
ಕಾರವಾರ (ಡಿ.28): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್‌ಗೆ ಇಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭೇಟಿ ನೀಡಿದರು. ವಿಶ್ವಪ್ರಸಿದ್ಧ ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರನ್ನು ಭೇಟಿಯಾದ ಸಚಿವರು, ಅವರ ಆಶೀರ್ವಾದ ಪಡೆದರು. ಈ ಅಪರೂಪದ ಭೇಟಿ ಜಿಲ್ಲೆಯ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.
ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರ 90ನೇ ಜನ್ಮದಿನದ ಸ್ಮರಣಾರ್ಥವಾಗಿ ಮುಂಡಗೋಡದ ದ್ರೆಪುಂಗ್ ಲೋಸೆಲಿಂಗ್ ಮಾನೆಸ್ಟ್ರಿಯಲ್ಲಿ 'ಪಂಥಭೇದರಹಿತ ಪಂಡಿತರ ಸಮಾವೇಶ'ವನ್ನು ಆಯೋಜಿಸಲಾಗಿತ್ತು. ಈ ಐತಿಹಾಸಿಕ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಜ್ಯೋತಿ ಬೆಳಗಿಸಿದರು.
ಸಮಾವೇಶದಲ್ಲಿ ಭಾಷಣ ಮಾಡಿದ ದಲಾಯಿ ಲಾಮಾ ಅವರು, ವಿಶ್ವಶಾಂತಿ ಮತ್ತು ಮಾನವೀಯ ಮೌಲ್ಯಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ವಿವಿಧ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸೌಹಾರ್ದತೆ ಇರಬೇಕು. ಈ ಮೂಲಕ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸಹಬಾಳ್ವೆಯ ಸಂದೇಶ ನೀಡಿದರು. ಇದೇ ವೇಳೆ ಮಾತನಾಡಿದ ಸಚಿವ ಕಿರಣ್ ರಿಜಿಜು ಅವರು, ಗುರುಗಳ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿರುವುದು ನನ್ನ ಜೀವನದ ಮಹತ್ವದ ಕ್ಷಣ ಮತ್ತು ಇದು ನನಗೆ ಆತ್ಮತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಿರಣ್ ರಿಜಿಜು ಅವರಿಗೆ ಉತ್ತರ ಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾಥ್ ನೀಡಿದರು. ಅವರೊಂದಿಗೆ ಮುಂಡಗೋಡ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮಂಜುನಾಥ ಪಾಟೀಲ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮಾನೆಸ್ಟ್ರಿಯಲ್ಲಿ ನಡೆದ ಈ ಅದ್ಧೂರಿ ಸಮಾವೇಶಕ್ಕೆ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ