10,000 ಕೇಸು ಬಂದರೂ ಎದುರಿಸಲು ರಾಜ್ಯ ಸಜ್ಜು!

By Kannadaprabha NewsFirst Published Apr 11, 2020, 7:26 AM IST
Highlights

10000 ಕೇಸು ಬಂದರೂ ಎದುರಿಸಲು ರಾಜ್ಯ ಸಜ್ಜು|  ಏಪ್ರಿಲ್‌ ಅಂತ್ಯದ ವೇಳೆ ಇಷ್ಟೊಂದು ಪ್ರಮಾಣ ಕೊರೋನಾ ಕೇಸು ನಿಭಾ​ಯಿ​ಸಲು ಸಿದ್ಧತೆ|  ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ|  ಕೊರೋನಾ ಎದು​ರಿ​ಸಲು ಅಗತ್ಯ ಮೂಲಸೌಕರ್ಯ ಕಲ್ಪಿ​ಸಿ​ರುವ ಸರ್ಕಾರ

ಬೆಂಗಳೂರು(ಏ.11): ರಾಜ್ಯದಲ್ಲಿ ಏಪ್ರಿಲ್‌ ಮಾಸಾಂತ್ಯದ ವೇಳೆಗೆ ಕೊರೋನಾ ಪ್ರಕರಣಗಳ ಸಂಖ್ಯೆ 10 ಸಾವಿರ ಮುಟ್ಟಿದರೂ ಅದನ್ನು ನಿಭಾಯಿಸಲು ಅಗತ್ಯವಾದ ಮೂಲ ಸೌಕರ್ಯವನ್ನು ಸಜ್ಜುಗೊಳಿಸುವ ಯೋಜನೆ ರೂಪಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರದ ಮುಂಜಾಗ್ರತಾ ಕ್ರಮಗಳು ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಕುರಿತು ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲಗೋಳ ಹೆಚ್ಚುವರಿ ಲಿಖಿತ ಹೇಳಿಕೆ ಸಲ್ಲಿಸಿ ಈ ಮಾಹಿತಿ ನೀಡಿದ್ದಾರೆ.

ಸಕಲ ಮೂಲಸೌಕರ್ಯ ಲಭ್ಯ:

ಏಪ್ರಿಲ್‌ 8ರ ವರೆಗೆ ರಾಜ್ಯದಲ್ಲಿ 181 ಕೋವಿಡ್‌ -19 ಪಾಸಿಟಿವ್‌ ಪ್ರಕರಣಗಳು ಸಂಭವಿಸಿವೆ. ಸದ್ಯ ರಾಜ್ಯಸರ್ಕಾರ ಸಿದ್ಧಪಡಿಸಿರುವ ಆಪತ್ಕಾಲೀನ ಯೋಜನೆ (ಕಂಟಿಂಜನ್ಸಿ ಪ್ಲಾನ್‌) ಪ್ರಕಾರ ಕೋವಿಡ್‌ ಪ್ರಕರಣಗಳ ಹೆಚ್ಚಳವಾದಂತೆ ಎಲ್ಲರಿಗೂ ಲಭ್ಯವಾಗುವಂತೆ ಎನ್‌-95 ಮಾಸ್ಕ್‌, ಮೂರು ಪದರದ ಮಾಸ್ಕ್‌, ಪಿಪಿಇ ಕಿಟ್‌ಗಳು, ಸ್ಯಾನಿಟೈಸರ್‌ ಇವೆ. ಸ್ಯಾನಿಟೈಸರ್‌ ಉತ್ಪಾದನೆಯನ್ನು ದಿನಕ್ಕೆ 50 ಸಾವಿರ ಲೀಟರ್‌ಗೂ ಅಧಿಕ ಹೆಚ್ಚಿಸಲಾಗಿದೆ. ಏಪ್ರಿಲ್‌ ಅಂತ್ಯಕ್ಕೆ 10 ಸಾವಿರ ಕೋವಿಡ್‌-19 ಪ್ರಕರಣಗಳಾದರೂ ಅದನ್ನು ನಿಭಾಯಿಸಲು ಬೇಕಾದ ಸುರಕ್ಷತಾ ವಸ್ತುಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಕಾರ್ಯ ಪ್ರವೃತವಾಗಿರುವುದಾಗಿ ಸರ್ಕಾರ ತಿಳಿಸಿದೆ.

ರಾಜ್ಯ​ದಲ್ಲಿ 207 ಮಂದಿಗೆ ಕೊರೋನಾ: ಕೇವಲ 10 ದಿನ​ದಲ್ಲಿ ಸೋಂಕಿತರು ಡಬಲ್!

‘ಕೋವಿಡ್‌-19’ ತಪಾಸಣೆಗೆ 11 ಸರ್ಕಾರಿ ಹಾಗೂ 4 ಖಾಸಗಿ ಸೇರಿ ರಾಜ್ಯದಲ್ಲಿ 15 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಮುಂದಿನ ಎರಡು ವಾರಗಳಲ್ಲಿ ಹೆಚ್ಚುವರಿ 5 ಲ್ಯಾಬ್‌ ಸ್ಥಾಪಿಸಲಾಗುವುದು. ಈಗಾಗಲೇ 1,574 ವೆಂಟಿಲೇಟರ್‌ಗಳ ಖರೀದಿಗೆ ಆದೇಶ ಮಾಡಲಾಗಿದೆ. ಆಪತ್ಕಾಲಿನ ಯೋಜನೆ ಅಂದಾಜಿನ ಪ್ರಕಾರ 18.33 ಲಕ್ಷ ಎನ್‌-95 ಮಾಸ್ಕ್‌ ಗಳ ಪೂರೈಕೆಗೆ ಆದೇಶ ನೀಡಲಾಗಿದೆ. 5,46,700 ಮಾಸ್ಕ್‌ ಗಳನ್ನು ಸ್ವೀಕರಿಸಲಾಗಿದೆ. 10.05 ಲಕ್ಷ ಪಿಪಿಇಗಳ ಪೈಕಿ 1,82,600 ಸ್ವೀಕರಿಸಲಾಗಿದೆ. 49 ಲಕ್ಷ ಮೂರು ಪದರದ ಮಾಸ್ಕ್‌ ಪೈಕಿ 37 ಲಕ್ಷ ಸ್ವೀಕರಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ಸರ್ಕಾರ ತಿಳಿಸಿದೆ.

ಕೊರತೆ ಇದೆ, ಗಮನಿಸಿ:

ಅದನ್ನು ಪರಿಗಣಿಸಿದ ನ್ಯಾಯಪೀಠ, ಆಪತ್ಕಾಲಿನ ಯೋಜನೆ ಅಂದಾಜಿನ ಪ್ರಕಾರ ಏಪ್ರಿಲ್‌ ಅಂತ್ಯಕ್ಕೆ 10 ಸಾವಿರ ‘ಕೋವಿಡ್‌-19’ ಪ್ರಕರಣಗಳ ಅಂದಾಜು ಹಾಕಿಕೊಂಡು ಮಾಸ್ಕ್‌, ಪಿಪಿಇ ಕಿಟ್‌, ಸ್ಯಾನಿಟೈಸರ್‌ ಖರೀದಿ ಮತ್ತು ತಯಾರಿಕೆಗೆ ಸರ್ಕಾರ ಸಿದ್ಧವಾಗಿದೆ. ಆದರೆ, ಸರ್ಕಾರದ ಲಿಖಿತ ಹೇಳಿಕೆಯಲ್ಲಿ ನೀಡಲಾಗಿರುವ ಅಂಕಿ-ಅಂಶಗಳನ್ನು ಗಮನಿಸಿದರೆ, ಸಾಕಷ್ಟುಕೊರತೆ ಇರುವುದು ಕಂಡು ಬರುತ್ತಿದೆ. ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ ಅಗತ್ಯವಿರುವ ಎಲ್ಲರಿಗೂ ಮಾಸ್ಕ್‌ ದೊರೆಯುವುದನ್ನು ರಾಜ್ಯ ಸರ್ಕಾರ ಖಾತರಿಪಡಿಸಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಕೊರೋನಾ ಭೀತಿ: ರೈಲ್ವೆಯಿಂದ 80 ಸಾವಿರ ಐಸೋಲೇಷನ್‌ ಬೋಗಿ

ಏನೇ​ನು ಸಿದ್ಧತೆ?

1. ಕೋವಿಡ್‌ ತಪಾಸಣೆಗೆ 11 ಸರ್ಕಾರಿ ಹಾಗೂ 4 ಖಾಸಗಿ ಸೇರಿ ರಾಜ್ಯದಲ್ಲಿ 15 ಲ್ಯಾಬ್‌

2. ಈಗಾಗಲೇ 1,574 ವೆಂಟಿಲೇಟರ್‌ಗಳ ಖರೀದಿಗೆ ಆದೇಶ

3. 18.33 ಲಕ್ಷ ಎನ್‌-95 ಮಾಸ್ಕ್‌ ಗಳ ಪೂರೈಕೆಗೆ ಆದೇಶ ನೀಡಲಾಗಿದೆ.

4. 10.05 ಲಕ್ಷ ಪಿಪಿಇಗಳ ಪೈಕಿ 1,82,600 ಪಿಪಿಇ ಸಂಗ್ರಹ ಇದೆ.

5. 49 ಲಕ್ಷ ಮೂರು ಪದರದ ಮಾಸ್ಕ್‌ ಪೈಕಿ 37 ಲಕ್ಷ ಮಾಸ್ಕ್‌ ದಾಸ್ತಾ​ನು

click me!