
ಯಾದಗಿರಿ (ಫೆ.25): ಜಿಲ್ಲೆಯ ಶಹಾಪುರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿನ ಶಾಲೆಯಲ್ಲಿನ ದಲಿತ ಮಕ್ಕಳು ಬಿಸಿಯೂಟ ಮಾಡಿದ್ದ ತಟ್ಟೆಗಳನ್ನು ತೊಳೆಯಲು ನಿರಾಕರಿಸಿದ್ದ ಅಡುಗೆ ಸಹಾಯಕಿಯರ ವರ್ತನೆಯಿಂದಾಗಿ, ಮಧ್ಯಾಹ್ನದ ಬಿಸಿಯೂಟವೇ ಸ್ಥಗಿತರೊಂಡು, ಮಕ್ಕಳು ಉಪ್ಪಿಟ್ಟು ರಾಗೀಗಂಜಿ ಕುಡಿದು ಮನೆಗೆ ಮರಳುತ್ತಿರುವ ಪ್ರಕರಣ ಗಂಭೀರತೆ ಕುರಿತು ಸೋಮವಾರ "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ, ತತ್‌ಕ್ಷಣವೇ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
"ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ಈ ಕುರಿತ ಸುದ್ದಿ ಎಲ್ಲೆಡೆ ಕಾವೇರುತ್ತಿದ್ದಂತೆಯೇ, ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಘಟನೆಯ ವರದಿ ತರಿಸಿಕೊಂಡು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಾದರು. ಸುರಪುರ ಡಿವೈಎಸ್ಪಿ ಜಾವೀದ್ ಇನಾಂದಾರ್, ಸರ್ಕಲ್ ಇನ್ಸಪೆಕ್ಟರ್ ಶರಣಗೌಡ ನ್ಯಾಮಣ್ಣೋರ್, ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳು ಹಾಗೂ ಅಲ್ಲಿನವರ ತೊಂದರೆಗಳನ್ನು ಆಲಿಸಿದರು.
ಇದನ್ನೂ ಓದಿ: ಯಾದಗಿರಿಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ದಲಿತ ಮಕ್ಕಳ ಊಟದ ತಟ್ಟೆ ತೊಳೆಯಲು ನಿರಾಕರಣೆ: ಬಿಸಿಯೂಟವೇ ಸ್ಥಗಿತ!
ನಿರಾಕರಿಸಿದ ಅಡುಗೆ ಸಹಾಯಕಿಯರನ್ನು ತಕ್ಷಣವೇ ಬದಲಾಯಿಸಿ, ತಾತ್ಕಾಲಿಕವಾಗಿ ಅಲ್ಲಿ ಅಡುಗೆ ಮಾಡಲಿಕ್ಕಿದ್ದ ಸಿಬ್ಬಂದಿಗಳನ್ನೇ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸೋಮವಾರ, ಯಾವುದೇ ತೊಂದರೆಯಿಲ್ಲದಂತೆ ಎಲ್ಲ ಮಕ್ಕಳೂ ಬಿಸಿಯೂಟ ಮಾಡಿದ್ದಾರೆ ಎಂದು ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ "ಕನ್ನಡಪ್ರಭ "ಕ್ಕೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ ನಡೆದ ದೌರ್ಜನ್ಯ ನಿಯಂತ್ರಣ ಸಭೆಯಲ್ಲಿಯೂ ಈ ಕುರಿತು ಚರ್ಚೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆನ್ನಲಾಗಿದ್ದು, ಕ್ರಮಕ್ಕೆ ಸೂಚಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ