ಧಾರವಾಡ: ಪಾರ್ಕ್‌ನಲ್ಲಿ ವಾಕ್‌ ಮಾಡಲೂ ಅನುಮತಿ ಬೇಕಾ?: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

Kannadaprabha News, Ravi Janekal |   | Kannada Prabha
Published : Nov 05, 2025, 08:06 AM IST
Dharwad High Court verdict

ಸಾರಾಂಶ

Dharwad High Court verdict: ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತಡೆ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದೆ. ವಾದ-ಪ್ರತಿವಾದ ಆಲಿಸಿದ ದ್ವಿಸದಸ್ಯ ಪೀಠವು ತೀರ್ಪನ್ನು ಕಾಯ್ದಿರಿಸಿದೆ.

ಧಾರವಾಡ (ನ.5): ಸಾರ್ವಜನಿಕ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿದ ವಿಚಾರವಾಗಿ ಧಾರವಾಡದ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ್ದ ಮಧ್ಯಂತರ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಯು ಮಂಗಳವಾರ ದ್ವಿಸದಸ್ಯ ಪೀಠದಲ್ಲಿ ನಡೆದಿದ್ದು, ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ 10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಬೇಕೆನ್ನುವ ಸರ್ಕಾರದ ಆದೇಶದ ವಿರುದ್ಧ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಸಂಸ್ಥೆ, ವಿ.ಕೆ.ಫೌಂಡೇಶನ್, ಧಾರವಾಡದ ರಾಜೀವ್ ಮಲ್ಹಾರ ಕುಲಕರ್ಣಿ, ಬೆಳಗಾವಿಯ ಬೌದ್ಧ ಪ್ರಚಾರಕಿ ಉಮಾ ಚವ್ಹಾಣ ಎಂಬುವರು ಅ.24ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಅ.28ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮಂಗಳವಾರ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಗೀತಾ ಕೆ.ಬಿ ಅವರ ಎದುರು ವಾದ ಆರಂಭಿಸಿದ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ, ಅರ್ಜಿ ಸಲ್ಲಿಸಿದವರ ಪೈಕಿ ಇಬ್ಬರು ಖಾಸಗಿ ಸಂಸ್ಥೆಗಳನ್ನು ಹೊಂದಿದ್ದಾರೆ. ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಆದೇಶ ಮಾಡಿದ್ದು, ತಡೆಯಾಜ್ಞೆ ತೆರವುಗೊಳಿಸಿ ಎಂದು ಮನವಿ ಮಾಡಿದರು.

ಸಾರ್ವಜನಿಕ ಸ್ಥಳದಲ್ಲಿ 10 ಜನರು ಸೇರಿದರೆ ಅನುಮತಿ ಬೇಕಾ?

ಆಗ ಪೀಠವು, ‘ಸಾರ್ವಜನಿಕ ಸ್ಥಳದಲ್ಲಿ 10 ಜನರು ಸೇರಿದರೆ ಅನುಮತಿ ಬೇಕಾ? ಅದರ ಅವಶ್ಯಕತೆ ಇದೆಯಾ? ಕೆಲವರು ಪಾರ್ಕ್‌ಗಳಲ್ಲಿ ವಾಕ್ ಮಾಡುತ್ತಾರೆ. ಅದಕ್ಕೂ ಕೂಡ ಅನುಮತಿ ಬೇಕಾ?’ ಎಂದು ಪ್ರಶ್ನಿಸಿತು. ರಸ್ತೆ, ಪಾರ್ಕ್‌ಗಳು ಸಾರ್ವಜನಿಕರ ಓಡಾಟ ಇದ್ದು, ಅವರಿಗೆ ಉಪಯೋಗವಾಗಬೇಕು. ಖಾಸಗಿಯವರು ಕಾರ್ಯಕ್ರಮ ಮಾಡುವುದಾದರೆ ಸ್ಥಳ ಬಾಡಿಗೆ ಪಡೆದು ಮಾಡಬಹುದು ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಮಜಾಯಿಸಿ ನೀಡಿದರು.

ಜನರ ಹಕ್ಕಿನ ಉಲ್ಲಂಘನೆ-ಪ್ರತಿವಾದ:

ಅರ್ಜಿದಾರರ ಪರ ವಕೀಲರು, ಸರ್ಕಾರದ ಆದೇಶ ಸರಿಯಲ್ಲ. ಸರ್ಕಾರಿ ಜಾಗ ಸಾರ್ವಜನಿಕರಿಗೋಸ್ಕರವೇ ಇದೆ. ಅಡ್ಡಿಪಡಿಸುವುದು ನ್ಯಾಯ ಸಮ್ಮತವಲ್ಲ. ಇದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯು ಹೌದು. ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧ ಹೇರುವುದು ತಪ್ಪು. ಒಂದು ವೇಳೆ ಈ ಆದೇಶ ಜಾರಿಗೆ ಬಂದರೆ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಪ್ರತಿವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದ್ದು, ನ್ಯಾಯಪೀಠದಿಂದ ಏನು ತೀರ್ಪು ಬರಲಿದೆ ಎಂಬುದು ಎಲ್ಲರಲ್ಲಿಯೂ ಕುತೂಹಲ ಹುಟ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌