
ದಾವಣಗೆರೆ(ಜು.04): ಕೊರೋನಾ ಸೋಂಕಿನಿಂದ ಗುಣಮುಖವಾದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ‘ಮಲ್ಟಿಸಿಸ್ಟಮ್ ಇನ್‌ಫ್ಲೆಮೆಟೋರಿ ಸಿಂಡ್ರೋಮ್ ಇನ್ ಚಿಲ್ಡ್ರನ್’ ಮಿಸ್- ಸಿ(ಞಜಿs್ಚ) ಕಾಯಿಲೆಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಯಲ್ಲಿ 5 ವರ್ಷದ ಬಾಲಕಿ ಮತ್ತು ಬಳ್ಳಾರಿ ವಿಮ್ಸ್‌ನಲ್ಲಿ ದಾಖಲಾಗಿದ್ದ 8 ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ.
ಶಿರಾ ಮೂಲದ ಐದು ವರ್ಷದ ಬಾಲಕಿಯನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ, ಅಲ್ಲಿಂದ ಚಿತ್ರದುರ್ಗದ ಶ್ರೀ ಬಸವೇಶ್ವರ ಆಸ್ಪತ್ರೆಗೆ ಶುಕ್ರವಾರ ಸಂಜೆ ದಾಖಲಿಸಲಾಗಿತ್ತು. ಸೋಂಕಿನಿಂದಾಗಿ ಆಕೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದಳು. ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಮಗುವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿದರೂ ಶನಿವಾರ ಬೆಳಗಿನ ಜಾವ 3 ಗಂಟೆ ಹೊತ್ತಿನಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಇನ್ನು ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 29 ಮಕ್ಕಳ ಪೈಕಿ 8 ತಿಂಗಳ ಮಗು ಮೃತಪಟ್ಟಿದ್ದು, ಮೂವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 25 ಮಕ್ಕಳು ಗುಣಮುಖರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಾ.ಜನಾರ್ದನ, ಈ ಕಾಯಿಲೆ ನಿನ್ನೆ-ಮೊನ್ನೆ ಕಾಣಿಸಿಕೊಂಡ ಕಾಯಿಲೆ ಅಲ್ಲ. ಕೊರೋನಾ ವೈರಸ್‌ನಿಂದ ಬಳಲಿ ಗುಣಮುಖರಾದ ಅನೇಕ ಮಕ್ಕಳಲ್ಲಿ ಇದು ಕಾಣಿಸಿಕೊಂಡಿದ್ದು ರಾಜ್ಯದ ಎಲ್ಲ ಕಡೆಗಳಲ್ಲೂ ಇದೆ. ಜ್ವರ, ವಾಂತಿ- ಭೇದಿ, ಕೈಕಾಲು ಊತ, ಜೋರಾಗಿ ಉಸಿರಾಡುವುದು, ತುಟಿ-ನಾಲಿಗೆ ಕೆಂಪಾಗುವುದು ಈ ರೋಗದ ಲಕ್ಷಣವಾಗಿದೆ. ಮಕ್ಕಳ ವೈದ್ಯರು ಇದಕ್ಕೆ ಚಿಕಿತ್ಸೆ ನೀಡಲಿದ್ದು, ಬಳಿಕ ಮಕ್ಕಳು ಚೇತರಿಸಿಕೊಳ್ಳುತ್ತಾರೆ. ರೋಗ ತೀವ್ರ ಉಲ್ಬಣಗೊಂಡ ಮಕ್ಕಳು ಮಾತ್ರ ಮೃತಪಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ