ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರ ಆಪ್ತರ ಮನೆಗಳ ಮೇಲೆ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಬಳ್ಳಾರಿ (ಆ.29): ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರ ಆಪ್ತರ ಮನೆಗಳ ಮೇಲೆ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಮಂಗಳವಾರ ಸಂಜೆಯೇ ಬಳ್ಳಾರಿಗೆ ಬಂದಿಳಿದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದರು. ಇಲ್ಲಿನ ಕೌಲ್‌ಬಜಾರ್ (ರೇಡಿಯೋ ಪಾರ್ಕ್) ಪ್ರದೇಶದಲ್ಲಿರುವ ಶಾಸಕ ಬಿ.ನಾಗೇಂದ್ರ ಅವರ ಹತ್ತಿರದ ಸಂಬಂಧಿ ಟಿ.ಜಿ.ಎರಿಸ್ವಾಮಿ, ಆಪ್ತ ಸಹಾಯಕ ವಿಜಯಕುಮಾರ್, ವೀರಣ್ಣ ಹಾಗೂ ಅಲ್ಲಾಬಕ್ಷ್ ಅವರ ಮನೆಗಳ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ದಾಳಿಯಲ್ಲಿ 20ಕ್ಕೂ ಹೆಚ್ಚು ಇ.ಡಿ. ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಗುರುವಾರ ಸಂಜೆವರೆಗೂ ಪರಿಶೀಲನಾ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇ.ಡಿ. ಜುಲೈ 12ರಂದು ಬಂಧಿಸಿ ವಿಚಾರಣಗೆ ಒಳಪಡಿಸಿತ್ತು. ಈ ಪ್ರಕರಣದಲ್ಲಿ ನಾಗೇಂದ್ರ ಇನ್ನೂ ಜೈಲಿನಲ್ಲಿದ್ದಾರೆ.
ಜೈಲಲ್ಲಿ ರಾಜಾಥಿತ್ಯ: ನಟ ದರ್ಶನ್ ಸೇರಿ ಐವರನ್ನು ಪ್ರಶ್ನಿಸಿದ ಪೊಲೀಸರು
ನೆಕ್ಕಂಟಿ ಮಾವನಿಗೆ ಇ.ಡಿ. ನೋಟಿಸ್: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಅವರ ಸಹೋದರ ಮಾವ ವೆಂಕಟೇಶ್ವರ ರಾವ್ ಅವರಿಗೆ ಜಾರಿ ನಿರ್ದೇಶನಾಲಯ(ಇ.ಡಿ.)ಅಧಿಕಾರಿಗಳು ನೋಟಿಸ್ ನೀಡಿದ್ದಾರೆಂದು ಹೇಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಜತೆ ಆರ್ಥಿಕ ವ್ಯವಹಾರ ನಡೆಸಿರುವ ಅನೇಕರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿರುವ ಇ.ಡಿ. ಅಧಿಕಾರಿಗಳು, ಬಳ್ಳಾರಿ ತಾಲೂಕಿನ ಕೃಷ್ಣಾನಗರ ಕ್ಯಾಂಪ್‌ನಲ್ಲಿರುವ ವೆಂಕಟೇಶ್ವರ ರಾವ್ ಅವರಿಗೆ ನೋಟಿಸ್ ನೀಡಿದ್ದಾರೆ.
ಹಣ ವರ್ಗಾವಣೆ ಪ್ರಕರಣದಲ್ಲಿ ಕೃಷ್ಣಾನಗರ ಕ್ಯಾಂಪ್‌ನಲ್ಲಿರುವ ನೆಕ್ಕಂಟಿ ನಾಗರಾಜ್ ಅವರ ಆಪ್ತರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈಗಾಗಲೇ ವಿಚಾರಣೆ ಎದುರಿಸಿರುವ ಇದೇ ಕ್ಯಾಂಪ್‌ನ ಶ್ರೀನಿವಾಸ್ ಎಂಬುವರು ಹಣ ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಸೋಮವಾರ ಬಳ್ಳಾರಿಗೆ ಬಂದಿದ್ದ ಇ.ಡಿ. ಅಧಿಕಾರಿಗಳು ಕೃಷ್ಣಾನಗರ ಕ್ಯಾಂಪ್, ಮಿಂಚೇರಿ ಕ್ಯಾಂಪ್ ಹಾಗೂ ಭಾಗ್ಯನಗರ ಕ್ಯಾಂಪ್‌ನ ಹಲವರಿಗೆ ನೋಟಿಸ್ ನೀಡಿದ್ದಾರೆಂದು ತಿಳಿದುಬಂದಿದೆ.
ಆ.30 ಮತ್ತು 31ರಂದು ಹೋಟೆಲ್ ಗುಣಮಟ್ಟ ತಪಾಸಣೆ: ಸಚಿವ ದಿನೇಶ್ ಗುಂಡೂರಾವ್
ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಬಳ್ಳಾರಿ ಜಿಲ್ಲೆಯಲ್ಲಿರುವ ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆಂಬ ಸುಳಿವು ಪಡೆದ ಇ.ಡಿ.ಅಧಿಕಾರಿಗಳು, ಈಗಾಗಲೇ 10ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.