ಬೆಂಗಳೂರು (ಆ.25): ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆದ್ದರಿಂದ ಜನತೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ನಂತರ ಉದಾಸೀನ ಮಾಡದೇ ಕೊರೋನಾ ಮಾರ್ಗಸೂಚಿಗಳನ್ನೂ ತಪ್ಪದೆ ಪಾಲಿಸಬೇಕು. ಖಾಸಗಿ ಮತ್ತು ಸರ್ಕಾರೇತರ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಸರ್ಕಾರದ ಜೊತೆ ಲಸಿಕಾ ಕಾರ್ಯಕ್ರಮಕ್ಕೆ ಕೈ ಜೋಡಿಸಿ ಜನಾಂದೋಲನವನ್ನು ಕೈಗೊಳ್ಳಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರೆ ನೀಡಿದರು.
ಗೀವ್ ಇಂಡಿಯಾ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರಾಜ ಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಭಾರತ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
undefined
ನೆಮ್ಮದಿಯ ಸುದ್ದಿ: ಬೆಂಗಳೂರಿನಲ್ಲಿ ಕೊರೋನಾ ಸಾವಿನ ಪ್ರಮಾಣ ಶೂನ್ಯ
ರಾಗಿ ಮುದ್ದೆ, ಬಸ್ಸಾರು ರುಚಿಕರ: ವ್ಯಾಯಾಮ ಮಾಡುವುದರ ಜೊತೆಗೆ ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಬೇಕು. ಸಾಂಪ್ರದಾಯಿಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಕರ್ನಾಟಕದ ರಾಗಿ ಮುದ್ದೆ, ಬಸ್ಸಾರು ರುಚಿಕರ ಮತ್ತು ಆರೋಗ್ಯಕರ ಆಹಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ವಿಶ್ವದ ಬಲಿಷ್ಠ ಮತ್ತು ಸಮೃದ್ಧ ದೇಶಗಳೂ ಕೊರೋನಾ ಹಾವಳಿಗೆ ತತ್ತರಿಸಿದವು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಮತ್ತು ದಕ್ಷ ನಿರ್ವಹಣೆಯಿಂದ ದೇಶದಲ್ಲಿ ಕೊರೋನಾವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ರಾಜ್ಯ ಸರ್ಕಾರವೂ ಸಹ ಕೊರೋನಾ ನಿಯಂತ್ರಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಯೋಜನಾ ಸಚಿವ ಮುನಿರತ್ನ, ಸಂಸದ ಪಿ.ಸಿ.ಮೋಹನ್, ಗೀವ್ ಇಂಡಿಯಾ ಸಂಸ್ಥಾಪಕ ಅತುಲ್ ಸತಿಜ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದಿಂದ 1.5 ಕೋಟಿ ಲಸಿಕೆ ಪೂರೈಕೆ ನಿರೀಕ್ಷೆ: ಸಿಎಂ
ಬೆಂಗಳೂರು: ಪ್ರಸ್ತುತ ದಿನವೂ 3.5 ರಿಂದ 4 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಸೆಪ್ಟೆಂಬರ್‌ನಿಂದ ಪ್ರತಿ ದಿನ 5 ಲಕ್ಷ ಜನರಿಗೆ ಲಸಿಕೆ ನೀಡುವ ಉದ್ದೇಶವಿದ್ದು, ಕೇಂದ್ರ ಸರ್ಕಾರದಿಂದ 1.5 ಕೋಟಿ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಡವರು, ಕೆಳ ಹಂತದ ವರ್ಗದವರಿಗೆ ಲಸಿಕೆ ನೀಡುವುದು ನಮ್ಮ ಗುರಿಯಾಗಿದೆ. ದಾನಿಗಳು ಹಾಗೂ ಖಾಸಗಿ ಸಂಸ್ಥೆಗಳು ಸಿಎಸ್‌ಆರ್ ನಿಧಿಯಿಂದ ಲಸಿಕೆ ನೀಡಲು ಮುಂದಾಗಬೇಕು. ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಬೇಕಿದೆ. ಮುಂದಿನ ತಿಂಗಳಿನಿಂದ ಲಸಿಕಾಕರಣ ಹೆಚ್ಚಿಸಲಾಗುವುದು. ಕೇಂದ್ರ ಸರ್ಕಾರ ಅಗತ್ಯ ಲಸಿಕೆ ಪೂರೈಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ಮಹಾಮಾರಿಯ ಹಾವಳಿ ನಿರಂತರವಾಗಿದ್ದು ವಿಶ್ವವೇ ತತ್ತರಿಸಿದೆ. ಜನರು ಎಚ್ಚೆತ್ತುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೇಶ ಸದೃಢ ರಾಷ್ಟ್ರವಾಗಲು ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯಬೇಕು. ಖಾಸಗಿ ಕಂಪನಿಗಳು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.