100 ಸೋಂಕಿತರಿಗೆ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ಸಾಧನೆ!

By Kannadaprabha NewsFirst Published Jul 18, 2020, 8:07 AM IST
Highlights

100 ಸೋಂಕಿತರಿಗೆ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ಸಾಧನೆ| ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಕೆಲಸ| ವಾಸ್ತವವಾಗಿ ಕೊರೋನಾ ಸೋಂಕು ತಗುಲಿರುವ ಗರ್ಭಿಣಿಯರಿಗೆ ಅತ್ಯಂತ ಹೆಚ್ಚು ಆರೈಕೆ 

ಬೆಂಗಳೂರು(ಜು.18): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದಿಗ್ಧ ಸಂದರ್ಭದಲ್ಲೇ ನಗರದ ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ ಶುಕ್ರವಾರ 100ನೇ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ಸಮಾಧಾನದ ವಿಚಾರವೆಂದರೆ ಮಗುವಿಗೆ ಸೋಂಕು ಇಲ್ಲ.

ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100 ನೇ ಕೋವಿಡ್ ಸೋಂಕಿತ ಗರ್ಭಿಣಿ‌ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ.

ಎರಡೂ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಯ ಈ ಸಾಧನೆ‌ ನಿಜಕ್ಕೂ‌ ಶ್ಲಾಘನೀಯ. pic.twitter.com/4jBVoUiwXw

— B Sriramulu (@sriramulubjp)

ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಟ್ವೀಟ್‌ ಮಾಡಿದ್ದಾರೆ. ಇನ್ನು ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ 100 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ಸಾಧನೆ ಕುರಿತು ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಆಸ್ಪತ್ರೆಯ ನಿರ್ದೇಶಕಿ ಗೀತಾ ಶಿವಮೂರ್ತಿ, ‘ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಕೆಲಸ. ಈ ದಿಸೆಯಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯ ಅತ್ಯಂತ ಮಹತ್ವದ್ದಾಗಿದೆ’ ಎಂದರು.

ಕೊರೋನಾ ನೆಗೆಟಿವ್ ಮಾಹಿತಿಯೇ ಇಲ್ಲ: ಟೆಸ್ಟ್‌ ಮಾಡಿಸಿಕೊಂಡವರಿಗೆ ಗೊಂದಲ!

‘ವಾಸ್ತವವಾಗಿ ಕೊರೋನಾ ಸೋಂಕು ತಗುಲಿರುವ ಗರ್ಭಿಣಿಯರಿಗೆ ಅತ್ಯಂತ ಹೆಚ್ಚು ಆರೈಕೆ ಬೇಕಾಗಲಿದೆ. ಇದೇ ಕಾರಣದಿಂದ ವಿಕ್ಟೋರಿಯಾ ಆವರಣದ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಅವರಿಗೆ ಹೆರಿಗೆ ಮಾಡಿಸಲಾಗುತ್ತಿದ್ದು, ಮಗುವಿನ ಜನನದ ನಂತರ ವಾಣಿ ವಿಲಾಸ ಆಸ್ಪತ್ರೆಯ ನವಜಾತ ಶಿಶು ವಾರ್ಡ್‌ನಲ್ಲಿ ಆರೈಕೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಗರ್ಭಿಣಿ ತಾಯಿಯಿಂದ ಮಕ್ಕಳಿಗೆ ಸೋಂಕು ಬಂದಿಲ್ಲ. ಆದ್ದರಿಂದ ಹೆರಿಗೆ ಮಾಡಿಸಿದ ತಕ್ಷಣ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸುತ್ತೇವೆ. ತಾಯಿಗೆ ನೆಗೆಟಿವ್‌ ಬರುವವರೆಗೂ ಮಗು ಹಾಗೂ ತಾಯಿಗೆ ಆಸ್ಪತ್ರೆಯಲ್ಲೇ ಆರೈಕೆ ಮಾಡಲಾಗುತ್ತದೆ. ಒಂದು ಬಾರಿ ನೆಗೆಟಿವ್‌ ಬಂದ ನಂತರ ತಾಯಿ-ಮಗುವನ್ನು ಮನೆಗೆ ಕಳುಹಿಸಕೊಡಲಾಗುತ್ತಿದೆ’ ಎಂದು ವಿವರಿಸಿದರು.

ಸಚಿವ ಡಾ| ಸುಧಾಕರ್‌ ಅಭಿನಂದನೆ

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌, ‘ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯು ಕೋವಿಡ್‌ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಪೂರೈಸುವ ಮೂಲಕ ವಿಶೇಷ ಮೈಲಿಗಲ್ಲು ಸಾಧಿಸಿದೆ. ಇದಕ್ಕೆ ಶ್ರಮಿಸಿದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ನನ್ನ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಸೋಂಕು ತಗಲದಂತೆ ಎಚ್ಚರ ವಹಿಸಿ ಈವರೆಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಸುಮಾರು 350 ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ವಿಕ್ಟೊರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ನವಜಾತ ಶಿಶುಗಳಿಗೂ ಕೋವಿಡ್ ನೆಗಟಿವ್ ಬಂದಿದ್ದು ತಾಯಂದಿರು- ಶಿಶುಗಳು ಆರೋಗ್ಯವಾಗಿದ್ದರೆ. pic.twitter.com/bumZpf70mi

— Dr Sudhakar K (@mla_sudhakar)

'ರಾಜ್ಯದಲ್ಲಿ ಅತಿ ಹೆಚ್ಚು ಟೆಸ್ಟ್‌: WHO ಮಿತಿಗಿಂತ ಹೆಚ್ಚು ಪರೀಕ್ಷೆ!'

ಅಲ್ಲದೆ, ‘ರಾಜ್ಯ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದ ಸುಮಾರು 350 ಕೋವಿಡ್‌ ಸೋಂಕಿತ ಗರ್ಭಿಣಿಯರಿಗೆ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ನವಜಾತ ಶಿಶುಗಳಿಗೂ ಕೋವಿಡ್‌ ನೆಗೆಟಿವ್‌ ಬಂದಿದ್ದು ತಾಯಂದಿರು- ಶಿಶುಗಳು ಆರೋಗ್ಯವಾಗಿದ್ದಾರೆ’ ಎಂದು ಸುಧಾಕರ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

click me!