ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿದ್ಯಾದಶಮಿ!

By Santosh NaikFirst Published Oct 5, 2022, 6:32 PM IST
Highlights

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಅಕ್ಷರಾಭ್ಯಾಸವನ್ನು ಆಚರಿಸಲಾಗಿದೆ. ಕೇರಳದ ಭಕ್ತರಿಂದ ಮೂಕಾಂಬಿಕಾ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಲಾಗಿದೆ. ಮಕ್ಕಳ ನಾಲಗೆಯಲ್ಲಿ ಓಂಕಾರ ಬರಹ ಬರೆಯಲಾಗಿದೆ.
 

ಉಡುಪಿ (ಅ.5): ವಿಜಯದಶಮಿಯನ್ನು ವಿದ್ಯಾದಶಮಿ ಅಂತಲೂ ಆಚರಿಸಲಾಗುತ್ತೆ. ಶಕ್ತಿಯ ಆರಾಧನೆ ನಡೆಯುವ ಕರಾವಳಿಯ ದೇವಸ್ಥಾನಗಳಲ್ಲಿ ಅದರಲ್ಲೂ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ  ದಶಮಿಯಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಗುತ್ತದೆ. ತಮ್ಮ ಮಕ್ಕಳು ಜ್ಞಾನ ಸಂಪನ್ನರಾಗಬೇಕು ಅನ್ನೋ ಆಶಯ ಹೊತ್ತ ಹೆತ್ತವರ ದಂಡೇ ದೇವಸ್ಥಾನದಲ್ಲಿ ಸೇರುತ್ತದೆ. ನಮ್ಮ ಜೀವನದಲ್ಲಿ ನಾವು ಆಚರಿಸುವ ಹಬ್ಬಗಳು ಅದೆಷ್ಟು ಹಾಸುಹೊಕ್ಕಾಗಿವೆ ಅನ್ನೋದಕ್ಕೆ ಸಾಕ್ಷಿ ವಿಜಯದಶಮಿ. ವಿಜಯ ದಶಮಿಯನ್ನು ಕರಾವಳಿ ಭಾಗದಲ್ಲಿ ವಿದ್ಯಾದಶಮಿ ಅಂತನೂ ಕರೆಯಲಾಗುತ್ತೆ. ಈ ದಿನ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಿದರೆ ಅವರ ಜೀವನ ಜ್ಞಾನ ಸಮೃದ್ಧವಾಗುತ್ತೆ ಅನ್ನೋದು ನಂಬಿಕೆ. ಹಾಗಾಗಿ ದೇವಿಯ ಆಲಯಗಳಲ್ಲಿ ಸಾವಿರಾರು ಪೋಷಕರು ಮಕ್ಕಳಿಗೆ ವಿದ್ಯಾರಂಭ ಸಂಪ್ರದಾಯವನ್ನು ನೆರವೇರಿಸುತ್ತಾರೆ. ಉಡುಪಿಯ ಪ್ರಸಿದ್ದ ಶಕ್ತಿ ಕೇಂದ್ರವಾಗಿರುವ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ನೂರಾರು ಪೋಷಕರು ಪುಟ್ಟಪುಟ್ಟ ಮಕ್ಕಳನ್ನು ತೋಳಲ್ಲಿ ಹೊತ್ತು ಬಂದು, ದೇವಿಯ ಸನ್ನಿದಾನದಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಕಳೆದ ಒಂಬತ್ತು ದಿನಗಳ ಕಾಲ ನವರಾತ್ರಿಯ ಸಂಭ್ರಮದಲ್ಲಿದ್ದ ದೇವಳದ ಆವರಣದಲ್ಲಿ, ಇವತ್ತು ಪುಟ್ಟ ಮಕ್ಕಳ ಕಲರವ ಮೇಳೈಸಿತ್ತು.

ತಾಯಿಯೇ ಮೊದಲ ಗುರು ಅಂತಾರೆ, ಪ್ರತಿಯೊಬ್ಬ ತಾಯಿಯೂ ದೇವರ ಸಮ್ಮುಖದಲ್ಲಿ ಕುಳಿತು, ಹರವಿದ ಅಕ್ಕಿಯ ರಾಶಿಯಲ್ಲಿ ಮಕ್ಕಳ ಮೂಲಕ ಅಕ್ಷರ ಮೂಡಿಸುವುದು ವಿದ್ಯಾರಂಭದ ಸಂಪ್ರದಾಯ. ಓಂ ಕಾರ, ಶ್ರೀಕಾರಗಳನ್ನು ಬರೆದು, ಬಳಿಕ ಕನ್ನಡ ಅಕ್ಷರಮಾಲೆಯನ್ನು ಅಕ್ಕಿಯ ರಾಶಿಯಲ್ಲಿ ಮೂಡಿಸುವುದು ಪದ್ಧತಿ. ಕೇರಳ ರಾಜ್ಯದ ಪ್ರತಿಯೊಬ್ಬ ಮೂಕಾಂಬಿಕೆ ಭಕ್ತರು, ಕೊಲ್ಲೂರಿನಲ್ಲೇ ತಮ್ಮ ಮಕ್ಕಳ ಮೊದಲ ಅಕ್ಷರಾಭ್ಯಾಸ ಮಾಡಿಸಬೇಕು ಎಂಬ ಕನಸು ಹೊತ್ತಿರುತ್ತಾರೆ.  

ಕೊಲ್ಲೂರು ಮೂಕಾಂಬಿಕೆಗೆ ನೂತನ ಬ್ರಹ್ಮರಥ ಸಿದ್ದ, 4 ಶತಮಾನಗಳ ಬಳಿಕ ಹೊಸ 'ರಥೋ'ತ್ಸವ

ಆದ್ದರಿಂದಲೇ ಅತಿ ಹೆಚ್ಚು ಸಂಖ್ಯೆಯ ಕೇರಳಿಗರು ಈ ದಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿರುವ ಕೇರಳ ರಾಜ್ಯದ ಜನರ ಮೊದಲ ಅಕ್ಷರಾಭ್ಯಾಸ ಆಗುವುದು ಕನ್ನಡದ ನೆಲದಲ್ಲಿ ಅನ್ನೋದೇ ಹೆಮ್ಮೆಯ ವಿಚಾರ.

Udupi; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ

ಮಕ್ಕಳ ಭವಿಷ್ಯದ ಬಗ್ಗೆ ನೂರು ಕನಸು ಹೊತ್ತ ಪೋಷಕರ ಮುಖದಲ್ಲಿ ಅದೇನೋ ಧನ್ಯತೆ ಕಾಣುತ್ತಿತ್ತು. ನಂಬಿಕೆಯೇ ಜೀವನ ಅಂತಾರಲ್ಲ, ಪ್ರತಿಯೊಂದು ಹಬ್ಬವನ್ನು ಜನರು ತಮ್ಮ ನಂಬಿಕೆಗಳ ತಳಗಟ್ಟಿನಲ್ಲಿ ಆಚರಿಸೋದರಿಂದಲೇ ಅವಕ್ಕೆಲ್ಲಾ ವಿಶೇಷ ಮಹತ್ವ ಇದೆ ಅಲ್ವಾ?

click me!