
ಬೆಂಗಳೂರು (ಡಿ.28): ನಗರದ ಕೋಗಿಲು ಬಡಾವಣೆಯಲ್ಲಿ ಸುಮಾರು 200 ಅಕ್ರಮ ನಿವಾಸಿಗಳ ಮನೆಗಳನ್ನು ತೆರವುಗೊಳಿಸಿದ ವಿಚಾರ ಇದೀಗ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ತೆರವುಗೊಂಡ ಸ್ಥಳಕ್ಕೆ ಕೇರಳ ಸರ್ಕಾರದ ನಿಯೋಗ ಭೇಟಿ ನೀಡಿರುವುದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ಬಡವರ ಮೇಲೆ ಅಷ್ಟು ಪ್ರೀತಿ ಇದ್ದರೆ ಕೇರಳ ಸರ್ಕಾರವೇ ಅವರಿಗೆ ಹಣ ನೀಡಲಿ ಎಂದು ಟಾಂಗ್ ನೀಡಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಹಲವು ಬಾರಿ ಅಕ್ರಮ ನಿವಾಸಿಗಳಿಗೆ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಆದರೂ ನಿವಾಸಿಗಳು ಜಗ್ಗದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. 'ನಾವು ಕಾನೂನುಬಾಹಿರ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ. ಇಲ್ಲಿ ಯಾರೂ ಕೇರಳದವರು ವಾಸ ಮಾಡುತ್ತಿಲ್ಲ, ಆದರೂ ಕೇರಳ ನಿಯೋಗ ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದೆ' ಎಂದು ಜಮೀರ್ ಆರೋಪಿಸಿದರು.
ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇವಲ ಭೇಟಿ ನೀಡುವ ಬದಲು ಆರ್ಥಿಕ ಸಹಾಯ ಮಾಡಲಿ ಎಂದು ಜಮೀರ್ ಸವಾಲು ಹಾಕಿದರು. 'ಕೇರಳದಲ್ಲಿ ಪ್ರವಾಹ ಬಂದಾಗ ಕರ್ನಾಟಕ ಸರ್ಕಾರ ಮಾನವೀಯತೆಯಿಂದ ನೆರವು ನೀಡಿತ್ತು. ಈಗ ಇಲ್ಲಿ ಮನೆ ಕಳೆದುಕೊಂಡವರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಕೇರಳ ಸರ್ಕಾರ ಏಕೆ ಪರಿಹಾರ ಘೋಷಿಸುತ್ತಿಲ್ಲ? ಕೇರಳ ನಿಯೋಗ ಬಂದಿದ್ರಲ್ವಾ ಏನ್ ಮಾಡಿದ್ರು? ಬಂದ್ರು ಹೋದ್ರು ಅಷ್ಟೇ.., ಬಡವರ ಬಗ್ಗೆ ಕಾಳಜಿ ಇದ್ದರೆ ಮನೆ ಕಟ್ಟಿಸಿ ಕೊಡಬೇಕಿತ್ತು. ಮುಂಬರುವ ಏಪ್ರಿಲ್‌ನಲ್ಲಿ ಚುನಾವಣೆ ಇರುವುದರಿಂದ ಇವರು ಇಲ್ಲಿಗೆ ಬಂದು ಕೇವಲ ಪ್ರಚಾರ ಪಡೆಯುತ್ತಿದ್ದಾರೆ' ಎಂದು ಟೀಕಿಸಿದರು.
ಮನೆ ಕಳೆದುಕೊಂಡ ಬಡವರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇದೆ. ಈಗಾಗಲೇ ಸುತ್ತಲಿನ 5 ಮದುವೆ ಮಂಟಪಗಳಲ್ಲಿ ಅವರಿಗೆ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಜಾಗ ಖಾಲಿ ಮಾಡುವಂತೆ ಹೇಳಿದರೂ ಅವರಿಗೆ ಬೇರೆ ಕಡೆಗಳಲ್ಲಿ ಮನೆ ಸಿಗುವುದಿಲ್ಲ ಎಂಬ ಭಯವಿದೆ. ಆದರೆ ಸರ್ಕಾರ ಅವರನ್ನು ನಮ್ಮ ಸರ್ಕಾರ ಕೈಬಿಡುವುದಿಲ್ಲ. ನಾಳೆ ನಡೆಯಲಿರುವ ಮಹತ್ವದ ಸಭೆಯ ನಂತರ ಸಂತ್ರಸ್ತರಿಗೆ 'ಗುಡ್ ನ್ಯೂಸ್' ಸಿಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ