
ದಕ್ಷಿಣ ಕನ್ನಡ (ಸೆ.18): ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಅಸ್ಥಿಪಂಜರ ಇದೀಗ ಹೊಸ ತಿರುವು ಪಡೆದಿದೆ. ಸ್ಥಳದಲ್ಲಿ ಸಿಕ್ಕ ಗುರುತಿನ ಚೀಟಿಯಿಂದಾಗಿ ಇದು ಕೊಡಗು ಮೂಲದ, ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಇರಬಹುದು ಎಂದು ಶಂಕಿಸಲಾಗಿದೆ.
ಧರ್ಮಸ್ಥಳದ ಬಳಿಯ ಬಂಗ್ಲೆಗುಡ್ಡದಲ್ಲಿ ತಲೆಬುರುಡೆ ಮತ್ತು ಅಸ್ಥಿಪಂಜರ ಸಿಕ್ಕ ಸ್ಥಳದಲ್ಲಿ ಪೊಲೀಸರಿಗೆ ಒಂದು ಹಳೆಯ ಗುರುತಿನ ಚೀಟಿ ದೊರಕಿದೆ. ಆ ಗುರುತಿನ ಚೀಟಿ ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (U.B. Ayyappa) ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಅಯ್ಯಪ್ಪ ಅವರು ಏಳು ವರ್ಷಗಳ ಹಿಂದೆ ಮೈಸೂರಿಗೆ ಚಿಕಿತ್ಸೆಗೆಂದು ಬಂದವರು ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಕೊಡಗಿನ ಕುಟ್ಟ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು. ಆದರೆ, ಇಷ್ಟು ವರ್ಷಗಳಾದರೂ ಅಯ್ಯಪ್ಪ ಅವರ ಸುಳಿವು ಸಿಕ್ಕಿರಲಿಲ್ಲ.
ಈಗ ಸಿಕ್ಕಿರುವ ಗುರುತಿನ ಚೀಟಿ ಮತ್ತು ಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರ, ನಾಪತ್ತೆಯಾಗಿದ್ದ ಅಯ್ಯಪ್ಪ ಅವರದ್ದೇ ಇರಬಹುದು ಎಂಬ ಬಲವಾದ ಅನುಮಾನ ಮೂಡಿಸಿದೆ. ಪೊಲೀಸರು ಅಸ್ಥಿಪಂಜರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದು, ಗುರುತಿನ ಚೀಟಿ ಮತ್ತು ಅಸ್ಥಿಪಂಜರದ ಡಿಎನ್‌ಎ ಪರೀಕ್ಷೆ ಮೂಲಕ ಇದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಪರೀಕ್ಷೆಯ ವರದಿ ಬಂದ ನಂತರವೇ ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬುದು ತಿಳಿಯಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ದಳ (ಎಸ್ಐಟಿ) ಇಂದು ಎರಡನೇ ದಿನದ ಕಾರ್ಯಾಚರಣೆಯನ್ನು ಮುಗಿಸಿದೆ. ಒಟ್ಟು ಏಳು ತಲೆಬುರುಡೆಗಳು ಮತ್ತು ಅಸ್ಥಿಪಂಜರಗಳನ್ನು ವಶಕ್ಕೆ ಪಡೆದಿರುವ ಎಸ್ಐಟಿ ತಂಡ, ಈ ಭಾಗದಲ್ಲಿ ಶೋಧ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಬೆಳಿಗ್ಗೆಯಿಂದ ಬಂಗ್ಲೆಗುಡ್ಡೆಗೆ ಆಗಮಿಸಿದ ಎಸ್ಐಟಿ ತಂಡವು ಮೂರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿತು. ಈ ವೇಳೆ, ಹೆಚ್ಚುವರಿಯಾಗಿ ಎರಡು ತಲೆಬುರುಡೆಗಳು ಮತ್ತು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ತಂಡವು ಅವಶೇಷಗಳನ್ನು ಪ್ಲಾಸ್ಟಿಕ್ ಡಬ್ಬ ಮತ್ತು ಪೈಪ್‌ಗಳಲ್ಲಿ ತುಂಬಿಸಿಕೊಂಡು ಕೊಂಡೊಯ್ದಿದೆ. ಅಲ್ಲದೆ, ಸ್ಥಳದಲ್ಲಿ ಸಿಕ್ಕಿದ ಕೆಲವು ವಸ್ತುಗಳನ್ನು, ಒಂದು ವಾಕಿಂಗ್ ಸ್ಟಿಕ್ ಅನ್ನು ಸಹ ವಶಪಡಿಸಿಕೊಂಡಿದೆ. ಈ ವಸ್ತುಗಳು ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡುವ ಸಾಧ್ಯತೆ ಇದೆ.
ಕಾರ್ಯಾಚರಣೆ ಅಂತ್ಯ:
ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯದಲ್ಲಿ ಒಟ್ಟು ಏಳು ಮಾನವ ತಲೆಬುರುಡೆಗಳು ಮತ್ತು ಅಸ್ಥಿಪಂಜರಗಳು ಪತ್ತೆಯಾಗಿವೆ. ಮೊದಲ ದಿನ 5 ತಲೆಬುರುಡೆಗಳು ಸಿಕ್ಕಿದ್ದವು, ಇಂದು 2 ತಲೆಬುರುಡೆಗಳು ಸಿಕ್ಕಿವೆ. ತನಿಖೆ ಮುಕ್ತಾಯಗೊಳಿಸಿದ ಎಸ್ಐಟಿ ತಂಡವು ಎಸ್ಐಟಿ ಕಚೇರಿಯತ್ತ ತೆರಳಿದ್ದು, ಮುಂದಿನ ಹಂತದ ತನಿಖೆ ಪ್ರಾರಂಭಿಸಲಿದೆ. ಈ ಮಾನವ ಅಸ್ಥಿಪಂಜರಗಳು ಯಾರಿಗೆ ಸೇರಿದ್ದು, ಅವು ಇಲ್ಲಿಗೆ ಹೇಗೆ ಬಂದವು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದು ಕೊಲೆಯೋ ಅಥವಾ ಅಕ್ರಮ ಚಟುವಟಿಕೆಗಳ ಭಾಗವೋ ಎಂಬುದನ್ನು ವಿಧಿವಿಜ್ಞಾನ ವರದಿಗಳು ಸ್ಪಷ್ಟಪಡಿಸಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ