
ಬೆಳಗಾವಿ (ಡಿ.19): ಸಾರ್, ಹೊರಗಡೆ ನಿಮ್ಮ ಕುರ್ಚಿ ಅಲುಗಾಡುತ್ತಿದೆ ಎಂದು ಎಲ್ಲರೂ ಮಾತಾಡುತ್ತಿದ್ದಾರೆ. ಆದರೆ ನಾವಂತೂ ನಿಮ್ಮ ಕುರ್ಚಿ ಅಲುಗಾಡಿಸುತ್ತಿಲ್ಲ, ನಾವು ನಿಮ್ಮ ಪರವಾಗಿದ್ದೇವೆ. 5 ವರ್ಷ ನೀವೇ ಸಿಎಂ ಆಗಿರಿ. ಆದ್ರೆ ಬ್ರೇಕ್ ಫಾಸ್ಟ್ ಮಿಟಿಂಗ್ ಕಥೆ ಏನಾಯ್ತು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕೇಳಿದರು. ನನ್ನ ಕುರ್ಚಿ ಅಲುಗಾಡ್ತಿಲ್ಲ, 2028ಕ್ಕೂ ನಾವೇ ಅಧಿಕಾರಕ್ಕೆ ಬರ್ತೀವಿ. ಸಂಜೆ ಬನ್ನಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಿಗೆ ಊಟಕ್ಕೆ ಆಹ್ವಾನ ನೀಡಿದರು.
ಸುವರ್ಣಸೌಧದ ಮೇಲ್ಮನೆಯಲ್ಲಿ (ವಿಧಾನಪರಿಷತ್) ಶುಕ್ರವಾರದ ಕಲಾಪವು ಅತ್ಯಂತ ಕುತೂಹಲಕಾರಿ ಮತ್ತು ಹಾಸ್ಯಭರಿತ ಚರ್ಚೆಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ ಎಂಬ ಚರ್ಚೆಯ ನಡುವೆಯೇ, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸೌಹಾರ್ದಯುತ ಸವಾಲು-ಪ್ರತಿಸವಾಲುಗಳು ನಡೆದವು.
ಸಿಎಂ ಕುರ್ಚಿ ವಿಚಾರದ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, 'ಸಾರ್, ಹೊರಗಡೆ ನಿಮ್ಮ ಕುರ್ಚಿ ಅಲುಗಾಡುತ್ತಿದೆ ಎಂದು ಎಲ್ಲರೂ ಮಾತಾಡುತ್ತಿದ್ದಾರೆ. ಆದರೆ ನಾವಂತೂ ನಿಮ್ಮ ಕುರ್ಚಿ ಅಲುಗಾಡಿಸುತ್ತಿಲ್ಲ, ನಾವು ನಿಮ್ಮ ಪರವಾಗಿದ್ದೇವೆ; ಎಂದು ಲೇವಡಿ ಮಾಡಿದರು. ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, 'ನನ್ನ ಕುರ್ಚಿ ಅಲುಗಾಡುತ್ತಿಲ್ಲ. ಅಷ್ಟಕ್ಕೂ ನಿಮ್ಮ ಯತ್ನಾಳ್ ಅವರನ್ನ ಯಾಕೆ ಪಕ್ಷದಿಂದ ಎಕ್ಸ್‌ಪೆಲ್ ಮಾಡಿದ್ರಿ?' ಎಂದು ಪ್ರಶ್ನಿಸಿದರು. ಇದು ಪಕ್ಷದ ಒಳಗಿನ ನಿರ್ಧಾರ ಎಂದು ನಾರಾಯಣಸ್ವಾಮಿ ಸಮರ್ಥಿಸಿಕೊಂಡರು. ಮುಂದುವರೆದು ಅಧಿಕಾರ ಸಿಗದಿದ್ದರೆ ಒದ್ದು ಕಿತ್ಗೋತೀವಿ ಅಂತಾ ನಾವು ಹೇಳಿದ್ವಾ? ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
ಈ ಚರ್ಚೆ ಮುಂದುವರಿದಂತೆ, 'ಈಗಲೂ ನಾವೇ ಅಧಿಕಾರದಲ್ಲಿದ್ದೇವೆ, 2028ರ ಚುನಾವಣೆಯಲ್ಲೂ ನಾವೇ ಗೆದ್ದು ಬರುತ್ತೇವೆ' ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಎನ್. ರವಿಕುಮಾರ್, '2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ಧೈರ್ಯವಿದ್ದರೆ ಈಗಲೇ ಚುನಾವಣೆಗೆ ಹೋಗೋಣ ಬನ್ನಿ' ಎಂದು ಸವಾಲು ಹಾಕಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಿಎಂ, 'ನೀವು ಎಂದಾದರೂ ಸ್ವಂತ ಬಲದ ಮೇಲೆ ಬಹುಮತ ಪಡೆದಿದ್ದೀರಾ?' ಎಂದು ಕಾಲೆಳೆದರು. ಇದಕ್ಕೆ ನಾರಾಯಣಸ್ವಾಮಿ ಅವರು ಇದೇ 2028ಕ್ಕೆ ಬಹುಮತದಿಂದ ಅಧಿಕಾರಕ್ಕೆ ಬರ್ತೇವೆ ಎಂದರು.
ಆದರೆ, 2028ರ ವರೆಗೂ ನೀವೇ ಇರೀ ಸಾರ್ ನಮಗೇನು ತೊಂದರೆ ಇಲ್ಲ ಎಂದ ಛಲವಾದಿ ನಾರಾಯಣಸ್ವಾಮಿ ಅವರು 'ಬ್ರೇಕ್‌ಫಾಸ್ಟ್ ಕಥೆ ಏನು ಸಾರ್?' ಎಂದು ಕೇಳಿದರು. ಸಿಎಂ ಸಿದ್ದರಾಮಯ್ಯ ಅವರು, 'ನಾವೇನಾದರೂ ತಿಂತೀವಿ ಸುಮ್ಮನಿರಯ್ಯ' ಎಂದು ಹಾಸ್ಯ ಮಾಡಿದರು. 'ನೀವೇನು ತಿನ್ನಲ್ವಾ? ನಿಮಗೇನು ಆರ್‌ಎಸ್‌ಎಸ್ ಪ್ರಭಾವಾನಾ? ಎಂದು ರವಿಕುಮಾರ್ ಅವರನ್ನು ಸಿಎಂ ರೇಗಿಸಿದರು. ಅಂತಿಮವಾಗಿ, 'ಸಂಜೆ ಬನ್ನಿ, ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡೋಣ' ಎಂದು ವಿಪಕ್ಷ ನಾಯಕರನ್ನು ಆಹ್ವಾನಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ