ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಹಗರಣ ಮತ್ತು ಮುಸ್ಲಿಂ ಮೀಸಲಾತಿ ವಿರೋಧಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಈ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು 6 ತಿಂಗಳವರೆಗೆ ಅಮಾನತು ಮಾಡಲಾಗಿದೆ.
ವಿಧಾನಸಭೆ (ಮಾ.22): ಹನಿಟ್ರ್ಯಾಪ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಹಾಗೂ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಜೆಟ್ ಘೋಷಣೆ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಶುಕ್ರವಾರ ಭಾರಿ ಗದ್ದಲ ಸೃಷ್ಟಿಸಿದ್ದಲ್ಲದೆ, ಸ್ಪೀಕರ್ ಅವರ ಪೋಡಿಯಂ ಮೇಲೇರಿ ಕಾಗದಗಳನ್ನು ಸ್ಪೀಕರ್ ಮುಖಕ್ಕೆ ತೂರಿ ಕೋಲಾಹಲಕರ ಸನ್ನಿವೇಶ ಸೃಷ್ಟಿ ಮಾಡಿದರು.
ಇದರ ಪರಿಣಾಮ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸದನದಲ್ಲಿ ದುರ್ವರ್ತನೆ ಆರೋಪದಡಿ ಬಿಜೆಪಿಯ 18 ಸದಸ್ಯರನ್ನು ಆರು ತಿಂಗಳ ಸುದೀರ್ಘ ಅವಧಿವರೆಗೆ ಅಮಾನತು ಮಾಡಿ ಸಭಾಧ್ಯಕ್ಷ ಯು.ಟಿ. ಖಾದರ್ ರೂಲಿಂಗ್ ನೀಡಿದರು. ರೂಲಿಂಗ್ ನಂತರವೂ ಶಾಸಕರು ಸದನದಲ್ಲೇ ಉಳಿದ ಕಾರಣ ಮಾರ್ಷಲ್‌ಗಳು ಎಲ್ಲ 18 ಶಾಸಕರನ್ನು ಸದನದಿಂದ ಹೊರಗೆ ಹೊತ್ತೊಯ್ದ ಘಟನೆಗೂ ವಿಧಾನಸಭೆ ಸಾಕ್ಷಿಯಾಯ್ತು.
ಶುರುವಾಗಿದ್ದು ಹೀಗೆ:
ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಗ್ಗೆ ಉತ್ತರಿಸಲಾರಂಭಿಸಿದ ಕೂಡಲೇ, ಬಿಜೆಪಿ-ಜೆಡಿಎಸ್ ಶಾಸಕರು ಸಚಿವ ಕೆ.ಎನ್. ರಾಜಣ್ಣ ಮೇಲಿನ ಹನಿಟ್ರ್ಯಾಪ್ ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಪ್ರಕರಣ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಆದರೂ, ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅಲ್ಲದೆ, ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ಅಡ್ಡಿಗೆ ಕ್ಯಾರೆ ಎನ್ನದ ಸಿದ್ದರಾಮಯ್ಯ, ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವುದನ್ನು ಮುಂದುವರಿಸಿದರು.
ಲಿಖಿತ ಉತ್ತರ ಓದಿದ ಬಳಿಕ 2025-26ನೇ ಸಾಲಿನ ಬಜೆಟ್‌ಗೆ ಅಂಗೀಕಾರ ನೀಡುವಂತೆ ಸದನಕ್ಕೆ ಸಿದ್ದರಾಮಯ್ಯ ಮನವಿ ಸಲ್ಲಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ 2025-26ನೇ ಸಾಲಿನ ಬಜೆಟ್‌ನ ಹಣಕಾಸು ಮಸೂದೆ ಅಂಗೀಕರಿಸಲು ಮುಂದಾದಾಗ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುತ್ತಿದೆ. ಇದು ರಾಜ್ಯಕ್ಕೆ ಮಾಡಿರುವ ದ್ರೋಹ. ಈ ಅಪರಾಧವನ್ನು ಜನ ಕ್ಷಮಿಸುವುದಿಲ್ಲ. ಸಚಿವರು ಹನಿಟ್ರ್ಯಾಪ್ ಬಗ್ಗೆ ಆರೋಪ ಮಾಡಿದ್ದರೂ ಸರ್ಕಾರ ಅದನ್ನು ಕಡೆಗಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ಗದ್ದಲದ ನಡುವೆಯೇ ಧನವಿನಿಯೋಗ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಇದನ್ನೂ ಓದಿ: ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!
ಮಾರ್ಷಲ್‌ಗಳನ್ನು ತಡೆದ ಸ್ಪೀಕರ್:
ಇದರಿಂದ ಮತ್ತಷ್ಟು ಸಿಟ್ಟಾದ ಬಿಜೆಪಿ ಶಾಸಕರು ಕಾಗದ ಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದ ಕಡೆಗೆ ತೂರಲಾರಂಭಿಸಿದರು. ನಂತರ ಶಾಸಕರು ಸಭಾಧ್ಯಕ್ಷರ ಪೀಠದ ಬಳಿ ಧಾವಿಸಿ, ಅಲ್ಲಿ ನಿಂತುಕೊಂಡು ಕಾಗದವನ್ನು ಹರಿದು ತೂರಿ, ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಮಾರ್ಷಲ್‌ಗಳು ಸ್ಪೀಕರ್ ರಕ್ಷಣೆಗೆ ಬಂದರಾದರೂ, ಶಾಸಕರನ್ನು ತಡೆಯದಂತೆ ಸ್ಪೀಕರ್ ಸೂಚಿಸಿದರು. ಬಿಜೆಪಿಯ ಸಿ.ಕೆ. ರಾಮಮೂರ್ತಿ, ದೊಡ್ಡನಗೌಡ ಪಾಟೀಲ್, ಮಹೇಶ್ ಟೆಂಗಿನಕಾಯಿ ಸೇರಿದಂತೆ ಇನ್ನಿತರ ಶಾಸಕರು ಸಭಾಧ್ಯಕ್ಷರ ಬಳಿಯಲ್ಲಿಯೇ ನಿಂತು ಘೋಷಣೆ ಕೂಗುತ್ತಿದ್ದರು.
ಕಲಾಪ ಮುಂದೂಡಿದ ಸ್ಪೀಕರ್:
ಶಾಸಕರ ವರ್ತನೆ ಗಮನಿಸಿದ ಸಿದ್ದರಾಮಯ್ಯ, ಸಭಾಧ್ಯಕ್ಷರ ಪೀಠದಿಂದ ಕೆಳಗಿಳಿಯುವಂತೆ ಶಾಸಕರಿಗೆ ಹಲವು ಬಾರಿ ಸೂಚಿಸಿದರು. ಕೊನೆಗೆ ವಿಧಾನಸಭೆ ಜಂಟಿ ಕಾಯದರ್ಶಿಗಳು ಸಭಾಧ್ಯಕ್ಷರ ಬಳಿ ಬಂದು ಶಾಸಕರನ್ನು ಕೆಳಗಿಳಿಸುವಂತೆ ಸಲಹೆ ನೀಡಿದರು. ಆಗ ಸಭಾಧ್ಯಕ್ಷರು ಕೆಳಗೆ ಹೋಗುವಂತೆ ಶಾಸಕರಿಗೆ ಸೂಚಿಸಿದರಾದರೂ, ಯಾರೂ ಅಲ್ಲಿಂದ ಕದಲಿಲ್ಲ. ಗೊಂದಲದ ವಾತಾವರಣ ಮುಂದುವರಿದ ಕಾರಣ ಸಭಾಧ್ಯಕ್ಷರು 10 ನಿಮಿಷಗಳ ಕಾಲ ಕಲಾಪ ಮುಂದೂಡುವುದಾಗಿ ಪ್ರಕಟಿಸಿದರು. ಆದರೆ, ಬಾಕಿ ಇರುವ ವಿಧೇಯಕಗಳ ಅಂಗೀಕಾರ ಪ್ರಕ್ರಿಯೆ ಪೂರ್ಣಗೊಳಿಸಿ ನಂತರ ಕಲಾಪ ಮುಂದೂಡುವಂತೆ ಮುಖ್ಯಮಂತ್ರಿ ಮತ್ತು ಸಚಿವರು ಸಲಹೆ ನೀಡಿದರು. ಆ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದುವರಿಸಲಾಯಿತು.
ಸಿಎಂಗೆ ಶಾಸಕರ ಕಾವಲು:
ಬಿಜೆಪಿ ಶಾಸಕರು ನಡೆಸುತ್ತಿದ್ದ ಗದ್ದಲದ ನಡುವೆ, ಅವರು ತೂರಿದ ಕಾಗದಗಳಲ್ಲಿ ಕೆಲವು ಮುಖ್ಯಮಂತ್ರಿಗಳಿಗೆ ತಗುಲಿದವು. ಆಗ ಸಚಿವ ಬೈರತಿ ಸುರೇಶ್, ಶಾಸಕರಾದ ರಂಗನಾಥ್, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ಮುಖ್ಯಮಂತ್ರಿಯವರ ಸುತ್ತಲೂ ಕಾವಲಾಗಿ ನಿಂತರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಬೈರತಿ ಸುರೇಶ್ ಸಣ್ಣ ಪುಸ್ತಕವೊಂದನ್ನು ವಿಪಕ್ಷ ಸದಸ್ಯರೆಡೆಗೆ ಎಸೆದು ಆಕ್ರೋಶ ಹೊರಹಾಕಿದರು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಮುಂದೂಡಿದರು.
18 ಶಾಸಕರು 6 ತಿಂಗಳು ಸದನದಿಂದ ಅಮಾನತು
ಮಧ್ಯಾಹ್ನ ಸದನ ಮತ್ತೆ ಸಮಾವೇಶಗೊಂಡಾಗ ಕಾನೂನು ಸಚಿವ ಎಚ್.ಕೆ. ಪಾಟೀಲ್, ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದರು. ಅದಕ್ಕೆ ಸ್ಪೀಕರ್, ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ 18 ಶಾಸಕರು ಸದನಕ್ಕೆ ಬಾರದಂತೆ ತಡೆಹಿಡಿದು, ಅಮಾನತುಗೊಳಿಸಲಾಗಿರುತ್ತದೆ ಎಂದು ರೂಲಿಂಗ್ ನೀಡಿದರು.
ಅಮಾನತಾದ ಶಾಸಕರು
ಪ್ರತಿಪಕ್ಷ ಬಿಜೆಪಿಯ ಸಚೇತಕ ದೊಡ್ಡನಗೌಡ ಪಾಟೀಲ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್, ಬಿ.ಎ. ಬಸವರಾಜು (ಬೈರತಿ), ಎಂ.ಆರ್. ಪಾಟೀಲ್, ಚನ್ನಬಸಪ್ಪ (ಚೆನ್ನಿ), ಬಿ. ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್, ಶರಣು ಸಲಗರ, ಡಾ. ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಸುವರ್ಣ, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಧೀರಜ್ ಮುನಿರಾಜು, ಡಾ. ಚಂದ್ರು ಲಮಾಣಿ, ಮುನಿರತ್ನ, ಬಸವರಾಜ್ ಮತ್ತಿಮೂಡ್
ಶಾಸಕರನ್ನು ಹೊತ್ತೊಯ್ದ ಮಾರ್ಷಲ್‌ಗಳು
ಶಾಸಕರ ಅಮಾನತು ಪ್ರಕಟಿಸಿ ಸ್ಪೀಕರ್ ಯು.ಟಿ. ಖಾದರ್ ಸದನವನ್ನು 10 ನಿಮಿಷಗಳವರೆಗೆ ಮುಂದೂಡಿದರು. ಈ ವೇಳೆ ಅಮಾನತಾದ ಶಾಸಕರು ಸದನದಿಂದ ಹೊರ ಹೋಗುವಂತೆಯೂ ಸೂಚಿಸಿದರು. ಆದರೂ, ಶಾಸಕರು ಸದನದಿಂದ ಹೊರ ಹೋಗದ ಕಾರಣ, ಮಾರ್ಷಲ್‌ಗಳು ಒಬ್ಬೊಬ್ಬರನ್ನೇ ವಿಧಾನಸಭೆ ಸಭಾಂಗಣದಿಂದ ಹೊತ್ತೊಯ್ದರು.
ಸಭಾಧ್ಯಕ್ಷರ ಪೀಠದ ಮಹತ್ವ, ಪಾವಿತ್ರ್ಯತೆಯನ್ನು ಎಲ್ಲರೂ ಕಾಪಾಡಬೇಕು. ಪೀಠದ ಗೌರವಕ್ಕೆ ಧಕ್ಕೆ ತರಬಾರದು. ಪೀಠಕ್ಕಿಂತ ನಾವ್ಯಾರು ದೊಡ್ಡವರಲ್ಲ. ನಾವೆಲ್ಲರೂ ಬದ್ಧತೆ, ಶಾಂತತೆಯಿಂದ ನಡೆದುಕೊಳ್ಳುವುದು ಮುಖ್ಯ. ಆದರೆ, ಸಭಾಧ್ಯಕ್ಷರ ಪೀಠಕ್ಕೆ ಧಾವಿಸಿ ಅಗೌರವ ತೋರಿದ ಶಾಸಕರನ್ನು ಅಮಾನತು ಮಾಡಲಾಗಿದೆ. ಶಾಸಕರ ವರ್ತನೆಯನ್ನು ಯು.ಟಿ. ಖಾದರ್ ಸಹಿಸಬಹುದು, ಆದರೆ, ಸಭಾಧ್ಯಕ್ಷರ ಪೀಠ ಸಹಿಸುವುದಿಲ್ಲ.
-ಯು.ಟಿ. ಖಾದರ್ ಸಭಾಧ್ಯಕ್ಷ
ಮದರಸಾ ಶಿಕ್ಷಣ ವಿವಾದ, ಸದನದಲ್ಲಿ ಕೋಲಾಹಲ, ಆಕ್ರೋಶ.. ಯತ್ನಾಳ್ ಹೇಳಿದ್ದೇನು?
ಅಮಾನತು ಅವಧಿಯಲ್ಲಿ ಏನೆಲ್ಲ ನಿಷಿದ್ಧ?
ಅಮಾನತಾದ ಶಾಸಕರು ಮುಂದಿನ 6 ತಿಂಗಳವರೆಗೆ ವಿಧಾನಸಭೆ ಸಭಾಂಗಣ, ಲಾಬಿ, ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ. ಶಾಸಕರು ಸದಸ್ಯರಾಗಿರುವ ವಿಧಾನಮಂಡಲದ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಭಾಗವಹಿಸುವಂತಿಲ್ಲ. ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ. ಅಮಾನತಿನ ಅವಧಿಯಲ್ಲಿ ಅವರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರು ಮತದಾನ ಮಾಡುವಂತಿಲ್ಲ. ಅಲ್ಲದೆ, ಈ ಅವಧಿಯಲ್ಲಿ ಅವರುಗಳು ಅರ್ಹರಿರುವುದಿಲ್ಲ. ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿಲ್ಲ.ಚಳಿಗಾಲದ ಅಧಿವೇಶನಕ್ಕೆ ಅಮಾನತು ಶಾಸಕರು18 ಶಾಸಕರು 6 ತಿಂಗಳು ಅಮಾನಾತಾದ ಕಾರಣದಿಂದಾಗಿ ಮಳೆಗಾಲದ ಅಧಿವೇಶನಕ್ಕೆ ಅವರು ಪಾಲ್ಗೊಳ್ಳುವಂತಿಲ್ಲ. ಅವರುಗಳು ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅರ್ಹರಾಗಲಿದ್ದಾರೆ.