ಉಪರಾಷ್ಟ್ರಪತಿ ಶ್ಲಾಘನೆಗೆ ಉಡುಪಿಯ ಧೀರ ಆಶಾ ಕಾರ್ಯಕರ್ತೆಯ ಮನದ ಮಾತು..!

By Suvarna NewsFirst Published Jul 26, 2020, 6:47 PM IST
Highlights

ಕೊರೋನಾ ನಡುವೆ ಅಪರಾತ್ರಿ, ತಾನೇ ಆಟೋ ಓಡಿಸಿ ಗರ್ಭಿಣಿಯನ್ನು ಆಸ್ಪತ್ರೆ ಸೇರಿಸಿದ ರಾಜೀವಿ ಅವರ ಕಾರ್ಯಕ್ಕೆ ಉಪರಾಷ್ಟ್ರಪತಿ ಶ್ಲಾಘಿಸಿದ್ದಾರೆ. ಇದಕ್ಕೆ ರಾಜೀವಿ ಮನದ ಮಾತುಗಳು ಈ ಕೆಳಗಿನಂತಿವೆ.

ಉಡುಪಿ, (ಜುಲೈ.26): ಕೊರೋನಾದ ವಿರುದ್ಧ ರಾತ್ರಿಹಗಲೆನ್ನದೇ ದುಡಿಯುತ್ತಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಆಶಾ ಕಾರ್ಯಕರ್ತೆ ರಾಜೀವಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

  ಸ್ವತಃ ಆಟೋ ಚಾಲಕಿಯೂ ಆಗಿರುವ ರಾಜೀವಿ, ಗುರುವಾರ ಮುಂಜಾವ 3 ಗಂಟೆಗೆ ಹೆರಿಗೆ ನೋವಿನಿಂದ ನರಳುತಿದ್ದ ತುಂಬು ಗರ್ಭಿಣಿಯೊಬ್ಬರನ್ನು ತಮ್ಮ ಆಟೋದಲ್ಲಿ ಪೆರ್ಣಂಕಿಲದಿಂದ 20 ಕಿಮಿ ದೂರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ದಾಖಲಿಸಿ, ಆಕೆಯ ಸುಖ ಪ್ರಸವಕ್ಕೆ ಕಾರಣರಾಗಿದ್ದಾರೆ.

ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ಆಶಾ ಕಾರ್ಯಕರ್ತೆ!

 ಈ ಬಗ್ಗೆ ಮಾಹಿತಿ ಪಡೆದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಟ್ವೀಟ್ ಮೂಲಕ ರಾಜೀವಿ ಅವರನ್ನು ಶ್ಲಾಘಿಸಿದ್ದಾರೆ. ಇದು ನಿಸ್ವಾರ್ಥ ಸಮಾಜಸೇವಕಿಯಾಗಿ ಅವರಿಗೆ ಸಿಕ್ಕಿರುವ ಅತೀದೊಡ್ಡ ಮತ್ತುಅರ್ಹ ಗೌರವವಾಗಿದೆ. ಯಾಕೆಂದರೇ ರಾಜೀವಿ ಅವರು ಗರ್ಭಿಣಿಯನ್ನು ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು ಇದೇ ಮೊದಲೇನಲ್ಲ, ಈಗಾಗಲೇ 15ಕ್ಕೂ ಹೆಚ್ಚು ಗರ್ಭಿಣಿಯರನ್ನು, ಬಹುತೇಕ ಸಂದರ್ಭದಲ್ಲಿ ಅಪರಾತ್ರಿಗಳಲ್ಲಿಯೇ ವಾಹನ ಸೌಕರ್ಯಗಳಿಲ್ಲದ ತಮ್ಮೂರಿನಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಾಜೀವಿ ಮನದ ಮಾತು

 ಸುಮಾರು 16 ವರ್ಷಗಳ ಹಿಂದೆ ತಮ್ಮೂರಿಗೆ ಬಸ್ಸು ಬಾರದ ದಿನಗಳಲ್ಲಿ ರಾಜೀವಿ ಈ ಆಟೋ ವೃತ್ತಿಯನ್ನು ಆರಂಭಿಸಿದರು. ಹಣ ಇರುವವರು ತಮ್ಮ ಕಾರುಗಳಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ  ಹೋಗುತ್ತಾರೆ, ಪಾಪ ಬಡವರು ಏನು ಮಾಡಬೇಕು ಸಾರ್, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹೌದು, ಆದರೇ 18 - 20 ಕಿ.ಮೀ. ದೂರ ಇರುವ ಸರ್ಕಾರಿ ಅಸ್ಪತ್ರೆಗೆ ಹೋಗಬೇಕಲ್ಲ, ಅದೂ ಹೆರಿಗೆ ನೋವು ಯಾವ ಹೊತ್ತಿನಲ್ಲಿ ಬರುತ್ತದೇ ಹೇಳುವುದಕ್ಕಾಗುವುದಿಲ್ಲ, ಅದಕ್ಕೆ ನಾನೇ ನಮ್ಮಂತಹ ಬಡವರ ಮನೆಯ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದೆ ಸರ್ ಎಂದು ಅಭಿಮಾನದಿಂದ ಹೇಳುತ್ತಾರೆ ರಾಜೀವಿ. 

ಉಪರಾಷ್ಟ್ರಪತಿ ಕಚೇರಿಯಿಂದ ಫೋನ್
ಬೆಳಿಗ್ಗೆ ಅಂಗನವಾಡಿಯಲ್ಲಿದ್ದಾಗ ದೆಹಲಿಯಿಂದ ಉಪರಾಷ್ಟ್ರಪತಿಗಳ ಕಚೇರಿಯಿಂದ ಮೇಡಂ ಒಬ್ಬರು ನನ್ನ ಮೊಬೈಲಿಗೆ ಕರೆ ಮಾಡಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸರ್ ಅವರು ನಿಮ್ಮ ಕೆಲಸವನ್ನು ಗಮನಿಸಿ ಶ್ಲಾಘಿಸಿದ್ದಾರೆ. ಮುಂದೆಯೂ ಹೀಗೆ ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಹಾರೈಸಿದ್ದಾರೆ ಎಂದು ಹೇಳಿದರು. ಬಹಳ ಖುಷಿ ಆಯಿತು, ನಾನು ಮಾಡಿದ ಕೆಲಸಕ್ಕೆ ಇದಕ್ಕಿಂತ ದೊಡ್ಡ ಗೌರವ ಬೇರೆನಿದೆ ಎಂದು ರಾಜೀವಿ ಅಭಿಮಾನದಿಂದ ಹೇಳಿದರು.

 

click me!