ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ‘ರೆಮಲ್’ ಚಂಡಮಾರುತದಿಂದ ಮುಂಗಾರು ಆರಂಭದಲ್ಲಿ ಯಾವುದೇ ಬದಲಾವಣೆಯ ಲಕ್ಷಣಗಳಿಲ್ಲ. ಮೇ 31 ಅಥವಾ ಜೂನ್ 1ಕ್ಕೆ ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನ ಸಾಧ್ಯತೆ ಇದೆ.
ಬೆಂಗಳೂರು(ಮೇ.29): ನಿರೀಕ್ಷೆಯಂತೆ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದ್ದು, ಆರಂಭದಲ್ಲಿ ಮುಂಗಾರು ಅಷ್ಟೊಂದು ಪ್ರಬಲವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿ ನೀಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ‘ರೆಮಲ್’ ಚಂಡಮಾರುತದಿಂದ ಮುಂಗಾರು ಆರಂಭದಲ್ಲಿ ಯಾವುದೇ ಬದಲಾವಣೆಯ ಲಕ್ಷಣಗಳಿಲ್ಲ. ಮೇ 31 ಅಥವಾ ಜೂನ್ 1ಕ್ಕೆ ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನ ಸಾಧ್ಯತೆ ಇದೆ.
ಭೀಕರ ಬರದಿಂದ ಕಂಗೆಟ್ಟಿದ್ದ ಜನತೆಗೆ ಸಂತಸದ ಸುದ್ದಿ: ಈ ಸಲ ವಾಡಿಕೆಗಿಂತ ಹೆಚ್ಚು ಮಳೆ
‘ರೆಮಲ್’ ಚಂಡಮಾರುತದ ಪ್ರಭಾವದಿಂದ ಮುಂಗಾರು ಮಾರುತಗಳು ದುರ್ಬಲಗೊಂಡಿವೆ. ಜತೆಗೆ, ಹೊಸ ಮಾರುತಗಳ ರೂಪಗೊಂಡಿಲ್ಲ. ಇದರಿಂದ ಮುಂಗಾರು ಆರಂಭದ ಮೊದಲ ವಾರ ಅಷ್ಟೊಂದು ತೀವ್ರವಾಗಿಲ್ಲ. ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಮೇ 31ರಿಂದ ಮಳೆ ಚುರುಕು:
ಕರಾವಳಿ ಹೊರತು ಪಡಿಸಿ ಉಳಿದ ಎಲ್ಲ ಕಡೆ ಮಳೆ ಪ್ರಮಾಣ ಕುಸಿದಿದ್ದು, ಮೇ 31 ರಿಂದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಚುರುಕುಗೊಳ್ಳಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಯಾದಗಿರಿಯ ನಾರಾಯಣಪುರ, ಇಳಕಲ್, ಕೆಂಭಾವಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ತಾವರಗೇರ, ಸುರಪುರ ಹಾಗೂ ತಾಳಿಕೋಟೆಯಲ್ಲಿ ತಲಾ 4, ಬೇವೂರು, ಕಕ್ಕೇರಿ, ಕುಷ್ಟಗಿಯಲ್ಲಿ ತಲಾ 3, ಲಿಂಗಸುಗೂರು, ಗಂಗಾವತಿ, ವಿಜಯಪುರ, ರಾಯಚೂರು, ರಾಯಚೂರಿನ ಜಾಲಹಳ್ಳಿ, ಮುನಿರಾಬಾದ್, ದೇವದುರ್ಗ, ಗಬ್ಬೂರು, ಯಲಬುರ್ಗಾದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 41.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.