
ಉಡುಪಿ (ಆ.21): ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದು, ಎರಡು ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಪೊಲೀಸ್ ಠಾಣೆಗೆ ಹಾಜರಾಗಿರಲಿಲ್ಲ. ಪೊಲೀಸರ ನೊಟೀಸ್‌ಗೂ ಉತ್ತರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಬ್ರಹ್ಮಾವರ ಪೊಲೀಸ್ ಠಾಣೆ ಬಳಿ ಭಾರೀ ಜನಸಂದಣಿಗೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ತಿಮರೋಡಿ ವಶಕ್ಕೆ ಪಡೆಯಲು ಪ್ರಮುಖ ಕಾರಣಗಳು
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದಿರುವುದನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಖಚಿತಪಡಿಸಿದ್ದಾರೆ. ತಿಮರೋಡಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿದ ಎರಡು ನೋಟಿಸ್‌ಗಳಿಗೆ ಅವರು ಸೂಕ್ತ ಉತ್ತರ ನೀಡದಿರುವುದು, ಹಾಗೂ ಅವರು ಈ ಹಿಂದೆ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು, ಅಂದರೆ ಅವರು 'ಪುನರಾವರ್ತಿತ ಆರೋಪಿ' ಆಗಿರುವುದು ಅವರನ್ನು ವಶಕ್ಕೆ ಪಡೆಯಲು ಪ್ರಮುಖ ಕಾರಣಗಳಾಗಿವೆ ಎಂದು ಎಸ್.ಪಿ. ತಿಳಿಸಿದ್ದಾರೆ.
ಠಾಣೆ ಬಳಿ ಬಿಗುವಿನ ವಾತಾವರಣ:
ತಿಮರೋಡಿ ಅವರನ್ನು ಬ್ರಹ್ಮಾವರ ಠಾಣೆಗೆ ಕರೆತರುವ ಸುದ್ದಿ ತಿಳಿದು, ಅವರ ಬೆಂಬಲಿಗರು ಹಾಗೂ ಧರ್ಮಸ್ಥಳ ಸ್ವ-ಸಹಾಯ ಸಂಘದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಠಾಣೆಯ ಆಸುಪಾಸಿನಲ್ಲಿ ಜಮಾಯಿಸಿದರು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ನೆರೆದಿದ್ದ ಜನರನ್ನು ಅಲ್ಲಿಂದ ತೆರಳುವಂತೆ ಸೂಚನೆ ನೀಡಿದರು ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬ್ರಹ್ಮಾವರ ಆಸುಪಾಸಿನ ರಸ್ತೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಠಾಣೆಯ ಸುತ್ತಲೂ ವಾಹನ ಮತ್ತು ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಹೆಚ್ಚಿಸಲಾಗಿದೆ. ಗುಂಪು ಸೇರುವುದು ಅಥವಾ ಪ್ರತಿಭಟನೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಎಸ್.ಪಿ. ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.
ವಕೀಲರ ಆಗಮನ, ಬೆಂಬಲಿಗರ ಜೈಕಾರ:
ತಿಮರೋಡಿ ಅವರನ್ನು ಠಾಣೆಗೆ ಕರೆತರುವ ಮುನ್ನವೇ, ಇಬ್ಬರು ವಕೀಲರಾದ ದೀಪಕ್ ನಾವುಂದ ಮತ್ತು ಪ್ರಮೋದ್ ಹಂದೆ ಜಾಮೀನು ಪತ್ರ ಹಾಗೂ ಅಗತ್ಯ ಭದ್ರತಾ ಠೇವಣಿಗಳ ಜೊತೆ ಬ್ರಹ್ಮಾವರ ಠಾಣೆಗೆ ಆಗಮಿಸಿದ್ದರು. ತಿಮರೋಡಿ ವಿರುದ್ಧ ಎರಡು ಜಾಮೀನು ರಹಿತ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ನಡುವೆ, ಕಾರ್ಕಳ ಮಾರ್ಗವಾಗಿ ಉಡುಪಿಗೆ ಬರುತ್ತಿದ್ದ ತಿಮರೋಡಿ ಅವರನ್ನು ಕಾರ್ಕಳದ ಜೋಡುಕಟ್ಟೆಯಲ್ಲಿ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿ ಜೈಕಾರ ಕೂಗಿದರು. ಈ ಬೆಳವಣಿಗೆಯಿಂದಾಗಿ ಪೊಲೀಸರು ಮತ್ತು ಸ್ಥಳೀಯರ ನಡುವೆ ಕ್ಷಣಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ