳಲ್ಲಿರುವ ಮಹನೀಯರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವುದು ಮತ್ತು ಕನ್ನಡದ ಅತ್ಯುತ್ತಮ ಕೃತಿಗಳನ್ನು ವಿಶ್ವದ ಇನ್ನಿತರ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡ ಸಾರಸ್ವರ ಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಉದ್ದೇಶದಿಂದಲೇ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಅನುವಾದವು ಜ್ಞಾನ, ಸಾಂಸ್ಕೃತಿಕ ವಿನಿಮಯ ಮತ್ತು ಭಾಷೆಯ ಶ್ರೀಮಂತಿಕೆಗೆ ಅತ್ಯಗತ್ಯ.

- ಡಾ। ಚನ್ನಪ್ಪ ಕಟ್ಟಿ, ಅಧ್ಯಕ್ಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಡಿಕೇರಿಯ ಭಾಗಮಂಡಲದಲ್ಲಿ ಲೀವಿಂಗ್ ಟುಗೆದರ್ ಜೋಡಿಯ ಕೊಲೆ: ಮಹಿಳೆ ಸೋದರನಿಂದಲೇ ಕೃತ್ಯ
ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು