ಕುರುಬ ಸಮುದಾಯ ಎಸ್‌ಟಿ ಸೇರ್ಪಡೆಗೆ ವಿರೋಧ, ಪಾಲಿಟಿಕಲ್ ಫೈಟ್‌ಗೆ ಸಾಕ್ಷಿಯಾದ ವಾಲ್ಮೀಕಿ ಸಮುದಾಯದ ರಾಜ್ಯ ಮಟ್ಟದ ಸಭೆ!

Published : Sep 18, 2025, 06:16 PM IST
MP E Tukaram vs Golden Hanuman

ಸಾರಾಂಶ

ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ವಿಚಾರವು ಕಾಂಗ್ರೆಸ್ ಸಂಸದ ಇ. ತುಕಾರಾಂ ಮತ್ತು ಬಿಜೆಪಿ ನಾಯಕ ಬಂಗಾರು ಹನುಮಂತು ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು. 

ದಾವಣಗೆರೆ (ಸೆ.18): ಕುರುಬ ಸಮುದಾಯವನ್ನು ಎಸ್‌ಟಿ (ಪರಿಶಿಷ್ಟ ಪಂಗಡ) ವರ್ಗಕ್ಕೆ ಸೇರ್ಪಡೆಗೊಳಿಸುವ ವಿಚಾರವು ವಾಲ್ಮೀಕಿ ಸಮುದಾಯದ ರಾಜ್ಯ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಸಂಸದ ಇ. ತುಕಾರಾಂ ಮತ್ತು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.

ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡರು.

ವಾಲ್ಮೀಕಿ ಸಮುದಾಯದ ರಾಜ್ಯಮಟ್ಟದಲ್ಲಿ ಸಭೆಯಲ್ಲಿ ಏನಾಯ್ತು?

ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾಪಕ್ಕೆ ವಾಲ್ಮೀಕಿ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸಭೆಯಲ್ಲಿ ಮಾತನಾಡುತ್ತಿದ್ದ ಬಂಗಾರು ಹನುಮಂತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಚ್. ವಿಶ್ವನಾಥ್ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದರು. ಜೊತೆಗೆ ವಾಲ್ಮೀಕಿ ನಿಗಮ ಹಗರಣದ ಕುರಿತು ತೀಕ್ಷ್ಣವಾಗಿ ಟೀಕಿಸಿದರು. ಇದಕ್ಕೆ ಆಕ್ರೋಶಗೊಂಡ ಸಂಸದ ಇ. ತುಕಾರಾಂ, ರಾಜಕಾರಣ ಮಾತನಾಡಬೇಡಿ ಎಂದರು. ಈ ವೇಳೆ ಸಂಸದ ತುಕಾರಾಂ ಹಾಗೂ ಬಿಜೆಪಿ ನಾಯಕ ಬಂಗಾರು ಹನುಮಂತು ಬೆಂಬಲಿಗರ ಜಟಾಪಟಿ ನಡೆಯಿತು. ಇದರಿಂದ ಇಬ್ಬರ ಬೆಂಬಲಿಗರ ನಡುವೆ ಜಟಾಪಟಿ ತೀವ್ರಗೊಂಡಿತು. ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಸನ್ನಾನಂದ ಸ್ವಾಮೀಜಿ ಮಧ್ಯಸ್ಥಿಕೆ ವಹಿಸಿ, ಇಬ್ಬರನ್ನೂ ಸಮಾಧಾನಗೊಳಿಸಿ ಸಭೆಯನ್ನು ಮುಂದುವರಿಸಿದರು.

ವಾಲ್ಮೀಕಿ ಸಭೆ ಬಳಿಕ ಸಂಸದ ಇ. ತುಕಾರಾಂ ಹೇಳಿದ್ದೇನು?

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಇ. ತುಕಾರಾಂ, ಸಮಾಜದ ವೇದಿಕೆ ಪಕ್ಷಾತೀತವಾಗಿರಬೇಕು. ರಾಜಕಾರಣದಲ್ಲಿ ಸಂಸ್ಕಾರ ಇರಬೇಕು. ಅದನ್ನ ಗಮನಿಸಿ ವೇದಿಕೆಯಲ್ಲಿ ಮಾತನಾಡಬೇಕು. ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ, ಈಗ ಅದನ್ನು ಪ್ರಸ್ತಾಪಿಸುವುದು ಸರಿಯಲ್ಲ. ಈ ಸಭೆಯ ಉದ್ದೇಶ ಕುರುಬ ಸಮುದಾಯದ ಎಸ್‌ಟಿ ಸೇರ್ಪಡೆ ವಿರೋಧಿಸಿ ಸ್ಪಷ್ಟ ಸಂದೇಶ ನೀಡುವುದಾಗಿತ್ತು ಎಂದರು.

ಕುಂಬಳಕಾಯಿ ಕಳ್ಳ ಎಂದರೆ..ಬಂಗಾರು ಹನುಮಂತು ಕಿಡಿ

ಸಂಸದ ತುಕಾರಾಂ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಂಗಾರು ಹನುಮಂತು, ಕುಂಬಳಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿಕೊಂಡರಂತೆ, ನಾನು ಎಚ್. ವಿಶ್ವನಾಥ್ ಅವರ ಹೇಳಿಕೆಯನ್ನಷ್ಟೇ ಪ್ರಸ್ತಾಪಿಸಿದೆ. ಆದರೆ ಇವರೇಕೆ ಉರಿಬಿದ್ದಿದ್ದು? ವಾಲ್ಮೀಕಿ ನಿಗಮ ಹಗರಣದ ಹಣದಿಂದ ತುಕಾರಾಂ ಸಂಸದರಾಗಿದ್ದಾರೆ. ಅವರಷ್ಟೇ ಅಲ್ಲ ಅವರ ಮನೆಯವರು ಶಾಸಕಿಯಾಗಿರುವುದು ಕೂಡ ವಾಲ್ಮೀಕಿ ಹಗರಣದ ಹಣದಿಂದಲೇ. ಇಬ್ಬರು ಗಂಡ-ಹೆಂಡತಿ ಮೀಸಲಾತಿಯ ಮೇಲೆ ಗೆದ್ದಿದ್ದಾರೆ. ರಾಜೀನಾಮೆ ಕೊಟ್ಟು ವೇದಿಕೆಯಲ್ಲಿ ಮಾತನಾಡಲಿ. ಸಮಾಜ ಬಗ್ಗೆ ನಿಜವಾಗಲೂ ಕಳಕಳಿ ಇದ್ರೆ ಮೊದಲು ತುಕಾರಾಂ ರಾಜೀನಾಮೆ ಕೊಟ್ಟು ಬರಲಿ. ಸಂಸದ ತುಕಾರಾಂಗೆ ಮಾನ ಮರ್ಯಾದೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಕ್ರಿಶ್ಚಿಯನ್ ಅಂತಾ ಸೇರ್ಪಡೆ ಮಾಡಲು ಸಿದ್ದರಾಮಯ್ಯ ಯಾರು?

ಈ ವೇಳೆ ವಾಲ್ಮೀಕಿ ಕ್ರಿಶ್ಚಿಯನ್ ಎಂದು ಬರೆದಿರುವ ಕುರಿತು ಸಿಎಂ ಸಿದ್ದರಾಮಯ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಂಗಾರು ಹನಮಂತು, ವಾಲ್ಮೀಕಿಯನ್ನು ಕ್ರಿಶ್ಚಿಯನ್ ಎಂದು ಸೇರ್ಪಡೆ ಮಾಡಲು ಸಿದ್ದರಾಮಯ್ಯ ಯಾರು? ಅಧಿಕಾರ ಉಳಿಸಿಕೊಳ್ಳಲು ಜಾತಿಗಣತಿಯನ್ನು ಸೃಷ್ಟಿಸಿದ್ದಾರೆ. ಕುರುಬ ಸಮುದಾಯದ ಎಸ್‌ಟಿ ಸೇರ್ಪಡೆ ವಿಚಾರವು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದು, ವಾಲ್ಮೀಕಿ ಸಮುದಾಯದ ಈ ಸಭೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌