ಗುಡ್ಡ ಕುಸಿವ ಭೀತಿ: ಕೊಡಗಲ್ಲಿ ‘ರೆಡ್ ಅಲರ್ಟ್’| ಎಚ್ಚರ - ಮುಂದಿನ 3 ದಿನ ಕರಾವಳಿ, ಕೊಡಗಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ| ಮಲೆನಾಡು ಸೇರಿ ಇತರ ಜಿಲ್ಲೆಗಳಿಗೂ ಅಲರ್ಟ್
ಬೆಂಗಳೂರು(ಜು.11): ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮುಂದಿನ ಮೂರು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಕೆಲ ಗುಡ್ಡ ಕುಸಿಯುವ ಹಂತ ತಲುಪಿಸಿರುವ ಕಾರಣ ಆ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಸತತ ಮಳೆಗೆ ಪ್ರವಾಹ: ಕರಾವಳಿ ಯುದ್ದಕ್ಕೂ ಪ್ರವಾಹ ನೂರಾರು ಮನೆಗಳಿಗೆ ಹಾನಿ
ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮುಂದುವರೆಯಲಿದೆ. ಹೀಗಾಗಿ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ಹೆಚ್ಚು ಮಳೆಯಾಗುತ್ತಿರುವ ಮಲೆನಾಡು ಪ್ರದೇಶ ಮತ್ತು ಉತ್ತರ ಮತ್ತು ದಕ್ಷಿಣ ಒಳನಾಡಿದ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.