
ಬೆಂಗಳೂರು (ಡಿ.19): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸೇರಿದ 8.07 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇಡಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶದ ಒಟ್ಟು 4 ಸ್ಥಿರಾಸ್ತಿಗಳು ಸೇರಿವೆ. ಈ ಆಸ್ತಿಗಳನ್ನು ಹಗರಣದ 'ಅಪರಾಧದ ಆದಾಯ' (Proceeds of Crime) ಎಂದು ಇಡಿ ಪರಿಗಣಿಸಿದೆ. ಅಕ್ರಮವಾಗಿ ವರ್ಗಾವಣೆಯಾದ ಹಣದಿಂದಲೇ ಈ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ.
ಪ್ರಕರಣದ ತನಿಖೆ ಮುಂದುವರಿಸಿರುವ ಇಡಿ, ಅಪರಾಧದ ಉಳಿದ ಹಣದ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. "ಹಗರಣದ ಉಳಿದ ಆದಾಯವನ್ನು ಪತ್ತೆಹಚ್ಚಲು ಸದ್ಯ ಸಾಧ್ಯವಾಗುತ್ತಿಲ್ಲ. ಈ ಹಣವನ್ನು ಆರೋಪಿಗಳು ಈಗಾಗಲೇ ಬೇರೆಡೆ ವ್ಯವಸ್ಥೆ ಮಾಡಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಮರೆಮಾಚಿರಬಹುದು," ಎಂದು ಇಡಿ ತಿಳಿಸಿದೆ. ನಿಗಮದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿ, ನಂತರ 'ಶೆಲ್ ಕಂಪನಿ'ಗಳ ಮೂಲಕ ಹಂತಹಂತವಾಗಿ ಬೇರೆಡೆಗೆ ಸಾಗಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 187 ಕೋಟಿ ರೂಪಾಯಿ ಹಣವನ್ನು ಅನಧಿಕೃತವಾಗಿ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಪೈಕಿ ಸುಮಾರು 88 ಕೋಟಿ ರೂಪಾಯಿಗಳನ್ನು ನಕಲಿ ಖಾತೆಗಳ ಮೂಲಕ ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಶೆಲ್ ಕಂಪನಿಗಳಿಗೆ ವರ್ಗಾಯಿಸಿ, ನಂತರ ಅದನ್ನು ಚುನಾವಣಾ ಉದ್ದೇಶಕ್ಕೆ ಮತ್ತು ವೈಯಕ್ತಿಕ ಲಾಭಕ್ಕೆ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ವಾಲ್ಮೀಕಿ ನಿಗಮದಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಅವರು ಆತ್ಮ*ಹತ್ಯೆ ಮಾಡಿಕೊಂಡ ನಂತರ ಈ ಹಗರಣವು ಬೆಳಕಿಗೆ ಬಂದಿತ್ತು. ಅವರು ಬರೆದಿದ್ದ ಡೆತ್ ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶದಂತೆ ಹಣ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದು ರಾಜ್ಯಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿ, ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತದನಂತರ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇಡಿಯಿಂದ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯದ ಎಸ್‌ಐಟಿ ಕೂಡ ತನಿಖೆ ನಡೆಸುತ್ತಿವೆ. ಈ ನಡುವೆ ಇಡಿ ಆಸ್ತಿ ಜಪ್ತಿ ಮಾಡಿರುವುದು ನಾಗೇಂದ್ರ ಅವರಿಗೆ ಮತ್ತಷ್ಟು ಕಾನೂನು ಸಂಕಷ್ಟ ತಂದೊಡ್ಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ