ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಸೆಪ್ಟೆಂಬರ್.12): ಅಯೋಧ್ಯೆಯ ರಾಮಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ವರ್ಣದ ಬಾಲರಾಮನ ಪ್ರತಿಮೆ ಸ್ಥಾಪನೆಯಾಗಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಮುಖರ ಮಹತ್ವದ ಸಭೆ ಭಾನುವಾರ ನಡೆಯಿತು.ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ಟ್ರಸ್ಟಿನ ವಿಶ್ವಸ್ಥ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಹಿತ ಹಲವು ಪ್ರಮುಖರು ಭಾಗಿಯಾಗಿದ್ದರು. ವಿಶ್ವಸ್ಥರ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿರುವ ಸ್ವಾಮೀಜಿ, 2024ನೇ ಇಸವಿ ಮಕರ ಸಂಕ್ರಾಂತಿಯ ಸಮಯದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ಆಗಬೇಕೆಂಬ ತೀರ್ಮಾನವಾಗಿದೆ.ಆ ವೇಳೆ ರಾಮೇಶ್ವರದಿಂದ ಕಾಶ್ಮೀರದವರೆಗೆ ರಥಯಾತ್ರೆ ಕೈಗೊಳ್ಳಬೇಕು ಎಂಬ ಸಲಹೆ ನೀಡಿರುವುದಾಗಿ ಹೇಳಿದರು.
ಅಯೋಧ್ಯೆ ರಾಮಮಂದಿರ ಗರ್ಭಗುಡಿಯ ಮೊದಲ ಚಿತ್ರ, ಇದೇ ಸ್ಥಳದಲ್ಲಿ ಇರಲಿದ್ದಾನೆ ರಾಮಲಲ್ಲಾ!
ದೇಶದ ನಾಗರಿಕರೆಲ್ಲ ರಾಮಮಂದಿರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಗೊಳಿಸುವುದು ಯಾತ್ರೆಯ ಉದ್ದೇಶ.ದೇಶದ ಜನತೆಯನ್ನು ಆಹ್ವಾನಿಸುವ ನಿಟ್ಟಿನಲ್ಲಿ ಈ ಯಾತ್ರೆ ಕೈಗೊಳ್ಳಬೇಕು ಎಂದರು.
ಯಾತ್ರೆ ಕರ್ನಾಟಕ ತಲುಪಿದಾಗ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧಾರ ಮಾಡಿದ್ದೇವೆ.ಸ್ವರ್ಣ ಶಿಖರ ತಯಾರಿಸಿ ಯಾತ್ರೆಯ ಮೂಲಕ ಕೊಂಡೊಯ್ಯುವ ಇಚ್ಛೆಯಿದೆ. ಈ ಸ್ವರ್ಣ ಶಿಖರವನ್ನು ಅಯೋಧ್ಯ ರಾಮಮಂದಿರದ ಗರ್ಭಗುಡಿಯ ಮೇಲೆ ಇರಿಸುವುದು ಭಕ್ತರ ಇಚ್ಛೆ.ಕರ್ನಾಟಕದ ಸ್ವರ್ಣ ಶಿಖರವನ್ನು ಅಯೋಧ್ಯೆಯ ರಾಮನಿಗೆ ಸಮರ್ಪಿಸಬೇಕು ಎಂಬ ಆಸೆಯಿದೆ ಎಂದು ತಿಳಿಸಿದರು.
ದೇಶಾದ್ಯಂತ ಈ ಯಾತ್ರೆ ಸಂಚರಿಸುವಾಗ ಆಯಾ ಕ್ಷೇತ್ರಕ್ಕೂ ಅಯೋಧ್ಯೆಗೂ ಸಂಬಂಧ ಮರುಕಲ್ಪಿಸಬೇಕು.ಅಯೋಧ್ಯೆಯ ವಿಮೋಚನೆಗೋಸ್ಕರ ಆಯಾ ಪ್ರಾದೇಶಿಕ ಪ್ರದೇಶಗಳಲ್ಲಿ ಅನೆರಕರು ಜೀವತೆತ್ತವರಿದ್ದಾರೆ.ಅಂಥವರನ್ನು ಸ್ಮರಿಸಿ ಯಾತ್ರೆ ಸಾಗಬೇಕು ಎಂಬುದು ನಮ್ಮ ಇಚ್ಛೆ ಎಂದು ಮಾಹಿತಿ ನೀಡಿದರು.
508 ದಿನಗಳಲ್ಲಿ ನನಸಾಗಲಿದೆ ಮೂರು ದಶಕದ ಕನಸು!
ರಾಮಾಯಣದ ಕಥೆಯಲ್ಲಿ ಹನುಮಂತನ ಪಾತ್ರ ದೊಡ್ಡದು.ಹನುಮಂತ ನಿಲ್ಲದ ರಾಮಾಯಣ ಊಹಿಸಲು ಸಾಧ್ಯವಿಲ್ಲ.ಅಂತಹ ಹನುಮನ ಅವತಾರದ ಕ್ಷೇತ್ರ ನಮ್ಮ ಕರ್ನಾಟಕ.ಇದು ಕನ್ನಡಿಗರಿಗೆ ತುಂಬಾ ಹೆಮ್ಮೆಯ ವಿಚಾರ. ಆ ಸಂಬಂಧವನ್ನು ಶಾಶ್ವತಗೊಳಿಸಲು ಉಳಿಸಲು ಸ್ವರ್ಣ ಶಿಖರ ಸಲ್ಲಿಸಲು ತೀರ್ಮಾನ.ಮುಂದಿನ ಜನಾಂಗಕ್ಕೂ ಆ ಪ್ರಜ್ಞೆ ಉಳಿಯಬೇಕೆಂಬುದು ನಮ್ಮ ಆಶಯ.ಯಾತ್ರೆಯ ವೇಳೆ ಆಯಾ ಪ್ರದೇಶಗಳಲ್ಲಿ ವಿಚಾರ ವಿನಿಮಯ ಚಿಂತನಮಂತನ ನಡೆಸಲು ಯಾತ್ರೆಯಿಂದ ಅನುಕೂಲ ಎಂದರು.
ಬಾಲ ರಾಮನ ನೀಲ ಪ್ರತಿಮೆ
ಭಾನುವಾರ ನಡೆದ ಸಭೆಯಲ್ಲಿ ಶ್ರೀರಾಮ ದೇವರ ಪ್ರತಿಮೆ ಹೇಗಿರಬೇಕು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆದು ನಿರ್ಣಯಕ್ಕೆ ಬರಲಾಗಿದೆ .ಹಿರಿಯ ರಾಮನೋ ಅಥವಾ ಬಾಲರಾಮನೋ ಎಂಬ ಬಗ್ಗೆ ಚರ್ಚೆ ನಡೆಸಿದವು. ಹಿಂದಿನಿಂದಲೂ ಅಲ್ಲಿ ಬಾಲರಾಮನ ಸನ್ನಿಧಾನ ಇತ್ತು.ಹಾಗಾಗಿ ಬಾಲರಾಮನ ಪ್ರತಿಮೆಯನ್ನೇ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಕರಿ ಶಿಲೆ ಅಥವಾ ಬಿಳಿ ಶಿಲೆ ಬಳಸುವ ಬಗ್ಗೆ ಚರ್ಚೆ ನಡೆಯಿತು.ಉತ್ತರ ಭಾರತದಲ್ಲಿ ಕರಿ ಶಿಲೆಯ ಪ್ರತಿಮೆ ಮಾಡುವುದಿಲ್ಲ.ಬಿಳಿಶಿಲೆಯ ಜೊತೆ ಉತ್ತರ ಭಾರತೀಯರಿಗೆ ಭಾವನಾತ್ಮಕ ಸಂಬಂಧವಿದೆ. ರಾಮದೇವರ ಕೃಷ್ಣದೇವರ ಮೈಬಣ್ಣ ನೀಲ.ಅವರದ್ದು ನೀಲಿ ಗೆ ಹತ್ತಿರವಿರುವ ಮೈಬಣ್ಣ.ಹಾಗಾಗಿ ಅಂತಹ ಬಣ್ಣದ ಶಿಲೆಯಿಂದಲೇ ಬಾಲರಾಮನ ಪ್ರತಿಮೆ ನಿರ್ಮಾಣವಾಗಲಿದೆ.ಪೂರ್ಣ ಬಿಳಿ ಶಿಲೆಯ ಬದಲಾಗಿ ನೀಲ ಛಾಯೆಯ ಪ್ರತಿಮೆ ನಿರ್ಮಾಣ ಮಾಡಲಿದ್ದೇವೆ ಎಂದು ವಿವರಿಸಿದರು.
ತುಂಬಾ ಎತ್ತರದ ಪ್ರತಿಮೆ ಮಾಡಿದರೆ ಬಾಲರಾಮನ ಕುರುಹು ಕಾಣುವುದಿಲ್ಲ.ಹಾಗಾಗಿ ಕಣ್ಣಳತೆಗೆ ಸರಿಯಾಗಿ ಪುಟ್ಟ ವಿಗ್ರಹ ಇರಬೇಕು.ಕಣ್ಣಳತೆಗೆ ಸರಿಯಾಗಿ ರಾಮದೇವರ ಮುಖ ಬರುವಂತೆ ವಿಗ್ರಹ ನಿರ್ಮಾಣವಾಗಲಿದ್ದು, ವಿಗ್ರಹ ನಿರ್ಮಾಣಕ್ಕೆ ಸುಮಾರು ಎಂಟು ತಿಂಗಳು ಬೇಕಾಗಬಹುದು. ಪ್ರಾಣ ಪ್ರತಿಷ್ಠೆಗಿಂತ ಎರಡು ತಿಂಗಳು ಮೊದಲು ವಿಗ್ರಹ ನಿರ್ಮಾಣಪೂರ್ಣಗೊಳ್ಳಬೇಕುಅದಕ್ಕನುಗುಣವಾಗಿ ಕಾರ್ಯ ಸೂಚಿ ಸಿದ್ಧಪಡಿಸಲಾಗಿದೆ.ಪ್ರತಿಮೆ ನಿರಗಮಾಣಕ್ಕೆ ಅನುಕೂಲಕರವಾದ ಶಿಲೆಯ ಹುಡುಕಾಟ ನಡೆಯಲಿದೆ. 2024 ಪ್ರಾರಂಭದಲ್ಲಿ ಪ್ರತಿಮೆ ನಿರ್ಮಾಣ ಪ್ರಾರಂಭವಾಗುತ್ತೆ ಎಂದು ಸ್ಪಷ್ಟಪಡಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಈಗಲೂ ಕೂಡ ಜನರು ಭಕ್ತಿಯಿಂದ ಕಾಣಿಕೆ ಸಲ್ಲಿಸುತ್ತಿದ್ದಾರೆ.ಪ್ರತಿ ವರ್ಷ ಸುಮಾರು 100 ಕೋಟಿ ಅಷ್ಟು ದೇಣಿಗೆ ಸಂಗ್ರಹವಾಗುತ್ತಿದೆ.ಹಣದ ವಿನಿಯೋಗ ಸರಿಯಾದ ರೀತಿಯಲ್ಲಿ ಮಾಡುತ್ತೇವೆ.ಮಂದಿರ ನಿರ್ಮಾಣ ಮಾಡಲು ಮುಂದಾದಾಗ 400 ಕೋಟಿ ಆಗಬಹುದು ಎಂದು ಭಾವಿಸಿದ್ದೆವು.ಆದರೆ ಎಲ್ಲಾ ಲೆಕ್ಕಾಚಾರ ಪೂರ್ಣಗೊಳ್ಳುವಾಗ 1300 ಕೋಟಿ ಖರ್ಚು ವೆಚ್ಚ ಬರುತ್ತೆ ಎಂದರು.
ರಾಮಮಂದಿರದ ನಿರ್ಮಾಣ ಕುರಿತು ಹೋರಾಟ ಮಾಡಿದವರು ನಮ್ಮ ಗುರುಗಳು. ವಿಶ್ವೇಶ ತೀರ್ಥರ ಪಾತ್ರ ಏನೆಂಬುದು ಇಡೀ ಜಗತ್ತಿಗೆ ಗೊತ್ತು. ಮೊನ್ನೆವರೆಗೂ ಪೂಜಿಸಲ್ಪಡುತ್ತಿದ್ದ ಬಾಲರಾಮನನ್ನು ಪ್ರತಿಷ್ಠಾಪಿಸಿದವರು ವಿಶ್ವೇಶ ತೀರ್ಥರು.ಗುರುಗಳ ಸೇವೆಯಿಂದಾಗಿ ನನಗೆ ಅಲ್ಲಿ ವಿಶ್ವಸ್ಥನಾಗುವ ಭಾಗ್ಯ ಸಿಕ್ಕಿದೆ.ಎಲ್ಲಾ ಬೆಳವಣಿಗೆಗಳನ್ನು ನಾನು ಗುರುಗಳಿಗೆ ಸಮರ್ಪಿಸುತ್ತೇನೆ ಎಂದು ವಿಶ್ವ ಪ್ರಸನ್ನ ತೀರ್ಥರು ಹೇಳಿದರು.