ಉಡುಪಿ ಕೃಷ್ಣ ಮಠದ ಭಕ್ತರಿಗೊಂದು ಸಿಹಿ ಸುದ್ದಿ

By Web DeskFirst Published Jan 30, 2019, 11:26 AM IST
Highlights

ಉಡುಪಿ ಶ್ರೀ ಕೃಷ್ಣ ಮಠದ ಭಕ್ತರಿಗೆ ಇಲ್ಲಿದೆ ಶುಭ ಸುದ್ದಿ. ಮುಂದಿನ ವರ್ಷದಿಂದ ಉಡುಪಿ ಕೃಷ್ಣ ಮಠಕ್ಕೆ ನಿತ್ಯ ಆಗಮಿಸುವ ಹತ್ತಾರು ಸಾವಿರ ಭಕ್ತರಿಗೆ ಶುದ್ಧ ಸಾವಯವ ಅಕ್ಕಿಯಿಂದ ತಯಾರಿಸಿದ ಅನ್ನ ಪ್ರಸಾದವನ್ನು ಬಡಿಸಲಾಗುತ್ತದೆ.

ಉಡುಪಿ : ಉಡುಪಿ ಕೃಷ್ಣ ಮಠದ ಭಕ್ತರಿಗೆ ಇಲ್ಲಿದೆ ಒಂದು ಶುಭ ಸುದ್ದಿ.  ಮುಂದಿನ ವರ್ಷದಿಂದ ಉಡುಪಿ ಕೃಷ್ಣ ಮಠಕ್ಕೆ ನಿತ್ಯ ಆಗಮಿಸುವ ಹತ್ತಾರು ಸಾವಿರ ಭಕ್ತರಿಗೆ ಶುದ್ಧ ಸಾವಯವ ಅಕ್ಕಿಯಿಂದ ತಯಾರಿಸಿದ ಅನ್ನ ಪ್ರಸಾದವನ್ನು ಬಡಿಸಲಾಗುತ್ತದೆ.

2020ರ ಜನವರಿ 18ರಂದು ಉಡುಪಿಯ ಅದಮಾರು ಮಠದ ಪರ್ಯಾಯೋತ್ಸವ ನಡೆಯಲಿದೆ. ಅಂದರೇ ಮುಂದಿನ 2 ವರ್ಷಗಳ ಕಾಲ ಕೃಷ್ಣ ಮಠದಲ್ಲಿ ಕೃಷ್ಣನ ಪೂಜೆಯ ಅಧಿಕಾರ ಮತ್ತು ನಿತ್ಯ ಹತ್ತಾರು ಸಾವಿರ ಭಕ್ತರಿಗೆ ಅನ್ನದಾಸೋಹದ ಕರ್ತವ್ಯ  ಅದಮಾರು ಮಠದ್ದಾಗಿರುತ್ತದೆ.

ಇದಕ್ಕೆ ಪೂರ್ವಭಾವಿಯಾಗಿ ಮುಂದಿನ 2 ವರ್ಷಗಳ ಕಾಲ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನದ ಊಟಕ್ಕೆ ಬೇಕಾಗುವ ಅಕ್ಕಿಯನ್ನು ಸಂಗ್ರಹಿಸುವ "ಅಕ್ಕಿ ಮುಹೂರ್ತ" ಬುಧವಾರ ಅದಮಾರು ಮಠದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಅಕ್ಕಿಯ ಮುಡಿಗಳನ್ನು ರಥಬೀದಿಯಲ್ಲಿ ಮಂಗಳ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ಮಾಡಿ, ಕೃಷ್ಣ ಮಠದಲ್ಲಿ ಪೂಜೆ ಸಲ್ಲಿಸಿ, ಪುನಃ ಅದಮಾರು ಮಠಕ್ಕೆ ತಂದು ವಿದ್ಯುಕ್ತವಾಗಿ ಮುಹೂರ್ತ ನಡೆಸಲಾಯಿತು.

 ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಕಾಲ ಕೃಷ್ಣಮಠದಲ್ಲಿ ಸಾವಯವ ಅಕ್ಕಿ ಮತ್ತು ತರಕಾರಿಗಳಿಂದ ಅಡುಗೆಯನ್ನು ತಯಾರಿಸಲಾಗುತ್ತದೆ ಎಂದು ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ  ಘೋಷಿಸಿದರು.

ಅದಕ್ಕಾಗಿ 18 ದೇಸಿ ತಳಿಯ ಅಕ್ಕಿಯನ್ನು ಅಯ್ಕೆ ಮಾಡಲಾಗಿದೆ. ಈ ಅಕ್ಕಿಯನ್ನು ಸಾವಯವ ರೀತಿಯಲ್ಲಿ ಬೆಳೆಸುವ ರೈತರಿಂದ ನೇರವಾಗಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯವರ್ತಿಗಳಿಲ್ಲದೇ ರೈತರಿಗೆ ಲಾಭವಾಗಲಿದೆ, ಭಕ್ತರಿಗೂ ಆರೋಗ್ಯಕರ ಊಟ ಸಿಗಲಿದೆ, ವಿನಾಶದ ಅಂಚಿನಲ್ಲಿರುವ ಅಕ್ಕಿ ತಳಿಗಳನ್ನು ಉಳಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾವಯವ ದಾಸೋಹದ ಸಂಕಲ್ಪ ಮಾಡಲಾಗಿದೆ ಎಂದು ಶ್ರೀಗಳು ಹೇಳಿದರು. 

click me!