ಬೆಂಗಳೂರು(ಮೇ.29): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಆಶ್ಲೀಲ ವಿಡಿಯೋಗಳ ಪ್ರೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಹಾಸನ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಬೇಲೂರು ತಾಲೂಕಿನ ನಳಿಕೆಗ್ರಾಮ ನವೀನ್‌ಗೌಡ ಹಾಗೂ ಬಿಕ್ಕೋಡಿನ ಚೇತನ್ ಬಂಧಿತರಾಗಿದ್ದು, ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಬೆಂಗಳೂರಿಗೆ ಬಂದಿದ್ದಾಗ ಆರೋಪಿಗಳನ್ನು ಬಂಧಿಸಿದ ಎಸ್‌ಐಟಿ, ಹಾಸನಕ್ಕೆ ಅವರನ್ನು ಕರೆದೊಯ್ದು ವಿಚಾರಣೆ ಮುಂದುವರೆಸಿದೆ ಎಂದು ತಿಳಿದು ಬಂದಿದೆ.
ಲೈಂಗಿಕ ದೌರ್ಜನ್ಯ ಆರೋಪ: ಪ್ರಜ್ವಲ್ ಅರೆಸ್ಟ್ ಆಗುತ್ತಿದ್ದಂತೆ ಧ್ವನಿ ಟೆಸ್ಟ್‌ಗೆ ಎಸ್‌ಐಟಿ ಸಿದ್ಧತೆ?
ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ಕೃತ್ಯದಲ್ಲಿ ನವೀನ್ ಗೌಡ ಹೆಸರು ಕೇಳಿ ಬಂದಿತ್ತು. ಆದರೆ ಪೊಲೀಸರ ಕೈ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ, ಬಂಧನ ಭೀತಿಯಿಂದ ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಹೀಗಾಗಿ ಹೈಕೋರ್ಟ್‌ಗೆ ಜಾಮೀನು ಕೋರಿ ಆತ ಮೊರೆ ಹೋಗಲು ಮುಂದಾಗಿದ್ದ. ಈ ವಿಚಾರ ತಿಳಿದ ಎಸ್‌ಐಟಿ, ಆರೋಪಿ ಪತ್ತೆಗೆ ಬಲೆ ಬೀಸಿತ್ತು. ಹೈಕೋರ್ಟ್ ಬಳಿ ನವೀನ್ ಗೌಡ ಹಾಗೂ ಆತನ ಸ್ನೇಹಿತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಲೋಕಸಭಾ ಚುನಾವಣೆ ವೇಳೆ ಸಂಸದ ಪ್ರಜ್ವಲ್ ವಿರುದ್ಧ ಆಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ ಎಂದು ಹಾಸನ ಸಿಇಎನ್ ಠಾಣೆಯಲ್ಲಿ ಸಂಸದರ ಚುನಾವಣಾ ಏಜೆಂಟ್ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹಾಸನದ ಬಿಜೆಪಿ ಕಾರ್ಯಕರ್ತರಾದ ಚೇತನ್, ಲಿಖಿಲ್ ಹಾಗೂ ವಕೀಲ ದೇವರಾಜೇಗೌಡ ಸೇರಿ ಮೂವರನ್ನು ಎಸ್‌ಐಟಿ ಬಂಧಿಸಿತ್ತು. ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ನವೀನ್ ಗೌಡ ಪತ್ತೆಗೆ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದರು. ಅಲ್ಲದೆ ನವೀನ್ ಗೌಡನಿಗೆ ರಾಜಕೀಯ ನಾಯಕರ ಬೆಂಬಲವಿರುವ ಕಾರಣಕ್ಕೆ ಆತನನ್ನು ಬಂಧಿಸುತ್ತಿಲ್ಲ ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಟೀಕಿಸಿದ್ದರು. ಈಗ ಕೊನೆಗೂ ಎಸ್‌ಐಟಿ ಬಲೆಗೆ ನವೀನ್ ಬಿದ್ದಿದ್ದಾನೆ.
ನವೀನ್ ಗೌಡನ ಪೋಸ್ಟ್ ವೈರಲ್:
ಪೆನ್ ಡ್ರೈವ್ ಹಂಚಿಕೆ ಸಂಬಂಧ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನವೀನ್‌ಗೌಡ ಹಾಕಿದ್ದ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮತದಾನಕ್ಕೂ ನಾಲ್ಕು ದಿನಗಳ ಮುನ್ನ ಪ್ರಜ್ವಲ್ ರೇವಣ್ಣರವರ ಪೆನ್ ಡ್ರೈವ್ ಹಂಚಿಕೆಗೆ ಕ್ಷಣಗಣನೆ ಎಂದು ಆತ ಪೋಸ್ಟ್ ಹಾಕಿದ್ದ. ಇದಾದ ಬಳಿಕ ತಾನು ಪೆನ್‌ಡ್ರೈವ್ ಅನ್ನು ಅರಕಲಗೂಡು ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಈತನ ವಿರುದ್ಧ ಎಸ್‌ಐಟಿಗೆ ಶಾಸಕ ಮಂಜು ದೂರು ಕೂಡ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ