ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮನೆ ಮಾಡಿದ ಆತಂಕ!

Kannadaprabha News, Ravi Janekal |   | Kannada Prabha
Published : Nov 05, 2025, 08:31 AM IST
tungabhadra Koppal farmers protest for water

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ಮುರಿದ 19ನೇ ಕ್ರಸ್ಟ್ ಗೇಟ್ ದುರಸ್ತಿಗಾಗಿ ಈ ವರ್ಷದ ಬೇಸಿಗೆ ಬೆಳೆಗೆ ನೀರು ಬಿಡುಗಡೆ ಮಾಡದಿರಲು ತುಂಗಭದ್ರಾ ಬೋರ್ಡ್ ನಿರ್ಧರಿಸಿದೆ. ಈ ನಿರ್ಧಾರದಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ (ನ.5): ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಮುರಿದ 19ನೇ ಕ್ರಸ್ಟ್ ಗೇಟ್ ದುರಸ್ತಿ ಮತ್ತು ಶಿಥಿಲಗೊಂಡ ಕ್ರಸ್ಟ್ ಗೇಟ್‌ಗಳ ಬದಲಾಯಿಸುವಿಕೆಗಾಗಿ ಪ್ರಸಕ್ತ ವರ್ಷ ಬೇಸಿಗೆ ಹಂಗಾಮಿಗೆ (ಎರಡನೇ ಬೆಳೆಗೆ) ನೀರು ಬಿಡದೆ ಇರಲು ಈಗಾಗಲೇ ತುಂಗಭದ್ರಾ ಬೋರ್ಡ್ ತೀರ್ಮಾನಿಸಿದೆ. ಈ ನಡುವೆ ರಾಜ್ಯ ಸರ್ಕಾರ ನ.5 ರಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆ ಮುಂದೂಡಿದ್ದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ.

ತುಂಗಭದ್ರಾ ಜಲಾಶಯದಲ್ಲಿದೆ 79 ಟಿಎಂಸಿ ನೀರು:

ಸದ್ಯ ತುಂಗಭದ್ರಾ ಜಲಾಶಯದಲ್ಲಿ (ನ.4 ರಂದು) 79 ಟಿಎಂಸಿ ನೀರು ಲಭ್ಯವಿದ್ದು, ಹತ್ತು ಸಾವಿರ ಕ್ಯೂಸೆಕ್ಸ್‌ ಒಳಹರಿವು ಇದೆ. ಹೀಗಾಗಿ ಹಿಂಗಾರು ಬೆಳೆಗೂ ಸಹ ನೀರು ಆಗಬಹುದು. ಹಿಂಗಾರು ಬೆಳೆಗೆ ನೀರು ಕೊಟ್ಟು ನಂತರ ಬೇಸಿಗೆಯ ಸಮಯದಲ್ಲಿ ದುರಸ್ತಿ ಮಾಡಿಸಿ ಎನ್ನುವುದು ರೈತ ಸಂಘಟನೆ, ಕೆಲ ರಾಜಕೀಯ ನಾಯಕರ ಒತ್ತಾಯವಾಗಿದೆ. ಆದರೆ, ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಜತೆಗೆ ಇತರೆ ಗೇಟ್ ಸಹ ಶಿಥಿಲಗೊಂಡಿದ್ದು, ಅವುಗಳನ್ನು ಈ ವರ್ಷವೇ ದುರಸ್ತಿ ಮಾಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುವುದರಿಂದ ಹಿಂಗಾರು ಬೆಳೆಗೆ ನೀರು ಬಿಡುವುದು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಕ್ರಸ್ಟ್ ಗೇಟ್ ದುರಸ್ತಿಗಾಗಿ ರೈತರು ಸಹಕಾರ ನೀಡುವಂತೆ ಸರ್ಕಾರ ಮತ್ತು ತುಂಗಭದ್ರಾ ಬೋರ್ಡ್ ಮನವಿ ಮಾಡುತ್ತಿದೆ.

ಈ ನಡುವೆ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹಾಗೂ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉಸ್ತುವಾರಿಯಲ್ಲಿ ನ.5 ರಂದು ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಕರೆಯಲಾಗಿದ್ದ ಸಭೆ ಮುಂದೂಡಲಾಗಿದೆ. ಸಭೆಯಲ್ಲಿ ಈ ಕುರಿತು ದೃಢ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಒಂದು ಬೆಳೆಗೆ ನೀರಿನ ಸಮಸ್ಯೆ ನೋಡಿಕೊಂಡು ಚಿಂತನೆ ಮಾಡುವ ಬದಲು, ಜಲಾಶಯ ಸುರಕ್ಷತೆಗಾಗಿ ಚಿಂತನೆ ಮಾಡುವ ಅಗತ್ಯವಿದೆ ಎನ್ನುವುದು ನೀರಾವರಿ ಇಲಾಖೆ ಅಧಿಕಾರಿಗಳ ವಿವರಣೆಯಾಗಿದ್ದರಿಂದ ಈ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಭತ್ತದ ಅಭಾವ:

ರಾಜ್ಯದಲ್ಲಿ ಅತ್ಯಧಿಕ ಭತ್ತ ಉತ್ಪಾದನೆ ಮಾಡುವ ಪ್ರದೇಶದಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶವೂ ಒಂದಾಗಿದೆ. ಅದರಲ್ಲೂ ಅತೀ ಹೆಚ್ಚು ಭತ್ತ ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿ ಬರೋಬ್ಬರಿ 13.5 ಲಕ್ಷ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಭತ್ತ ಉತ್ಪಾದನೆ ಮಾಡಲಾಗುತ್ತದೆ. ಹಿಂಗಾರು ಅವಧಿಯಲ್ಲಿ ಭತ್ತ ಬೆಳೆಯದೆ ಇದ್ದರೇ ಸಹಜವಾಗಿ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಹಾಗೂ ಅಕ್ಕಿಯ ಬೆಲೆ ಏರಿಕೆಗೂ ಕಾರಣವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಜಲಾಶಯದಲ್ಲಿ ನೀರಿದ್ದು, ಅದನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡುವ ಬದಲು ರೈತರ ಬೆಳೆಗೆ ಬಿಡುವುದು ಉತ್ತಮ. ಬೇಸಿಗೆಯಲ್ಲಿ ದುರಸ್ತಿ ಕಾರ್ಯ ಮಾಡಿಕೊಳ್ಳಬಹುದಾಗಿದೆ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡುತ್ತಿದ್ದೇವೆ, ಕ್ರಸ್ಟ್ ಗೇಟ್ ದುರಸ್ತಿಯ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಅದಕ್ಕೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ, ಎರಡನೇ ಬೆಳೆಗೆ ನೀರು ಬಿಡುವುದು ಕಷ್ಟ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್