ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ!

Published : Mar 19, 2026, 09:03 PM ISTUpdated : Mar 19, 2026, 10:24 PM IST
Hubballi Accident1

ಸಾರಾಂಶ

ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್ ಮಾಡುವಾಗ ನಡೆದ ಭೀಕರ ಅಪಘಾತದಲ್ಲಿ ಬಿಜೆಪಿ ಮುಖಂಡನ 15 ವರ್ಷದ ಪುತ್ರ ನಮೀಷ್ ಸಂಗಳದ ಮೃತಪಟ್ಟಿದ್ದಾನೆ. ಅತೀ ವೇಗವಾಗಿ ಬೈಕ್ ಮತ್ತು ಆಡಿ ಕಾರು ಚಲಾಯಿಸುವ ಸಾಹಸದ ವಿಡಿಯೋ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದವನೂ ಅಪ್ರಾಪ್ತನಾಗಿದ್ದ.

ವರದಿ: ಗುರುರಾಜ್‌ ಹೂಗಾರ್‌, ಏಷ್ಯಾನೆಟ್‌ ಸುವರ್ಣನ್ಯೂಸ್‌ ಹುಬ್ಬಳ್ಳಿ ಪ್ರತಿನಿಧಿ

ಹುಬ್ಬಳ್ಳಿ (ಮಾ.19): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ 'ರೀಲ್ಸ್' ಕ್ರೇಜ್ ಮತ್ತೊಂದು ಬಲಿ ಪಡೆದಿದೆ. ಅತೀ ವೇಗವಾಗಿ ವಾಹನ ಚಲಾಯಿಸುವ ಸಾಹಸದ ವಿಡಿಯೋ ಮಾಡಲು ಹೋಗಿ, ಸ್ಥಳೀಯ ಬಿಜೆಪಿ ಮುಖಂಡ ವಿರೇಶ್ ಸಂಗಳದ ಅವರ ಪುತ್ರ ನಮೀಷ್ ಸಂಗಳದ (15) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಎರಗಿದೆ.

ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ್, ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ ಮನೆಗೆ ಬಂದಿದ್ದ. ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಸೇರಿ ಶೇಜವಾಡಕ್ಕರ್ ಪ್ಲಾಟ್‌ಗೆ ರೀಲ್ಸ್ ಮಾಡಲು ತೆರಳಿದ್ದ. ಅಲ್ಲಿ ಅತೀ ವೇಗವಾಗಿ ಬೈಕ್ ಮತ್ತು ಆಡಿ (AUDI) ಕಾರು ಚಲಾಯಿಸುವ 'ಸ್ಟಂಟ್ ಹಾಗೂ ಕ್ರ್ಯಾಶ್' ರೀಲ್ಸ್ ಚಿತ್ರೀಕರಿಸಲು ಈ ಬಾಲಕರು ಮುಂದಾಗಿದ್ದರು.

ಆಘಾತಕಾರಿ ವಿಷಯವೆಂದರೆ, ಅಪಘಾತಕ್ಕೆ ಕಾರಣವಾದ ಆಡಿ ಕಾರನ್ನು ಚಲಾಯಿಸುತ್ತಿದ್ದವನು ಕೂಡ 15 ವರ್ಷದ ಅಪ್ರಾಪ್ತ ಬಾಲಕನೇ ಆಗಿದ್ದ. ರೀಲ್ಸ್ ಮಾಡುವ ಭರದಲ್ಲಿ ಅತೀ ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ನಮೀಷ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಸ್ಥಳಕ್ಕೆ ಕಮಿಷನರ್ ಭೇಟಿ

ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲೈಸೆನ್ಸ್ ಇಲ್ಲದಿದ್ದರೂ ಬಾಲಕನ ಕೈಗೆ ದುಬಾರಿ ಕಾರು ನೀಡಿದ್ದು ಯಾರು? ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಪ್ರಾಣದ ಹಂಗು ತೊರೆದು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ಸಂಗಳದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌

ರೀಲ್ಸ್ ಹುಚ್ಚಾಟದ ಭೀಕರ ಅಪಘಾತದ ಕ್ಷಣ ಕ್ಷಣದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವೇಗವಾಗಿ ಬಂದ ಆಡಿ (AUDI) ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ, ನಮೀಷ್ ಸಂಗಳದ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ತಕ್ಷಣ ಸ್ಥಳೀಯರು ಆಡಿ ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆತ ತನ್ನ ತಪ್ಪಿಲ್ಲ ಎಂದು ಹೇಳಿದ್ದಾನೆ. "ನಾನು ಕಾರನ್ನು ನಿಲ್ಲಿಸಿದ್ದೆ, ಅವನೇ (ನಮೀಷ್) ಓಲಾ ಸ್ಕೂಟಿಯಲ್ಲಿ ವೇಗವಾಗಿ ಬಂದು ನನಗೆ ಗುದ್ದಿದ್ದಾನೆ. ಇದರಲ್ಲಿ ನನ್ನದೇನು ತಪ್ಪಿಲ್ಲ" ಎಂದಿದ್ದಾನೆ.

ವಿಚಾರಣೆ ವೇಳೆ ತನಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲ ಎಂಬ ವಿಷಯವನ್ನು ಸ್ವತಃ ಅಪ್ರಾಪ್ತ ಚಾಲಕ ಒಪ್ಪಿಕೊಂಡಿದ್ದಾನೆ. ಮೃತ ನಮೀಷ್ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಬಾಲಕ ಇಬ್ಬರೂ ಒಂದೇ ಓಣಿಯವರಾಗಿದ್ದು, ಪರಿಚಯಸ್ಥರೇ ಆಗಿದ್ದರು ಎಂದು ತಿಳಿದುಬಂದಿದೆ. "ವೇಗವಾಗಿ ಬಂದು ಗುದ್ದಿದ್ದೇ ನಮೀಷ್" ಎಂದು ಆತ ಹೇಳುತ್ತಿದ್ದರೂ, ಅಪಘಾತದ ತೀವ್ರತೆ ಮತ್ತು ಕಾರಿನ ವೇಗ ಕಂಡು ಸಾರ್ವಜನಿಕರು ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಡಿಜೆ, ಐಟಂ ಸಾಂಗ್‌ ಬ್ಯಾನ್‌ಗೆ ಸರ್ಕಾರದ ಚಿಂತನೆ; ಇದಕ್ಕೆ ಬಿಜೆಪಿ ಒಪ್ಪಿಗೆಯೂ ಬೇಕೆಂದ ಸಚಿವ ತಂಗಡಗಿ!
ಸರ್ಕಾರಿ ನೌಕರರ ವರ್ಗಾವಣೆಗೆ 'ಸಿಎಂ ಹಸ್ತಕ್ಷೇಪ' ಸಲ್ಲದು, ಮಾಡಲು ಇದಕ್ಕಿಂತ ದೊಡ್ಡ ಕೆಲಸಗಳಿವೆ - ಹೈಕೋರ್ಟ್ ತರಾಟೆ!