ದುಷ್ಕರ್ಮಿಗಳು ಬೀಳಿಸಿದ್ದು ಪುರಾತತ್ವ ಇಲಾಖೆ ನಿರ್ಮಿಸಿದ ಕಂಬಗಳು| ಕೆಡವಿದ ಕಂಬಗಳು ರಾಜರ ಕಾಲದ್ದಲ್ಲ!
ಹಂಪಿಯ ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯದ ಬಳಿ ಯುವಕರು ಕೆಡವಿದ ಸ್ತಂಭಗಳು ವಿಜಯನಗರ ಕಾಲದ್ದಲ್ಲ, ಬದಲಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ಮಿಸಿದ ಕಂಬಗಳವು ಎಂದು ಎಸ್ಪಿ ಅರುಣ್ ರಂಗರಾಜನ್ ಸ್ಪಷ್ಟಪಡಿಸಿದ್ದಾರೆ. ಜತೆಗೆ, ವಿಶ್ವಪಾರಂಪರಿಕ ತಾಣದಲ್ಲಿ ಈ ರೀತಿಯ ಕೃತ್ಯ ಎಸಗಿದ ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನೂ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಂಪಿಯ ಕಂಬಗಳನ್ನು ಬೀಳಿಸುತ್ತಿರುವ ವೀಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತಂಡವೊಂದು ಬೆಂಗಳೂರಿಗೆ ತೆರಳಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದ್ದಾರೆ.
ಜಾಲತಾಣದಲ್ಲಿ ಹರಿಬಿಟ್ಟಿರುವ ವೀಡಿಯೋ ಹಳೆಯದು. ರಾಜಕೀಯ ಅಥವಾ ಧಾರ್ಮಿಕ ಗುಂಪುಗಳು ತಮ್ಮ ಸ್ವಾರ್ಥಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿಗೆ ನೋಟಿಸ್:
ಹಂಪಿಯ ಸ್ಮಾರಕ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಪುರಾತತ್ವ ಇಲಾಖೆಯು ತನ್ನ ಸಿಬ್ಬಂದಿಗೆ ನೋಟಿಸ್ ನೀಡಲು ನಿರ್ಧರಿಸಿದೆ. ಈ ಸಂಬಂಧ ಫೆ.4ರಂದು ಸಭೆ ಕರೆಯಲಾಗಿದ್ದು, ಘಟನೆಯ ಪೂರ್ಣ ವಿವರ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಘಟನೆ ನಡೆದು ಇಷ್ಟು ದಿನವಾದರೂ ಏಕೆ ಮಾಹಿತಿ ನೀಡಿಲ್ಲ? ಸ್ಮಾರಕ ರಕ್ಷಣೆಗೆ ಸಂಬಂಧಿಸಿ ನಿಯೋಜಿಸಿದ ಸಿಬ್ಬಂದಿ ಘಟನೆ ವೇಳೆ ಹೋಗಿದ್ದೆಲ್ಲಿಗೆ? ಎಂಬಿತ್ಯಾದಿ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಕಾಳಿಮುತ್ತು ತಿಳಿಸಿದ್ದಾರೆ.