ಮಹಾರಾಷ್ಟ್ರ, ಕೇರಳದಲ್ಲಿ ಕೇಸ್‌ ಹೆಚ್ಚಿದ 3 ವಾರಕ್ಕೇ ರಾಜ್ಯದಲ್ಲೂ ಏರಿಕೆ: ತಜ್ಞ!

By Kannadaprabha NewsFirst Published Jul 4, 2021, 7:36 AM IST
Highlights

* ಕರ್ನಾಟಕಕ್ಕೆ ಮಹಾರಾಷ್ಟ್ರ, ಕೇರಳ ಕೊರೋನಾತಂಕ

* ಅಲ್ಲಿ ಸೋಂಕು ಹೆಚ್ಚಾದರೆ ರಾಜ್ಯದಲ್ಲೂ ಏರಿಕೆ

* ನೆಗೆಟಿವ್‌ ವರದಿ ಇದ್ದರಷ್ಟೇ ಒಳಕ್ಕೆ ಬಿಡಿ: ತಜ್ಞ

ಬೆಂಗಳೂರು(ಜು.04): ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣ ಹೆಚ್ಚಾದರೆ ಕರುನಾಡಿಗೆ ಆಪತ್ತು ನಿಶ್ಚಿತ. ಒಂದು ಮತ್ತು ಎರಡನೇ ಅಲೆಯಲ್ಲಿ ಇದು ಸಾಬೀತಾಗಿದೆ. ಹೀಗಾಗಿ ಈ ರಾಜ್ಯಗಳಿಂದ ಆಗಮಿಸುವವರಿಗೆ ಕೋವಿಡ್‌ ನೆಗೆಟಿವ್‌ ವರದಿ ತರುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯಡಾ.ಸಿ.ಎನ್‌.ಮಂಜುನಾಥ್‌ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ-ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾದರೆ ಅದರ ಪರಿಣಾಮ ಖಂಡಿತ ರಾಜ್ಯದ ಮೇಲೆ ಆಗುತ್ತದೆ. ಈ ರಾಜ್ಯಗಳಲ್ಲಿ ಸೋಂಕು ಹೆಚ್ಚಾದ ಎರಡು-ಮೂರು ವಾರಗಳಲ್ಲಿ ರಾಜ್ಯದಲ್ಲೂ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ನಾವು ಎಚ್ಚೆತ್ತುಕೊಳ್ಳಬೇಕು. ಈ ರಾಜ್ಯಗಳಿಂದ ಆಗಮಿಸುವವರಿಗೆ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ ಮಾಡಬೇಕು. ಒಂದೊಮ್ಮೆ ನೆಗೆಟಿವ್‌ ರಿಪೋರ್ಟ್‌ ಇಲ್ಲದಿದ್ದರೆ ಕೊನೆ ಪಕ್ಷ ವ್ಯಾಕ್ಸಿನ್‌ ಪಡೆದವರಿಗೆ ಮಾತ್ರ ರಾಜ್ಯಕ್ಕೆ ಕಾಲಿಡಲು ಅನುಮತಿ ನೀಡಬೇಕು ಎಂದು ಹೇಳಿದರು.

ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್‌ ಹೆಚ್ಚಾದ 3 ವಾರಕ್ಕೆ ಕರ್ನಾಟಕಕ್ಕೆ ಅಪಾಯ ನಿಶ್ಚಿತವಾಗುತ್ತದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಇದು ಸ್ಪಷ್ಟವಾಗಿದೆ. ಈ ಎರಡೂ ರಾಜ್ಯಗಳಿಂದ ಆಗಮಿಸುವವರನ್ನು ಸರಿಯಾಗಿ ತಪಾಸಣೆ ಮಾಡಬೇಕು. ಕೊರೋನಾ ಪ್ರಕರಣ ಕಡಿಮೆಯಾಗಿವೆ ಎಂದು ನಾವು ಮೈಮರೆತರೆ ಮುಂದೆ ದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊರೋನಾ ವೈರಸ್‌ ಪ್ರತಿ 4 ರಿಂದ 5 ತಿಂಗಳಿಗೆ ರೂಪಾಂತರವಾಗುತ್ತದೆ. ಎರಡನೇ ಅಲೆಯಲ್ಲಿ ಡೆಲ್ಟಾವೈರಸ್‌ನಿಂದ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಸಾವಿನ ಪ್ರಮಾಣ ಹೆಚ್ಚಳಕ್ಕೂ ಡೆಲ್ಟಾಕಾರಣವಾಗಿತ್ತು. ಜಿನೋಮಿಕ್‌ ಸೀಕ್ವೆನ್ಸ್‌ ವೇಳೆ ಡೆಲ್ಟಾವೈರಸ್‌ ಪತ್ತೆಯಾಗಿತ್ತು. ಯುಕೆ, ಸ್ಪೇನ್‌, ಬ್ರಿಟನ್‌, ದಕ್ಷಿಣ ಆಫ್ರಿಕಾದಲ್ಲೂ ಡೆಲ್ಟಾವೈರಸ್‌ ಹಾವಳಿ ಹೆಚ್ಚಾಗಿತ್ತು ಎಂಬುದನ್ನು ಉಲ್ಲೇಖಿಸಿದರು.

ಸಭೆ-ಸಮಾರಂಭ ಬೇಡ:

ಡೆಲ್ಟಾವೈರಸ್‌ ರೂಪಾಂತರಗೊಂಡು ಡೆಲ್ಟಾಪ್ಲಸ್‌ ಆಗಿದೆ. ಡೆಲ್ಟಾಪ್ಲಸ್‌ ಬಗ್ಗೆ ಆತಂಕ ಪಡುವುದು ಬೇಡ. ಆದರೆ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ. ಡಿಸೆಂಬರ್‌ ತಿಂಗಳವರೆಗೆ ಕೋವಿಡ್‌ ಕಾಟ ತಪ್ಪುವುದಿಲ್ಲ. ಅಲ್ಲಿಯವರೆಗೂ ಅಪಾಯವಿದೆ. ಸರ್ಕಾರ ಅನ್‌ ಲಾಕ್‌ ಮಾಡಿದರೂ ಜನರು ಅನ್‌ಲಾಕ್‌ ಆಗಬಾರದು. ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಡಿಸೆಂಬರ್‌ವರೆಗೂ ಕೋವಿಡ್‌ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ಹೇರಬೇಕು. ಜನರು ಮೈಮರೆತು ಹಬ್ಬ, ಜಾತ್ರೆಯಲ್ಲಿ ತೊಡಗಿದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

click me!