-ಮಾಜಿ ಉಪಮುಖ್ಯಮಂತ್ರಿ ಡಾ ಪರಮೇಶ್ವರ್‌ರಿಂದ ಕೃತಿ ಲೋಕಾರ್ಪಣೆ
- ನನ್ನ ಬೊಗಸೆಯ ಆಕಾಶ ಕೃತಿ ಲೋಕಾರ್ಪಣೆ
- ಸ್ವಪ್ನ ಬುಕ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮ
ಬೆಂಗಳೂರು (ಮಾ.13): ಅಗಾಧ ಜೀವನ ಪ್ರೀತಿ, ಪಕ್ಷ ನಿಷ್ಠೆ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ(veerappa moily) ಅವರಂತಹ ವ್ಯಕ್ತಿತ್ವ ಹೊಂದಿರುವವರು ಇಂದಿನ ರಾಜಕಾರಣದಲ್ಲಿ ಕಾಣ ಸಿಗುವುದಿಲ್ಲ. ಅಪಾರ ಸಾಮಾಜಿಕ ಕಳಕಳಿ ಹೊಂದಿರುವ ಅವರು ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ( former deputy CM dr g parameshwar)ಮೆಚ್ಚುಗೆ ವ್ಯಕ್ತಪಡಿಸಿದರು.
ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ಏರ್ಪಡಿಸಿದ್ದ ಸಮಾರಂಭದಲ್ಲಿ ಸಪ್ನಾ ಬುಕ್‌ಹೌಸ್ (Swpna Book House) ಹೊರತಂದಿರುವ ಮೊಯ್ಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ (Nanna Bogaseya Akasha) ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಂದಿನ ಕೆಲ ರಾಜಕಾರಣಿಗಳು ಬೆಳಗ್ಗೆ ಒಂದು ಪಕ್ಷ, ಸಂಜೆ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾರೆ. ಸ್ವಾಗತ ಮಾಡುವವರೂ ಬಾಗಿಲು ತೆರೆದುಕೊಂಡು ಕುಳಿತಿರುತ್ತಾರೆ. ಇದನ್ನೆಲ್ಲಾ ನೋಡಿದರೆ ಅಸಹ್ಯವಾಗುತ್ತದೆ. ಆದರೆ ಮೊಯ್ಲಿ ಅವರ ಪಕ್ಷ ನಿಷ್ಠೆ ಅಚಲವಾಗಿದೆ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವರೆ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಕಾಂಗ್ರೆಸ್‌ನ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ದಶಕಗಳಿಂದಲೂ ಪಕ್ಷ ನಿಷ್ಠೆ ತೋರುತ್ತಿರುವ ಮೊಯ್ಲಿ ಅವರು ವಿಭಿನ್ನವಾಗಿ ಕಾಣಿಸುತ್ತಾರೆ ಎಂದು ಬಣ್ಣಿಸಿದರು.
ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಕೀರ್ತಿ ಮೊಯ್ಲಿ ಅವರಿಗೆ ಸಲ್ಲುತ್ತದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳೂ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ಕೋರ್ಸ್ ಅಭ್ಯಾಸ ಮಾಡುವಂತಾಯಿತು. ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಅವರು ಮಾಡಿದ ಕಾರ್ಯಗಳು ಸಮಾಜದಲ್ಲಿ ಪರಿವರ್ತನೆ ತಂದವು ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಮೊಯ್ಲಿ ಅವರು ಜೀವನದುದ್ದಕ್ಕೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೂ ಅವರನ್ನು ಟೇಪ್ ಹಗರಣ, ಜೆಎಂಎಂ ಹಗರಣ ಸುತ್ತಿಕೊಂಡವು. ನ್ಯಾಯಾಲಯದಲ್ಲಿ ಈ ಎರಡೂ ಹಗರಣದಲ್ಲಿ ಮೊಯ್ಲಿ ಅವರ ಪಾತ್ರ ಇಲ್ಲವೆಂದು ತೀರ್ಪು ಬಂದಿತು. ಆದರೆ ಆರೋಪಗಳಿಂದ ಕುಗ್ಗಿ ಹೋಗಿದ್ದರು ಎಂದು ಸ್ಮರಿಸಿಕೊಂಡರು. ಕೇಂದ್ರದ ಮಾಜಿ ಸಚಿವ ಡಾ.ಕೆ.ರೆಹಮಾನ್ ಖಾನ್, ನಿಟ್ಟೆಮೀನಾಕ್ಷಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗೌರವ ಸಲಹೆಗಾರ ಪ್ರೊ.ಎನ್.ಆರ್.ಶೆಟ್ಟಿ, ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ, ಪತ್ರಕರ್ತ ರವೀಂದ್ರ ಭಟ್, ಸಪ್ನಾ ಬುಕ್ ಹೌಸ್‌ನ ನಿತಿನ್ ಷಾ ಮತ್ತಿತರರು ಉಪಸ್ಥಿತರಿದ್ದರು.
ನಾನು ಸಚಿವನಾಗಿದ್ದಿದ್ದರೆ 45ಕ್ಕೆ ಪೆಟ್ರೋಲ್ ಕೊಡ್ತಿದ್ದೆ: ವೀರಪ್ಪ ಮೊಯ್ಲಿ
ರಾಜಕಾರಣಿಗಳು ಆತ್ಮಕಥನ ಬರೆಯುವ ಸಂದರ್ಭದಲ್ಲಿ ಸತ್ಯ ಹೇಳಿದರೆ ಕೆಲವರಿಗೆ ಕಹಿ ಅನುಭವವಾಗುತ್ತದೆ ಎಂದು ಹಿಂಜರಿಯುತ್ತಾರೆ. ಸುಳ್ಳಿನ ಕತೆ ಕಟ್ಟಿದರೆ ಓದುಗ ವರ್ಗಕ್ಕೆ ನೋವುಂಟು ಮಾಡಿದಂತಾಗುತ್ತದೆ. ಆದರೆ, ಈ ಕೃತಿಯಲ್ಲಿ ಸಂಪೂರ್ಣ ಸತ್ಯಾಂಶಗಳನ್ನೇ ಹೇಳಿದ್ದೇನೆ. ಎಲ್ಲಿಯೂ ಉತ್ಪ್ರೇಕ್ಷೆಗೊಳಗಾಗುವಂತಹ ಅಂಶಗಳನ್ನು ಸೇರಿಸಿಲ್ಲ ಎಂದು ತಿಳಿಸಿದರು. ತಾವು ಹುಟ್ಟಿದ ಊರಿನಿಂದ ಹಿಡಿದು ಶಿಕ್ಷಣ, ಮದುವೆ, ರಾಜಕೀಯ ಜೀವನ, ಮುಖ್ಯಮಂತ್ರಿಯಾಗಿ ಮಾಡಿದ ಕೆಲಸದಿಂದ ಹಿಡಿದು, ಕೇಂದ್ರ ಸಚಿವನಾಗಿ ಮಾಡಿದ ಅನುಭವಗಳನ್ನು ದಾಖಲಿಸಿದ್ದೇನೆ, ಜೊತೆಗೆ ಸಾಹಿತ್ಯಾಸಕ್ತಿ, ಬರವಣಿಗೆ ಬಗ್ಗೆ ಉಲ್ಲೇಖಿಸಿದ್ದೇನೆ ಎಂದು ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ವೀರಪ್ಪ ಮೊಯ್ಲಿ ಹೇಳಿದ್ದರು.
ತನ್ನದೇ ಪಕ್ಷದ ಮುಖಂಡರ ವಿರುದ್ಧ ಮೊಯ್ಲಿ ವಾಗ್ದಾಳಿ
ಮೊದಲ ಪ್ರತಿ ಪತ್ನಿಗೆ
ಲೋಕಾರ್ಪಣೆಯಾದ ತಮ್ಮ ಆತ್ಮಕಥನ ಮೊದಲ ಪ್ರತಿಯನ್ನು ಪತ್ನಿ ಮಾಲತಿ ಅವರಿಗೆ ವೀರಪ್ಪ ಮೊಯ್ಲಿ ಅವರು ನೀಡಿ ಮಾತನಾಡಿದ ಮೊಯ್ಲಿ, ನಾನು ಸಾವಿರಾರು ಪುಟ ಬರೆದರೂ ಅದನ್ನು 500 ಪುಟಕ್ಕೆ ತರುವ ಸೆನ್ಸಾರ್ ಕೆಲಸವನ್ನು ಪತ್ನಿ ಮಾಡುತ್ತಾರೆ. ನಾನು ಏನು ಕೆಲಸ ಮಾಡುತ್ತೇನೆ ಎಂದು ಮೊದಲೆಲ್ಲಾ ನನ್ನ ತಾಯಿ ಗಮನಿಸುತ್ತಿದ್ದರು. ಈಗ ಈ ವಿಜಿಲೆನ್ಸ್ ಕೆಲಸವನ್ನು ಪತ್ನಿ ಮಾಡುತ್ತಿದ್ದಾರೆ ಎಂದು ಹಾಸ್ಯವಾಗಿ ಹೇಳಿದರು.