* ಹಿರಿಯ ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ ನಿಧನ
* ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಗರಾಜ
* ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಗುಡಿಹಳ್ಳಿಯವರಾದ ನಾಗರಾಜ
ಬೆಂಗಳೂರು, (ಆ.26): ಹಿರಿಯ ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ (66) ನಿಧನರಾದರು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಆ.26) ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಗುಡಿಹಳ್ಳಿಯವರಾದ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ ಉಪನ್ಯಾಸಕರಾಗಿದ್ದರು. 1983 ರಲ್ಲಿ ಪ್ರಜಾವಾಣಿ, ಸುಧಾ, ಡೆಕ್ಕನ್‍ಹೆರಾಲ್ಡ್ ಪತ್ರಿಕಾ ಸಮೂಹ ಸೇರಿ 31 ವರ್ಷ ಕಾಲ ವಿವಿಧ ಸಂಪಾದಕೀಯ ಹುದ್ದೆ ನಿರ್ವಹಿಸಿ ಸುದ್ದಿಸಂಪಾದಕರಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ನಟ, ನಿರ್ದೇಶಕರಾಗಿ ರಂಗಪ್ರವೇಶ ಮಾಡಿ ಸಂಘಟಕರಾಗಿ ಬೆಳೆದ ಗುಡಿಹಳ್ಳಿಯವರು ರಂಗ ಬರವಣಿಗೆಗೆ ಜೀವನ ಮುಡಿಪಾಗಿಟ್ಟರು.
undefined
ಆಫ್ಘಾನ್‌ನಲ್ಲಿ ಊಟ ಚಿನ್ನಕ್ಕಿಂತ ದುಬಾರಿ, ದೇಶದಲ್ಲಿ ಡ್ರೋನ್ ನಿಯಮ ಜಾರಿ; ಆ.26ರ ಟಾಪ್ 10 ಸುದ್ದಿ
ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದರು. ರಾಜ್ಯೋತ್ಸವ, ಕೆಂಪೇಗೌಡ, ಮುರುಘರಾಜೇಂದ್ರ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರು. ಹರಪನಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅವರ ಸಂಪಾದಿತ ಕೃತಿಗಳು: ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗಮಾಹಿತಿ ಮಾಲಿಕೆ, ಹಾಗೂ ರಂಗಸಂಪನ್ನರು ಮಾಲಿಕೆಯ 40 ಕೃತಿಗಳು, ವೃತ್ತಿ ರಂಗದ ಮಹತ್ತರ ನಾಟಕಗಳು (ರಾಮಕೃಷ್ಣ ಮರಾಠೆ ಜತೆಗೆ), ಶತಮಾನದ ಶಕಪುರುಷ ಏಣಗಿ ಬಾಳಪ್ಪ (ಈ ಮೂರೂ ಸರಣಿ ನಾಟಕ ಅಕಾಡೆಮಿ ಪ್ರಕಟಣೆ), ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು (ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ. ಹಲವಾರು ಪ್ರಶಸ್ತಿ ಗೌರವಗಳು ಲಭಿಸಿವೆ.
ಡಾ.ಸಿಎನ್ ಅಶ್ವತ್ಥನಾರಾಯಣ ಶೋಕ
ಹಿರಿಯ ಪತ್ರಕರ್ತ, ರಂಗ ವಿಮರ್ಶಕ ಗುಡಿಹಳ್ಳಿ ನಾಗರಾಜ್ ಅವರ ನಿಧನಕ್ಕೆ ಉನ್ನತ ಶಿಕ್ಷಣ, ಐಟಿ-ಬಿಟ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ನಾಡಿನ ಹೆಸರಾಂತ ದಿನಪತ್ರಿಕೆ ʼಪ್ರಜಾವಾಣಿʼಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಗುಡಿಹಳ್ಳಿ ಅವರು, ನಾಟಕ ರಂಗದಲ್ಲಿ ಬಹು ಪ್ರೀತಿಯಿಂದ ತೊಡಗಿಕೊಂಡಿದ್ದರು. ರಂಗ ವಿಮರ್ಶೆ, ರಂಗ ಬರಹದಲ್ಲಿ ಎತ್ತಿದ ಕೈ ಆಗಿದ್ದ ಅವರು, ಪತ್ರಕರ್ತರಾಗಿದ್ದಾಲೂ, ನಿವೃತ್ತರಾದ ಮೇಲೂ ನಾಟಕ ರಂಗದಲ್ಲಿಯೇ ತೊಡಗಿಕೊಂಡಿದ್ದರು.
ಜತೆಗೆ; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷರಾಗಿ, ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷರಾಗಿ ಗುಡಿಹಳ್ಳಿ ನಾಗರಾಜ್ ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರು.
ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ಮೃತರಿಗೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಸಚಿವರು ಪ್ರಾರ್ಥನೆ ಮಾಡಿದ್ದಾರೆ.