- ಸಿದ್ಧಾರ್ಥ ಗಾನ ಕಲಾ ಸಂಭ್ರಮ 26ರ ಉದ್ಘಾಟನೆ
- ತುಮಕೂರು ವಿವಿ ಪ್ರೊ.ಪರಮಶಿವಮೂರ್ತಿ ಮಾತು
- ಹಿಂಸೆಯನ್ನು ಆಸ್ವಾದಿಸುವ ಕೆಲಸ ಬೇಡ
ತುಮಕೂರು (ಮಾ.7): ನಾವಿಂದು ಹಿಂಸೆಯನ್ನು (violence) ಆಸ್ವಾದಿಸುವ ಹಂತ ತಲುಪಿರುವುದು ದೊಡ್ಡ ದುರಂತದ ಸಂಗತಿ ಎಂದು ತುಮಕೂರು ವಿವಿ (Tumkur VV) ಕನ್ನಡ ವಿಭಾಗದ ಪ್ರೊ.ಡಿ.ವಿ.ಪರಮಶಿವಮೂರ್ತಿ (DV Paramashiva Murthy ) ವಿಷಾದಿಸಿದರು. ತುಮಕೂರಿನ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ (Siddartha First Grade College) ಏರ್ಪಡಿಸಿದ್ದ ಸಿದ್ಧಾರ್ಥ ಗಾನ ಕಲಾ ಸಂಭ್ರಮ-26 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುದ್ಧ ನಡೆದಿರುವುದು ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವೆಯಾದರೂ, ನಾವು ಜಾಗತಿಕ ಒತ್ತಡಕ್ಕೆ ಸಿಲುಕಿದ್ದೇವೆ. ಯುದ್ಧ ಭೀತಿಯಲ್ಲಿರುವ ದೇಶಗಳಿಗೆ ಗಾಂಧೀಜಿ ಅವರ ಅಹಿಂಸಾ ತತ್ವ ಮಾರ್ಗದರ್ಶಿಯಾಗುವುದು ಇಂದಿನ ಅಗತ್ಯ ಮತ್ತು ಅನಿವಾರ್ಯ. ಆದರೆ, ಹಿಂಸೆಯನ್ನು ಆಸ್ವಾದಿಸುತ್ತಿರುವುದು ಮನಕುಲಕ್ಕೆ ದೊಡ್ಡ ಹೊಡೆತ ಎಂದರು.
ಬರಹಗಾರರು ಮೌಲ್ಯಯುತ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಸಮಕಾಲೀನ ಘಟನೆಗಳಿಗೆ ಪುಸ್ತಕಗಳಲ್ಲಿನ ವಿಷಯವೂ ಮುಖ್ಯವಾಗಿದ್ದು, ಬರಹಗಾರ ಬರವಣಿಗೆಯ ಮೇಲೆ ಹಿಡಿತ ಸಾಧಿಸಿರಬೇಕು. ಆಗ ಬರಹಗಳು ಬದುಕಿನ ಭಾಗವಾಗುವುದರ ಜೊತೆಗೆ ವ್ಯಕ್ತಿತ್ವ ರೂಪಿಸುವ ಕೈಗನ್ನಡಿಯಾಗುತ್ತವೆ ಎಂದರು.
ಶಿಕ್ಷಣ ಶಿಲ್ಪಿ ಗಂಗಾಧರಯ್ಯನವರು ಕಂಡ ಸಮಾಜ ಸುಧಾರಣೆ ಬದಲಾವಣೆಯನ್ನು ಶಿಕ್ಷಣದಿಂದ ನಾವಿಂದು ಕಾಣುತ್ತಿದ್ದೇವೆ. ಆದರೆ, ಇದು ಇನ್ನಷ್ಟುಸುಧಾರಿಸಬೇಕು ಮತ್ತು ಬಲಿಷ್ಠವಾಗಬೇಕು. ಹಿಂದಿನ ಜೀವನ ಮೌಲ್ಯಗಳು ಮರೆಯಾಗುತ್ತಿವೆ. ಗ್ರಾಮೀಣ ಸಮಾಜ ಮೂಲೆಗುಂಪಾಗಿದೆ. ಸಮಾಜದ ಸಮಕಾಲೀನ ಚಿಂತನೆಗಳ ಬಗ್ಗೆ ಕವಿ ಚಿಂತಿಸಬೇಕು. ಪ್ರಚಲಿತ ಸಮಸ್ಯೆಗಳನ್ನು ಅರಿತು ಅದಕ್ಕೆ ಪ್ರತಿಕ್ರಿಯೆಸುವ ಗುಣ ಕವಿಗಿರಬೇಕು. ಮನಷ್ಟಎಂಥ ಸಂದರ್ಭದಲ್ಲೂ ಸೂಕ್ಷ್ಮತೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ಬೆಂಗಳೂರಿನ ಕರ್ನಾಟಕ ಸರ್ವೋದಯ (Karnataka Savodaya) ಮಂಡಳಿ ಸದಸ್ಯರು ಹಾಗೂ ಗಾಂಧೀವಾದಿ ತೊಂಡೋಟಿ ಎಲ್.ನರಸಿಂಹಯ್ಯ (Tondoti L Narasimhaih) ಮಾತನಾಡಿ, ಜೀವನದಲ್ಲಿ ಮೌಲ್ಯಯುತವಾಗಿ ಬದುಕಿದಾಗ ಮಾತ್ರ ಯಶಸ್ವಿ ಸಹಬಾಳ್ವೆ ಸಾಧ್ಯ. ಗಾಂಧೀಜಿಯವರ ಚಿಂತನೆಗಳ ಮೂಲಕ ಸಮಾಜದ ಪ್ರಗತಿಗೆ ಬುನಾದಿ ಹಾಕಿದವರು. ಇಂದಿನ ಯುವ ಪೀಳಿಗೆ ಶ್ರಮದ ಬದುಕು ಹಾಗೂ ಯೋಚನಾಧಾರಿತ ಲಹರಿಯ ಮೂಲಕ ದೇಶದ ಪ್ರಗತಿಯ ಕಣ್ಣಾಗಬೇಕೆಂದು ಕಿವಿಮಾತು ಹೇಳಿದರು.
ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮನೋಚಿಕಿತ್ಸಕರಾದ ಟಿ.ಎಸ್.ಉಮೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಲಿಂಗು, ಗೋವಿಂದರಾಜು, ಜಾನಪದ ಕಲಾವಿದ ಎಸ್.ಶಶಿಕುಮಾರ್, ಚಿತ್ರಕಲಾವಿದ ಜಿ.ಎಸ್.ಶಿವಶಂಕರಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್ ಮಣ್ಣ, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್.ರಂಗಸ್ವಾಮಿ, ಶ್ರೀನಿವಾಸಮೂರ್ತಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು
ಇದೇ ವೇಳೆ ಗಾಂಧಿ ವಿಚಾರಗಳು, ಶಿಕ್ಷಣ ಭೀಷ್ಮ ಹಾಗೂ ಅರಳುವ ಮೊಗ್ಗುಗಳು ಮತ್ತು ಮನೋವಿಜ್ಞಾನ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಮಟ್ಟದ ಜಾನಪದ, ಭಾವಗೀತೆ ಗಾಯನ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆದವು.
ಗ್ರಾಮೀಣ ಮಹಿಳೆಯರಿಗೆ ತುಳಸಿಕಟ್ಟೆವಿತರಣೆ
ಕೊರಟಗೆರೆ: ಪಟ್ಟಣದ ರಾಮೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಹೆಣ್ಣುಮಕ್ಕಳಿಗೆ ತುಳಸಿಕಟ್ಟೆವಿತರಣೆ ಮಾಡಲಾಯಿತು. ಪಪಂ ಅಧ್ಯಕ್ಷೆ ಕಾವ್ಯಶ್ರೀ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಸ್ವಂತ ದುಡಿಮೆಗೆ ಅನುಕೂಲವಾಗುವಂತೆ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತಿದೆ.
ಮದುವೆಯಾಗಿ ಗಂಡನ ಮನೆಗೆ ಬಂದಿರುವ ಹೆಣ್ಣುಮಕ್ಕಳು ಮನೆಯಲ್ಲೇ ಇರಬೇಕಿತ್ತು. ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಸಂಸ್ಥೆಯಿಂದ ಅಂತಹ ಹೆಣ್ಣುಮಕ್ಕಳು ಸ್ವಾವಲಂಬಿ ಆಗಲು ಅನೇಕ ಯೋಜನೆಗಳನ್ನು ರೂಪಿಸಿದೆ. ಅವರ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಯಿಂದ ಸಾಲ ನೀಡಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಲೋನ್ ಕೊಡುವುದರಿಂದ ಸರಿಯಾದ ಸಮಯಕ್ಕೆ ತಿರುಗಿಸುತ್ತಾರೆ. ಹಾಗೆಯೇ ಆ ಹಣದಿಂದ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹೀಗೆ ಮುಂದುವರಿಯಲಿ ಎಂದರು.
ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿದರು.ಪಪಂ ಉಪಾಧ್ಯಕ್ಷ ಭಾರತಿ ಸಿದ್ದಮಲ್ಲಪ್ಪ, ಸದಸ್ಯರಾದ ಪ್ರದೀಪ್ ಕುಮಾರ್, ಹೇಮಲತಾ ಮಂಜುನಾಥ್, ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಮನ್ವಯ ಅಧಿಕಾರಿ ಶ್ರುತಿ, ಸೇವಾ ಪ್ರತಿನಿಧಿಗಳು ಕೇಂದ್ರ ಸದಸ್ಯರು ಮತ್ತಿತರರಿದ್ದರು.