ದಿಲ್ಲಿ ಏರ್‌ಪೋರ್ಟ್‌ನಲ್ಲಿ ಮಂತ್ರಿ ಡೆವಲಪರ್ಸ್ ಮಾಲೀಕನ ಪತ್ನಿಗೆ ತಡೆ!

By Web DeskFirst Published Oct 17, 2019, 7:39 AM IST
Highlights

ಸ್ನೇಹಲ್‌ ಮಂತ್ರಿ ವಿದೇಶಯಾತ್ರೆಗೆ ತಡೆ| ಸಿಂಗಾಪುರಕ್ಕೆ ಹೊರಟಿದ್ದಾಗ ದೆಹಲಿ ಏರ್‌ಪೋರ್ಟಲ್ಲಿ ನಿರ್ಬಂಧ| ಮಂತ್ರಿ ಡೆವಲಪರ್ಸ್‌ ಮಾಲೀಕನ ಪತ್ನಿ ವಾಪಸ್‌ ಕಳಿಸಿದ ಅಧಿಕಾರಿಗಳು| ಬೆಂಗಳೂರು ಪೊಲೀಸರ ಎದುರು ವಿವರಣೆ ನೀಡಿದರೂ ಅನುಮತಿ ಇಲ್ಲ

ಬೆಂಗಳೂರು[ಅ.17]: ರಾಷ್ಟ್ರ ರಾಜಧಾನಿ ದೆಹಲಿ ಮೂಲಕ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಮಂತ್ರಿ ಡೆವಲಪರ್ಸ್ ಮಾಲೀಕ ಸುಶೀಲ್‌ ಮಂತ್ರಿ ಪತ್ನಿ ಸ್ನೇಹಲ್‌ ಮಂತ್ರಿ ಅವರಿಗೆ ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಡೆಯೊಡ್ಡಿದ ಘಟನೆ ನಡೆದಿದೆ. ವಂಚನೆ ಪ್ರಕರಣ ಸಂಬಂಧ ಲುಕ್‌ ಔಟ್‌ ನೋಟಿಸ್‌ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಈ ನಡುವೆ, ಸ್ನೇಹಲ್‌ ಮಂತ್ರಿ ಹಾಗೂ ಅವರ ಪುತ್ರ ಪ್ರತೀಕ್‌ ಮಂತ್ರಿ ಅವರು ಬೆಂಗಳೂರಿನ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾರೆ. ವಿದೇಶಕ್ಕೆ ಅನುಮತಿ ನೀಡಲು ಕೇಳಿದ್ದಾರೆ. ಆದರೆ ಪೊಲೀಸರು ಈ ಮನವಿಯನ್ನು ತಿರಸ್ಕರಿಸಿದ್ದಾರೆ.

ಏನಿದು ರಾದ್ಧಾಂತ?:

2016ರಲ್ಲಿ ಹೆಣ್ಣೂರು ಸಮೀಪ ಮಂತ್ರಿ ಡೆವಲಪರ್ಸ್ ಕಂಪನಿ ನಿರ್ಮಿಸಿದ್ದ ವೆಬ್‌ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ನಿವೃತ್ತ ಯೋಧ ಸೇರಿದಂತೆ ನಾಲ್ವರು ಫ್ಲಾಟ್‌ ಖರೀದಿಸಿದ್ದರು. ಹಣ ಪಡೆದಿದ್ದರೂ ಪೂರ್ವ ಒಪ್ಪಂದದಂತೆ ಫ್ಲಾಟ್‌ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಆ ನಾಲ್ವರು, ಮಂತ್ರಿ ಡೆವಲಪರ್ಸ್ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಇದೇ ವರ್ಷದ ಜುಲೈ ತಿಂಗಳಲ್ಲಿ ಪ್ರತ್ಯೇಕವಾಗಿ ದೂರು ದಾಖಲಿಸಿದ್ದರು. ಅದರಂತೆ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆ ಸಂಸ್ಥೆಯ ಮಾಲೀಕ ಸುಶೀಲ್‌ ಮಂತ್ರಿ, ನಿರ್ದೇಶಕರಾಗಿರುವ ಅವರ ಪತ್ನಿ ಸ್ನೇಹಲ್‌ ಮತ್ತು ಪುತ್ರ ಪ್ರತೀಕ್‌ ಸೇರಿದಂತೆ 18 ಮಂದಿಯ ವಿದೇಶ ಯಾತ್ರೆಗೆ ನಿರ್ಬಂಧಿಸಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ ಮಂಗಳವಾರ ಸ್ನೇಹಲ್‌ ಅವರು ಅಮೆರಿಕಕ್ಕೆ ತೆರಳಲು ಮುಂದಾಗ ದೆಹಲಿ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಬಳಿಕ ಈ ಬಗ್ಗೆ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರಿಗೆ ದೆಹಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ನೇಹಲ್‌ ಹಾಗೂ ಪ್ರತೀಕ್‌ ಮಂತ್ರಿ ಅವರು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರ ಮುಂದೆ ಹಾಜರಾಗಿ ಪ್ರಕರಣದ ಕುರಿತು ವಿವರಣೆ ನೀಡಿದ್ದಾರೆ. ಅಲ್ಲದೆ ‘ತಾವು ಯಾವುದೇ ತಪ್ಪು ಮಾಡಿಲ್ಲ. ನೀವು ಕರೆದಾಗ ವಿಚಾರಣೆಗೆ ಬರುತ್ತೇವೆ. ನಮಗೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ’ ಕೋರಿದ್ದಾರೆ.

ಆದರೆ ಈ ಮನವಿಯನ್ನು ತಿರಸ್ಕರಿಸಿದ ಪೊಲೀಸರು, ಪ್ರಕರಣದ ತನಿಖೆ ಮುಗಿಯುವರೆಗೆ ಯಾವುದೇ ಕಾರಣಕ್ಕೂ ದೇಶ ತೊರೆಯಬಾರದು ಎಂದು ತಾಕೀತು ಮಾಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

click me!