ಎಲ್ಲಾ ವಿದ್ಯಾರ್ಥಿಗಳಿಗೂ 10 ದಿನಗಳಲ್ಲಿ ಲಸಿಕೆ: ಡಿಸಿಎಂ ಅಶ್ವತ್ಥ್‌

By Kannadaprabha News  |  First Published Jun 30, 2021, 8:01 AM IST

* ಕಾಲೇಜು ಪ್ರಾಂಶುಪಾಲರಿಗೆ ಜವಾಬ್ದಾರಿ
* ರಾಜ್ಯದಲ್ಲಿ ಈಗ 58 ಸಾವಿರ ಆಕ್ಸಿಜನ್‌ ಬೆಡ್‌ಗಳಿದ್ದು, ಈ ಪ್ರಮಾಣ 84 ಸಾವಿರಕ್ಕೆ ಹೆಚ್ಚಿಸಲು ಕ್ರಮ
* ಎರಡನೇ ಅಲೆ ದೃಷ್ಟಿಯಲ್ಲಿಟ್ಟುಕೊಂಡು ಮೂರನೇ ಅಲೆಗೆ ಸನ್ನದ್ಧ


ಬೆಂಗಳೂರು(ಜೂ.30): ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೂ ಹತ್ತು ದಿನದಲ್ಲಿ ಕೋವಿಡ್‌ ನೀಡಲಾಗುವುದು, ಈ ಸಂಬಂಧ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ರಾಜ್ಯದಲ್ಲಿ ಆಮ್ಲಜನಕ ವ್ಯವಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಸಂಬಂಧ ಮಂಗಳವಾರ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. 
ಹತ್ತು ದಿನದಲ್ಲಿ ಎಂಜಿನಿಯರಿಂಗ್‌, ಮೆಡಿಕಲ್‌, ಪ್ಯಾರಾ ಮೆಡಿಕ,ಲ್‌, ಡಿಪ್ಲೊಮೋ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್‌ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಸೋಮವಾರ 94 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು.

Latest Videos

undefined

ಆಗಸ್ಟ್‌ ತಿಂಗಳೊಳಗೆ 360 ಘಟಕಗಳಿಂದ ಸಂಗ್ರಹ ಸಾಮರ್ಥ್ಯವನ್ನು ಒಟ್ಟು 2,800 ಟನ್‌ಗೆ ಹೆಚ್ಚಿಸಲಾಗುವುದು. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 1806 ಮೆಟ್ರಿಕ್‌ ಟನ್‌ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 500 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಹೆಚ್ಚುವರಿ ಸಂಗ್ರಹ ಮಾಡುವ ಗುರಿ ಇದೆ. ಇದಲ್ಲದೆ ಬೇರೆ ಮೂಲಗಳಿಂದಲೂ ಆಮ್ಲಜನಕ ಪೂರೈಕೆಯಾಗಲಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ: ಸಚಿವ ಸುಧಾಕರ್‌ ಹೇಳಿದ್ದಿಷ್ಟು

ಜಾಗತಿಕ ಟೆಂಡರ್‌: 

ರಾಜ್ಯದಲ್ಲಿ ಈಗ 58 ಸಾವಿರ ಆಕ್ಸಿಜನ್‌ ಬೆಡ್‌ಗಳಿದ್ದು, ಈ ಪ್ರಮಾಣವನ್ನು 84 ಸಾವಿರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇಲೆ ಅಳವಡಿಸಲಾಗುತ್ತಿದೆ. ಅರಿವಳಿಕೆ ತಜ್ಞ ಡಾ.ರಾಘವೇಂದ್ರ ನೇತೃತ್ವದ ಆಮ್ಲಜನಕ ನಿರ್ವಹಣೆ ಸಮಿತಿ ವರದಿ ನೀಡಿದ್ದು ಆ ಪ್ರಕಾರ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಎರಡನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೇ ಅಲೆಗೆ ಸನ್ನದ್ಧವಾಗಿದ್ದೇವೆ. ಆಮ್ಲಜನಕ ಕೊರತೆ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಯೋಜನೆಗೆ ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ನಂತರ ಜಾಗತಿಕ ಟೆಂಡರ್‌ ಕರೆಯಲಾಗುವುದು. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲೇ ಆಕ್ಸಿಜನ್‌ ಸಂಗ್ರಹ ಘಟಕಗಳಿಲ್ಲ. ಕೂಡಲೇ ಅಳವಡಿಸಿಕೊಳ್ಳಿ ಎಂದು ನೋಟಿಸ್‌ ಸಹ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಕ್ತರ್‌, ಲಸಿಕೆ ಉಸ್ತುವಾರಿ ಅಧಿಕಾರಿ ವಂದಿತಾ ಶರ್ಮಾ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ ಕುಮಾರ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್‌ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
 

click me!