ಜೈಲಿನಲ್ಲಿ ರಾಜಾತಿಥ್ಯ ಪಡೆದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು (ಆ.29): ಜೈಲಿನಲ್ಲಿ ರಾಜಾತಿಥ್ಯ ಪಡೆದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ. ನಟ ದರ್ಶನ್, ಅವರ ಆಪ್ತ ನಾಗರಾಜ, ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗರಾಜ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಹಾಗೂ ಧರ್ಮನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್ ಅವರ ಸೆಲ್‌ನಲ್ಲಿ ಮೊಬೈಲ್ ಹಾಗೂ ಸಿಗರೇಟ್ ಪತ್ತೆಯಾಗಿಲ್ಲ.
ಹೀಗಾಗಿ ಮೊಬೈಲ್ ಸಂಬಂಧ ಗುರುವಾರ ಕೂಡ ಅವರನ್ನು ಮತ್ತೆ ಪೊಲೀಸರು ವಿಚಾರಣೆ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ರೌಡಿಗಳ ಜತೆ ಸಿಗರೇಟ್ ಸೇದುತ್ತ ಕುರ್ಚಿಯಲ್ಲಿ ದರ್ಶನ್ ಕುಳಿತಿದ್ದ ಪೋಟೋ ವೈರಲ್ ಆಗಿತ್ತು. ಆ ಪೋಟೋ ತೆಗೆದ ಸ್ಥಳವನ್ನು ಪೊಲೀಸರು ಪರಿಶೀಲಿಸಿದ್ದು, ದರ್ಶನ್ ಹಾಗೂ ಅವರೊಂದಿಗೆ ಇದ್ದ ರೌಡಿಗಳನ್ನು ಕರೆದೊಯ್ದು ಮಹಜರ್ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಕೋರ್ಟ್ ಅನುಮತಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ವಿಚಾರಣೆಗೆ ನ್ಯಾಯಾಲಯವು ಪೊಲೀಸರಿಗೆ ಮಂಗಳವಾರ ಅನುಮತಿ ನೀಡಿದೆ. ಈ ಅನುಮತಿ ಹಿನ್ನಲೆಯಲ್ಲಿ ದರ್ಶನ್, ಅವರ ಆಪ್ತ ನಾಗರಾಜ, ಕುಖ್ಯಾತ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಹಾಗೂ ಧರ್ಮನನ್ನು ಪೊಲೀಸರು ಪ್ರಶ್ನಿಸಿ ಹೇಳಿಕೆ ಪಡೆಯಲಿದ್ದಾರೆ. ಇದೇ ಪ್ರಕರಣ ಕುರಿತು ಕಾರಾಗೃಹದ ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆ.30 ಮತ್ತು 31ರಂದು ಹೋಟೆಲ್ ಗುಣಮಟ್ಟ ತಪಾಸಣೆ: ಸಚಿವ ದಿನೇಶ್ ಗುಂಡೂರಾವ್
ವಿಶೇಷ ಸೌಲಭ್ಯ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಆ ಎರಡು ಪ್ರಕರಣಗಳಲ್ಲಿ ದರ್ಶನ್ ಎ1 ಆಗಿದ್ದಾರೆ. ಜೈಲಿನೊಳಗೆ ಕೃತ್ಯ ನಡೆದಿರುವ ಕಾರಣ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ವಿಚಾರಣೆಗೆ ನ್ಯಾಯಾಲಯದ ಪೂರ್ವಾನುಮತಿ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಅನುಮತಿ ಕೋರಿ ಪೊಲೀಸರು ಮನವಿ ಮಾಡಿದ್ದರು. ಈ ಮನವಿಗೆ ನ್ಯಾಯಾಲಯವು ಸಮತ್ಮಿಸಿದೆ.