ನವೀನ್ ಸಾವು ಇಟ್ಟುಕೊಂಡು ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ: ಅಶ್ವತ್ಥನಾರಾಯಣ

By Suvarna NewsFirst Published Mar 2, 2022, 6:59 PM IST
Highlights

* ಉಕ್ರೇನ್‌ನಲ್ಲಿ ಕನ್ನಡಿಗ ನವೀನ್ ಸಾವು
* ಭಾರತ ಶಿಕ್ಷಣ ವ್ಯವಸ್ಥೆ ವಿರುದ್ಧ ಭುಗಿಲೆದ್ದ ಆಕ್ರೋಶ
* ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ ಎಂದ  ಅಶ್ವತ್ಥನಾರಾಯಣ

ಬೆಂಗಳೂರು, (ಮಾ.02): ಭಾರತದಲ್ಲಿ ದುಬಾರಿ ವೈದ್ಯಕೀಯ ಶಿಕ್ಷಣ, ಜಾತಿ ವ್ಯವಸ್ಥೆಯಿಂದ ನಮ್ಮ ದೇಶದ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಓದಿನ ಕನಸು ಹೊತ್ತುಕೊಂಡು ಅಗ್ಗವಾಗಿ ಶಿಕ್ಷಣ ಸಿಗುವ ಉಕ್ರೇನ್ ನಂತಹ ದೇಶಕ್ಕೆ ಹೋಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಈ ಬಗ್ಗೆ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ನವೀನ್ ಅವರ ಅಕಾಲಿಕ ನಿಧನ ನೋವಿನ ಸಂಗತಿಯಾಗಿದೆ. ಈ ದುಃಖದ ಸಮಯದಲ್ಲಿ ಸರಕಾರವು ಅವರ ಕುಟುಂಬದೊಂದಿಗೆ ನಿಲ್ಲಲಿದೆ, ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಬಗ್ಗೆ ಮಾತನಾಡುವುದು ಅನುಚಿತವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Latest Videos

'ವಿಶ್ವಗುರು ಆಗಬೇಕೆಂದು ಹಾತೊರೆಯುವ ಭಾರತದ ಆತ್ಮ ಸಾಕ್ಷಿಗೆ ನವೀನ್ ಸಾವು ಪ್ರಶ್ನೆ'

ಸರಕಾರವು ಕಡುಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಒಂದು ಪ್ರಕರಣವನ್ನು ಇಟ್ಟುಕೊಂಡು ವ್ಯವಸ್ಥೆಯ ಬಗ್ಗೆ ಷರಾ ಬರೆಯುವುದು ಸರಿಯಲ್ಲ ಎಂದರು.

ಇಡೀ ದೇಶದಲ್ಲೇ ನಮ್ಮ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಪರಿಶಿಷ್ಟರಿಗೆ ಉಚಿತವಾಗಿ ‌ನೀಡಲಾಗುತ್ತಿದೆ. ಶೇ.40ರಷ್ಟು ಸೀಟುಗಳನ್ನು ಪ್ರತಿಭಾವಂತ ಬಡವರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ಇದನ್ನು ದೇಶದಾದ್ಯಂತ ಶೇ 60ಕ್ಕೆ ಏರಿಸಬೇಕೆನ್ನುವುದು ಪ್ರಧಾನಿ ಮೋದಿಯವರ ಹಂಬಲವಾಗಿದೆ. ಇದು ಮುಂಬರುವ ವರ್ಷಗಳಲ್ಲಿ ಸಾಧ್ಯವಾಗಬಹುದು ಎಂದು ಹೇಳಿದರು.

ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬಡಕುಟುಂಬದ ಮಕ್ಕಳೂ ವೈದ್ಯರಾಗಬಹುದು. ಇದನ್ನು ವಿರೋಧಿಸುವವರು ಧನದಾಹಿಗಳು ಮತ್ತು ದ್ರೋಹಿಗಳು ಎಂದು ಅಭಿಪ್ರಾಯಪಟ್ಟರು.

ಉಕ್ರೇನಿನಲ್ಲಿದ್ದ 20 ಸಾವಿರ ಭಾರತೀಯರ ಪೈಕಿ ಈಗಾಗಲೇ 2 ಸಾವಿರ ಮಂದಿಯನ್ನು ಕರೆತರಲಾಗಿದೆ. ಉಳಿದವರನ್ನು ಕೂಡ ಸದ್ಯದಲ್ಲೇ ಕರೆದುಕೊಂಡು ಬರಲಾಗುವುದು. ಈ ಸಂಬಂಧ ಉಕ್ರೇನ್, ರಷ್ಯಾ, ಪೋಲೆಂಡ್, ರುಮೇನಿಯಾ ಮುಂತಾದ ದೇಶಗಳೊಂದಿಗೆ ಕೇಂದ್ರ ಸರಕಾರವು ಈಗಾಗಲೇ ಮಾತುಕತೆ ನಡೆಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಇವು ಎಲ್ಲ ಕಾಲದಲ್ಲೂ ಇರುತ್ತವೆ ಎಂದರು.

ನವೀನ್ ತಂದೆಯ ನೋವು
ಭಾರತದಲ್ಲಿ ದುಬಾರಿ ವೈದ್ಯಕೀಯ ಶಿಕ್ಷಣ, ಜಾತಿ ವ್ಯವಸ್ಥೆಯಿಂದ ನಮ್ಮ ದೇಶದ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಓದಿನ ಕನಸು ಹೊತ್ತುಕೊಂಡು ಅಗ್ಗವಾಗಿ ಶಿಕ್ಷಣ ಸಿಗುವ ಉಕ್ರೇನ್ ನಂತಹ ದೇಶಕ್ಕೆ ಹೋಗುತ್ತಾರೆ ಎಂದು ರಷ್ಯಾದ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿರುವ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಜ್ಞಾನ ಗೌಡರ್ ನ ತಂದೆ ಶೇಖರ್ ಗೌಡರ್ ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದಾರೆ. 

ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದರೆ ಕೋಟ್ಯಂತರ ರೂಪಾಯಿ ಲಂಚ ಕೊಡಬೇಕು, ಇದು ಅನೇಕರಿಗೆ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ ಎಂದು ಶೇಖರಪ್ಪ ಗೌಡರ್ ನೋವು ತೋಡಿಕೊಂಡಿದ್ದಾರೆ.

ಎಚ್‌ಡಿಕೆ ಅಸಮಾಧಾನ
ಇನ್ನು ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಶಿಕ್ಷಣ ವ್ಯವಸ್ಥೆ ವಿರುದ್ಧ ಅಮಸಾಧಾನ ಹೊರಹಾಕಿದ್ದಾರೆ.
ವೈದ್ಯಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET), ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ.

ಉಕ್ರೇನ್ʼಗೆ ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ದುರಂತ ಸಾವು ʼ ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖʼವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ. ʼಅರ್ಹತೆʼ ನೆಪದಲ್ಲಿ ಪ್ರತಿಭಾವಂತ ಆರ್ಥಿಕ ದುರ್ಬಲ & ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ  ʼಅನ್ಯಾಯʼಕ್ಕೆ ಅಂತ್ಯ ಹಾಡಬೇಕಿದೆ.

10ನೇ ತರಗತಿಯಲ್ಲಿ 96%, 2ನೇ ಪಿಯುಸಿಯಲ್ಲಿ 97% ಅಂಕ ಗಳಿಸಿದ್ದರೂ ನವೀನ್ʼಗೆ ʼಜಗತ್ತಿನ ಶಿಕ್ಷಣ ಕಾಶಿʼ ಭಾರತದಲ್ಲಿ ವೈದ್ಯಸೀಟು ಸಿಗಲ್ಲ. ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಷ್ಟು ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ಆದರೂ, ಆತನಿಗೆ ನಮ್ಮ ದೇಶದಲ್ಲಿ ವೈದ್ಯಶಿಕ್ಷಣವನ್ನು ನಿರಾಕರಿಸಲಾಗಿದೆ.  ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ಉಕ್ರೇನ್ʼಗೆ ಹೋಗಿ, ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್ ಇಂದು ಜೀವ ಕಳೆದುಕೊಂಡು ʼವಿಶ್ವಗುರುʼ ಆಗಬೇಕೆಂದು ಹಾತೊರೆಯುತ್ತಿರುವ ʼಭಾರತದ ಆತ್ಮಸಾಕ್ಷಿʼಗೆ ಪ್ರಶ್ನೆಯಾಗಿದ್ದಾನೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

click me!