ಏಕತಾ ಸಮಾವೇಶಕ್ಕೂ ಪಂಚಮಸಾಲಿಗಳಿಗೂ ಸಂಬಂಧವಿಲ್ಲ: ವಚನಾನಂದ ಸ್ವಾಮೀಜಿ

Published : Sep 21, 2025, 07:59 AM IST
Vachanananda shree

ಸಾರಾಂಶ

ಏಕತಾ ಸಮಾವೇಶಕ್ಕೂ ಪಂಚಮಸಾಲಿ ಸಮಾಜಕ್ಕೂ ಯಾವುದೇ ಬಗೆಯ ಸಂಬಂಧವಿಲ್ಲ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದೇ ಬರೆಯಿಸಬೇಕು ಎಂದು ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ (ಸೆ.21): ವೀರಶೈವ -ಲಿಂಗಾಯತ ಮಹಾಸಭಾ ನಡೆಸಿದ ಏಕತಾ ಸಮಾವೇಶಕ್ಕೂ ಪಂಚಮಸಾಲಿ ಸಮಾಜಕ್ಕೂ ಯಾವುದೇ ಬಗೆಯ ಸಂಬಂಧವಿಲ್ಲ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದೇ ಬರೆಯಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಇಲ್ಲಿಯ ಲಿಂಗರಾಜನಗರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಏನು ಬರೆಯಿಸಬೇಕು ಎಂಬುದರ ಕುರಿತು ಮನೆ ಮನೆಗೆ ತೆರಳಿ ಕರಪತ್ರ ಅಂಟಿಸಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪಂಚಮಸಾಲಿ ಪೀಠಗಳು, ಪಂಚಮಸಾಲಿ ಸಂಘ ಏನು ಹೇಳುತ್ತದೆಯೋ ಅದನ್ನು ಸಮಾಜದ ಜನ ಪಾಲಿಸಬೇಕು. ಸಮಾಜದ ಜನರು ಜಾತಿ ಗಣತಿ ವೇಳೆ ಧರ್ಮ ಕಾಲಂನಲ್ಲಿ ಹಿಂದೂ; ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಈಗಾಗಲೇ 16 ಜಿಲ್ಲೆಗಳಲ್ಲಿ ಸಂಚರಿಸಿ ಸಮಾಜದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಉ‍ಳಿದ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು. ಅಲ್ಲದೇ ಒಂದು ಲಕ್ಷ ಸ್ಟಿಕರ್‌ ಮುದ್ರಿಸಿ ಹಂಚಲಾಗುವುದು ಎಂದರು.

ಕಾಂತರಾಜು ಆಯೋಗದ ವರದಿ ವೈಜ್ಞಾನಿಕವಾಗಿಲ್ಲ ಎಂದು ಇದೀಗ ಮತ್ತೆ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯದ ಸಮೀಕ್ಷೆ ಇಷ್ಟೊಂದು ಗಡಿ-ಬಿಡಿ ಯಾಕೆ? ಈ ಸಮೀಕ್ಷೆ ಮೇಲೆ 7 ಕೋಟಿ ಕನ್ನಡಿಗರ ಭವಿಷ್ಯ ಅಡಗಿದೆ. ಹೀಗಾಗಿ, ಎಲ್ಲ ಅಡೆತಡೆಗಳನ್ನು ನಿವಾರಿಸಿ, ಸಮಾಧಾನದಿಂದ ಸಮೀಕ್ಷೆ ನಡೆಸಬೇಕು ಎಂಬುದು ನಮ್ಮ ಆಗ್ರಹ ಎಂದರು. ಈ ವೇಳೆ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಜಿ.ಜಿ. ದ್ಯಾವನಗೌಡ್ರ, ವಸಂತಾ ಹುಲ್ಲತ್ತಿ, ಜಿಲ್ಲಾಧ್ಯಕ್ಷ ಮೋಹನ ನುಚ್ಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಏಕತೆ ಸಾರಿದ ಮರುದಿನವೇ ಅಪಸ್ವರ

ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ಏಕತಾ ಸಮಾವೇಶ ನಡೆಸಿ ವೀರಶೈವ- ಲಿಂಗಾಯತ ಎರಡು ಬೇರೆ ಬೇರೆ ಅಲ್ಲ. ಒಂದೇ ಎಂದು ಸಾರಿದ ಮರುದಿನವೇ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿಕೆ ನೀಡಿರುವುದು ಸಮಾಜದ ಜನರಲ್ಲಿ ಗೊಂದಲ ಮುಂದುವರಿದಂತಾಗಿದೆ. ಏಕತಾ ಸಮಾವೇಶದಲ್ಲಿ ಪಂಚಮಸಾಲಿ ಸಮಾಜದ ಶ್ರೀಗಳಿಬ್ಬರೂ ಪಾಲ್ಗೊಂಡಿರಲಿಲ್ಲ. ಆದರೆ, ಸಮಾಜದ ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಕಾಶಪ್ಪನವರ ತಮ್ಮ ಭಾಷಣದಲ್ಲಿ ತಮ್ಮದೇ ಸಮಾಜದ ಸ್ವಾಮೀಜಿಗಳನ್ನು ಪರೋಕ್ಷವಾಗಿ ತೆಗಳಿದ್ದರು. ಜತೆಗೆ ಧರ್ಮದ ಕಾಲಂನಲ್ಲಿ ವೀರಶೈವ- ಲಿಂಗಾಯತ ಎಂದು ನಮೂದಿಸಬೇಕು ಎಂದು ತಿಳಿಸಿದ್ದನ್ನು ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್