'ಜನರ ರಕ್ಷಣೆಗೆ ಮೋದಿ ಘೋಷಿಸಿರುವ ಯೋಜನೆಗಳ ಸದ್ಬಳಕೆಗೆ ಕರೆ'

By Kannadaprabha NewsFirst Published Jul 11, 2020, 7:26 AM IST
Highlights

ಆತ್ಮ ನಿರ್ಭರ ಭಾರತ: ಜನಪತ್ರಿನಿಧಿಗಳ ಸಹಕಾರ ಕೋರಿದ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ|, ಸಣ್ಣ ಕೈಗಾರಿಕೆಗಳ ಪ್ರಗತಿಗೆ ಪ್ರಧಾನ ಮಂತಿಗಳು ವಿಶೇಷ ಯೋಜನೆ ರೂಪಿಸಿದ್ದಾರೆ. ನನ್ನ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗರೀಬ್‌ ಕಲ್ಯಾಣ ಯೋಜನೆಯಡಿ 5,767 ಎಂಎಸ್‌ಎಂಇಗಳಿಗೆ 463 ಕೋಟಿ ಒದಗಿಸಲಾಗಿದೆ: ಸಂಸದ ತೇಜಸ್ವಿ ಸೂರ್ಯ|

ಬೆಂಗಳೂರು(ಜು.11): ರಾಜ್ಯದಲ್ಲಿ ಪ್ರಧಾನ ಮಂತ್ರಿಗಳು ಆತ್ಮ ನಿರ್ಭರ ಭಾರತ ಪ್ಯಾಕೇಜ್‌ನಡಿ ಘೋಷಿಸಿರುವ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ಜನ ಪ್ರತಿನಿಧಿಗಳು ಸಹಕರಿಸಬೇಕು ಎಂದು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರು ಮನವಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಕೇಂದ್ರ ಸಚಿವರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ.ಮೋಹನ್‌ ಹಾಗೂ ದಕ್ಷಿಣ ಕ್ಷೇತ್ರ ತೇಜಸ್ವಿ ಸೂರ್ಯ ಅವರು, ಕೊರೋನಾ ವೇಳೆ ಜೀವ ರಕ್ಷಣೆಗೆ ಪ್ರಧಾನಿಗಳ ಆದ್ಯತೆ ನೀಡಿದ್ದಾರೆ ಎಂದರು.

ಈ ಮೊದಲು ಭಾರತದಲ್ಲಿ ಸೋಂಕು ನಿರೋಧ ಪಿಪಿಇ ಕಿಟ್‌ಗಳನ್ನು ತಯಾರಿಸುತ್ತಿರಲಿಲ್ಲ. ಈಗ ದಿನಕ್ಕೆ 4 ಲಕ್ಷಕ್ಕಿಂತ ಅಧಿಕ ಸ್ವದೇಶಿ ಪಿಪಿಇ ಕಿಟ್‌ಗಳು ತಯಾರಿಸಲಾಗುತ್ತಿದೆ. ದೇಶ ವ್ಯಾಪ್ತಿ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು, ಅಗತ್ಯವಾಗಿ ತಿಳ್ಕೊಳ್ಳಿ

ಸ್ವಾವಲಂಬನೆ:

ರಸಗೊಬ್ಬರ ಉತ್ಪಾದನೆಯಲ್ಲಿ ಸಹ ಸ್ವಾವಲಂಬನೆ ಸಾಧಿಸಲಾಗುತ್ತಿದೆ. ವಾರ್ಷಿಕ 12.7 ಲಕ್ಷ ಟನ್‌ ಯೂರಿಯಾ ಉತ್ಪಾನೆ ಸಾಮರ್ಥ್ಯದ ರಾಮಗುಂಡಮ್ಮ ರಸಗೊಬ್ಬರ ಕಾರ್ಖಾನೆಯನ್ನು ಕೆಲವೇ ತಿಂಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ತಲ್ಚೇರ್‌ ಸೇರಿದಂತೆ ಇನ್ನೂ 4 ರಸಗೊಬ್ಬರ ಘಟಕಗಳ ಪುನೇಶ್ಚತನಕ್ಕೆ ಸಿದ್ಧತೆ ನಡೆದಿದೆ ಎಂದು ಸಚಿವರು ಹೇಳಿದರು.

ಔಷಧ ಹಾಗೂ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಸಹ ಸ್ವಾವಲಂಬನೆಗೆ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 3 ಸಾವಿರ ಕೋಟಿ ವೆಚ್ಚದಲ್ಲಿ ಕರ್ನಾಟಕದ ರಾಯಚೂರು ಸೇರಿದಂತೆ ಮೂರು ಕಡೆ ಬಲ್ಕ್‌ ಮೆಡಿಸಿನ್‌ ಅಂಡ್‌ ಮೆಡಿಕಲ್‌ ಇಕ್ವಿಪ್ಮೆಂಟ್‌ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಆಡಳಿತದಲ್ಲಿ ಪಾರದರ್ಶತೆ ಮತ್ತು ಪ್ರಾಮಾಣಿಕತೆಯನ್ನು ಪ್ರಧಾನಿ ಮೋದಿ ಅವರು ಸಾಕಾರಗೊಳಿಸಿದ್ದಾರೆ. ಸರ್ಕಾರದ ಸವಲತ್ತುಗಳು ಈಗ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ. ಕೊರೋನಾ ಸಂಕಷ್ಟದ ವೇಳೆ ಜನ್‌ಧನ್‌ ಖಾತೆಗಳಿಗೆ 500 ಪರಿಹಾರವನ್ನು ಮಧ್ಯವರ್ತಿಗಳ ಕಾಟವಿಲ್ಲದೆ ಬಡ ಜನರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಣ್ಣ ಕೈಗಾರಿಕೆಗಳ ಪ್ರಗತಿಗೆ ಪ್ರಧಾನ ಮಂತಿಗಳು ವಿಶೇಷ ಯೋಜನೆ ರೂಪಿಸಿದ್ದಾರೆ. ನನ್ನ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗರೀಬ್‌ ಕಲ್ಯಾಣ ಯೋಜನೆಯಡಿ 5,767 ಎಂಎಸ್‌ಎಂಇಗಳಿಗೆ 463 ಕೋಟಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

click me!