
ಬೆಂಗಳೂರು(ಏ.11): ಹಠಾತ್ ಮಳೆ ಪರಿಸ್ಥಿತಿ ನಿಭಾಯಿಸಲು ಬೆಸ್ಕಾಂ ಸಮರ್ಪಕವಾಗಿ ಸಜ್ಜುಗೊಳ್ಳದ ಕಾರಣ ಕಳೆದ ನಾಲ್ಕು ದಿನಗಳಿಂದ ನಗರದ ವಿವಿಧೆಡೆ ಆಗಾಗ ವಿದ್ಯುತ್ ವ್ಯತ್ಯಯವಾಗಿದ್ದು, ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ವರ್ಕ್ ಫ್ರಂ ಹೋಮ್ ವ್ಯವಸ್ಥೆಯಡಿ ಕೆಲಸ ಮಾಡುತ್ತಿದ್ದ ಐಟಿ, ಬಿಟಿ ಸಿಬ್ಬಂದಿ ಸೇರಿ ನಾಗರಿಕರಿಗೆ ತೀವ್ರ ಸಮಸ್ಯೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಬರೋಬ್ಬರಿ 38,328 ವಿದ್ಯುತ್ ವ್ಯತ್ಯಯದ ದೂರು ದಾಖಲಾಗಿರುವುದೇ ಇದಕ್ಕೆ ಸಾಕ್ಷಿ.
ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕೂ ಮುನ್ನ ಬೆಸ್ಕಾಂ ಸಾರ್ವಜನಿಕರಿಗೆ ಒಂದೆರಡು ದಿನ ಮೊದಲು ಮಾಹಿತಿ ಕೊಟ್ಟು ಈ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಉಂಟಾಗಲಿದೆ ಎಂದು ತಿಳಿಸಿ ವಿದ್ಯುತ್ ತಂತಿಗೆ ತೊಂದರೆ ಉಂಟು ಮಾಡುವ ಮರದ ಕೊಂಬೆ, ಟ್ರಾನ್ಸ್‌ಫಾರ್ಮರ್ ದೋಷಗಳನ್ನು ಸರಿಪಡಿಸುತ್ತಿತ್ತು. ಆದರೆ, ಬೇಸಿಗೆ ವೇಳೆಯೇ ಹಠಾತ್ ಭರ್ಜರಿ ಮಳೆಯಾಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಆದರೆ, ಬೆಸ್ಕಾಂ ಸಿಬ್ಬಂದಿ ದೂರು ಬಂದ ತಕ್ಷಣ ತೆರಳಿ ಸಮಸ್ಯೆ ಪರಿಹಾರ ಮಾಡುತ್ತಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿರುಗಾಳಿ ಸಹಿತ ಮಳೆಗೆ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಪಾರ ಕೃಷಿ ಹಾನಿ
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಐಟಿ-ಬಿಟಿ ಸೇರಿದಂತೆ ಅನೇಕ ಕಂಪನಿಗಳು ಕಚೇರಿಗೆ ಬಂದ್ ಮಾಡಿ ತಮ್ಮ ಸಿಬ್ಬಂದಿಗೆ ವರ್ಕ್ಫ್ರಮ್ ಹೋಮ್‌ಗೆ ಸೂಚಿಸಿದೆ. ಹೀಗಾಗಿ ದೂರುಗಳ ಸಂಖ್ಯೆ ಹೆಚ್ಚಾಗಿವೆ.
ತಾಪಮಾನ ಏರಿಕೆ ಹಾಗೂ ಮೇಲ್ಮೈಸುಳಿಗಾಳಿ ಪ್ರಭಾವದಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಕಡೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಏ.7 ರಿಂದ ಏ.10ರ ರಾತ್ರಿ ವರೆಗೆ 38 ಸಾವಿರಕ್ಕೂ ಅಧಿಕ ದೂರು ದಾಖಲಾಗಿವೆ. ಅದರಲ್ಲಿ ಏ.9ರ ವರೆಗೆ ಬಂದ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ತಾಂತ್ರಿಕ ಸಮಸ್ಯೆಯ ದೂರು ಹೊರತು ಪಡಿಸಿ ವಿದ್ಯುತ್ ಕಡಿತಕ್ಕೆ ಸಂಬಂಧಿಸಿದ ಎಲ್ಲ ದೂರು ಪರಿಹಾರ ಮಾಡಿದ್ದೇವೆ. ಇನ್ನು 15 ದೂರು ಮಾತ್ರ ಬಾಕಿ ಇವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!
ಉದ್ದೇಶ ಪೂರ್ವಕ ಕಡಿತವಲ್ಲ
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಬಾಕಿ ಇರುವುದರಿಂದ ಲೋಡ್ ಶೆಡ್ಡಿಂಗ್ ಮಾಡಿಲ್ಲ ಹಾಗೂ ಎಲ್ಲಿಯೂ ವಿದ್ಯುತ್ ಕಡಿತಗೊಳಿಸುತ್ತಿಲ್ಲ. ಗಾಳಿ, ಮಳೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ಮಾತ್ರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ದೂರು ಕೇಳಿ ಬಂದ ತಕ್ಷಣ ಸಮಸ್ಯೆ ಪರಿಹಾರ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಗೌಡ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ