ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ತೀವ್ರ, ಕನ್ನಡ ಮಾತನಾಡಿದ್ದಕ್ಕೆ ಕರವೇ ನಾಯಕನಿಗೆ ಥಳಿತ!

Published : Feb 25, 2025, 07:38 AM ISTUpdated : Feb 25, 2025, 09:15 AM IST
ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ತೀವ್ರ, ಕನ್ನಡ ಮಾತನಾಡಿದ್ದಕ್ಕೆ  ಕರವೇ ನಾಯಕನಿಗೆ ಥಳಿತ!

ಸಾರಾಂಶ

ಬೆಳಗಾವಿ ಗಡಿಭಾಗದಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕರವೇ ಉಪಾಧ್ಯಕ್ಷರ ಮೇಲೆ ಹಲ್ಲೆ ನಡೆದಿದೆ. ಸೊಲ್ಲಾಪುರದಲ್ಲಿ ಕನ್ನಡ ಬಸ್‌ಗಳಿಗೆ ಮಸಿ ಬಳಿದು ಚಾಲಕನಿಗೆ ಕೇಸರಿ ಬಣ್ಣ ಬಳಿದು ಪುಂಡಾಟ ಮೆರೆದಿದ್ದಾರೆ.

ವಿಜಯಪುರ/ಬೆಳಗಾವಿ : ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದು, ಸೋಮವಾರವೂ ಕನ್ನಡ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಸೋಮವಾರ ಸಂಜೆ ಕನ್ನಡದಲ್ಲಿ ಮಾತಾಡಿದ್ದಕ್ಕೆ ಖಾನಾಪುರ ತಾಲೂಕು ಕರವೇ (ನಾರಾಯಣ ಗೌಡ ಬಣ) ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದಾರೆ. 

ಮತ್ತೊಂದೆಡೆ ಖಾನಾಪುರ ಘಟನೆಗೂ ಮೊದಲು, ಸೋಮವಾರ ಬೆಳಗ್ಗೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಶಿವಸೇನಾ ಠಾಕ್ರೆ ಸಂಘಟನೆಯ ಕಾರ್ಯಕರ್ತರು ಇಳಕಲ್‌ನಿಂದ ತೆರಳಿದ್ದ ಎರಡು ಬಸ್‌ಗಳನ್ನು ತಡೆದು, ಚಾಲಕನ ಮುಖಕ್ಕೆ ಕೇಸರಿ ಬಣ್ಣ ಬಳಿದು, ಹೂಮಾಲೆ ಹಾಕಿ, ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿಸಿ ದರ್ಪ ಮೆರೆದಿದ್ದಾರೆ. ಜೊತೆಗೆ ಬಸ್‌ಗಳಿಗೆ ಮಸಿ ಬಳಿದು, ಜೈ ಮಹಾರಾಷ್ಟ್ರ ಎಂದು ಬರೆದು, ಮಹಾರಾಷ್ಟ್ರ ಪರ ಘೋಷಣೆ ಕೂಗಿದ್ದಾರೆ. ಇದು ಕನ್ನಡಪರ ಸಂಘಟನೆಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಭಾಷಾ ಸಂಘರ್ಷದಿಂದ ಶಾಂತಿ, ನೆಮ್ಮದಿ ಹಾಳು, ಅಭಿವೃದ್ಧಿಗೆ ಪೆಟ್ಟು: ಸಚಿವ ಸತೀಶ ಜಾರಕಿಹೊಳಿ

ಚಾಲಕನಿಗೆ ಕೇಸರಿ ಬಣ್ಣ:

ಸೋಮವಾರ ಬೆಳಗ್ಗೆ ಬಾಗಲಕೋಟೆಯ ಇಳಕಲ್‌ನಿಂದ (ಕೆಎ 29 ಎಫ್ 1350) ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಿದ್ದ ಬಸ್‌ನ್ನು ಸೊಲ್ಲಾಪುರ ನಗರದ ಸಾಥ್ ರಸ್ತೆಯಲ್ಲಿ ಶಿವಸೇನೆಯ (ಉದ್ಧವ್‌ ಠಾಕ್ರೆ ಬಣ) 15 ರಿಂದ 20 ಕಿಡಿಗೇಡಿಗಳು ತಡೆದಿದ್ದಾರೆ. ಬಸ್‌ಗೆ ಮಸಿ ಬಳಿದು, ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದಾರೆ. ಬಳಿಕ ಬಸ್ ಚಾಲಕನನ್ನು ಕೆಳಗಿಳಿಸಿ, ಚಾಲಕನ ಮುಖಕ್ಕೆ ಕೇಸರಿ ಬಣ್ಣ ಬಳಿದು, ಹೂಮಾಲೆ ಹಾಕಿ, ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿಸಿ ದರ್ಪ ಮೆರೆದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ. ಜೈ ಮಹಾರಾಷ್ಟ್ರ, ಜೈ ಭವಾನಿ ಎಂದು ಘೋಷಣೆ ಕೂಗುತ್ತಾ ದಾಂದಲೆ ನಡೆಸಿದ್ದಾರೆ. ಬಳಿಕ, ಬಸ್ ಬಿಟ್ಟು ಕಳುಹಿಸಿದ್ದಾರೆ. ಬಸ್‌ನಲ್ಲಿ ಅಂದಾಜು 35 ಪ್ರಯಾಣಿಕರಿದ್ದರು. ಇದಾದ ಬಳಿಕ, ಮಧ್ಯಾಹ್ನದ ವೇಳೆ ಇಳಕಲ್‌ನಿಂದ ತೆರಳಿದ್ದ ಮತ್ತೊಂದು ಬಸ್‌ಗೂ ಪುಂಡರು ಮಸಿ ಬಳಿದಿದ್ದಾರೆ.

ಕರವೇ ಮುಖಂಡನ ಮೇಲೆ ಹಲ್ಲೆ:

ಈ ಮಧ್ಯೆ, ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಜಾಂಬೋಟಿ ವೃತ್ತದ ಬಳಿ ಸೋಮವಾರ ಸಂಜೆ ಖಾನಾಪುರ ತಾಲೂಕು ಕರವೇ (ನಾರಾಯಣ ಗೌಡ ಬಣ) ಉಪಾಧ್ಯಕ್ಷ, ತಾಲೂಕಿನ ದೇವಲತ್ತಿ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ, ಜಯವಂತ ನಿಡಗಲ್ಕರ್ ಮೇಲೆ ನಾಲ್ಕೈದು ಯುವಕರ ಮರಾಠಿ ಪುಂಡರ ಗುಂಪು ಹಲ್ಲೆ ನಡೆಸಿದೆ.

ಇದನ್ನೂ ಓದಿ: ಸ್ವರಾಜ್ಯದ ಬಗ್ಗೆ ಮಾತನಾಡೋ ಪುಂಡರಿಂದ ಭಾಷೆ ಹೆಸರಲ್ಲಿ ಗೂಂಡಾಗಿರಿ, ನಿರ್ವಾಹಕನ ಮೇಲೆ ಹಲ್ಲೆ ಅತ್ಯಂತ ಖಂಡನೀಯ: ಹೆಬ್ಬಾಳ್ಕರ್

ಅವರು ತಮ್ಮ ಸ್ನೇಹಿತರೊಂದಿಗೆ ಹೊಟೇಲ್‌ಗೆ ಬಂದಾಗ ಈ ಘಟನೆ ನಡೆದಿದೆ. ಹೋಟೆಲ್ ನಲ್ಲಿ ಕುಳಿತಿದ್ದ ಯುವಕರ ಜೊತೆ ಕನ್ನಡದಲ್ಲಿ ಮಾತನಾಡಿ, ಪಕ್ಕಕ್ಕೆ ಸರಿದು ಕುಳಿತುಕೊಳ್ಳಲು ಹೇಳಿದ್ದಕ್ಕೆ ಆಕ್ರೋಶಗೊಂಡ ಯುವಕರು, ನಿಡಗಲ್ಕರ್‌ ಜೊತೆ ಜಗಳ ತೆಗೆದು, ರಕ್ತ ಬರುವ ಹಾಗೆ ಹಲ್ಲೆ ನಡೆಸಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ