ಸರ್ಕಾರದ 40 ಪರ್ಸೆಂಟ್ ಕಮೀಷನ್ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬೆನ್ನಲ್ಲಿಯೇ ತುಮಕೂರಿನಲ್ಲಿಯೂ ಇದರ ಪ್ರತಿಧ್ವನಿ ಆರಂಭವಾಗಿದೆ. ನಮ್ಮೂರಿನ ಕಂಟ್ರಾಕ್ಟರ್ ಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಸಾಲದ ಸುಳಿ ತಾಳಲಾರದೆ ಊರು ಬಿಟ್ಟಿದ್ದಾರೆ ಎಂದು ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮಯ್ಯ ಹೇಳಿದ್ದಾರೆ.
ತುಮಕೂರು (ಏ.16): ರಾಜ್ಯ ಸರ್ಕಾರಕ್ಕೆ (State Governament) 40 ಪರ್ಸೆಂಟ್ ಕಮೀಷನ್ (commission ) ವಿಚಾರದ ಉರುಳು ಇನ್ನಷ್ಟು ಬಿಗಿಯಾಗುವಂತೆ ಕಾಣುತ್ತಿದೆ. ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಹಿರಿಯ ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ, ಭ್ರಷ್ಟಾಚಾರದ ಸುದ್ದಿಗಳು ಇನ್ನಷ್ಟು ವರದಿಯಾಗಿವೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಸುದ್ದಿಗೋಷ್ಠಿಯಲ್ಲಿಯೇ ಆರೋಗ್ಯ ಸಚಿವ ಕೆ. ಸುಧಾಕರ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ನೇರವಾಗಿ ಭ್ರಷ್ಟಾಚಾರ ಆರೋಪ ಹೊರಿಸಿದ್ದರು. ಇದರ ನಡುವೆ ಶನಿವಾರ ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘ ಕೂಡ ಸರ್ಕಾರದಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ತುಮಕೂರಿನಲ್ಲಿಯೂ ಕಂಟ್ರಾಕ್ಟರ್ ಗಳಿಗೆ ಕಿರುಕುಳ ನೀಡಲಾಗಿದೆ. ಆದರೆ, ಇಲ್ಲಿಯ ಗುತ್ತಿಗೆದಾರರು ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಈ ಕೆಲಸವೇ ಬೇಡ ಎಂದು ಊರು ಬಿಟ್ಟಿದ್ದಾರೆ ಎಂದು ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮಯ್ಯ (Tumkur District Contractors Association President Balaramaiah) ಹೇಳಿಕೆ ನೀಡಿದ್ದಾರೆ.
ಈಗಾಗಲೇ ತುಮಕೂರು ಜಿಲ್ಲೆಯ ನಾಲ್ಕೈದು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಎಲ್ಲಿಂದಲೂ ಸಾಲ ಮಾಡಿ ಗುತ್ತಿಗೆ ಕೆಲಸ ಮಾಡಿಸಿರುತ್ತಾರೆ. ಆದರೆ, ಸರ್ಕಾರದಿಂದ ಸರಿಯಾದ ಸಮಯದಲ್ಲಿ ಹಣ ಬಿಡುಗಡೆ ಆಗಿರುವುದಿಲ್ಲ. ಮನೆಯನ್ನು ಅಡ ಇಟ್ಟಿದ್ದರಿಂದ ಅವುಗಳು ಹರಾಜಿಗೆ ಬಂದವು. ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡರು. ತಮ್ಮಲ್ಲಿದ್ದ ಟಿಪ್ಪರ್, ಲಾರಿ, ಕಾರುಗಳನ್ನು ಮಾರು ಬಿಡ್ತಾರೆ ಎಂದು ಬಲರಾಮಯ್ಯ ಹೇಳಿದ್ದಾರೆ.
ಸರ್ಕಾರ ಎಷ್ಟು ತಡವಾಗಿ ಬಿಲ್ ಬಿಡುಗಡೆ ಮಾಡುತ್ತೋ, ಅಷ್ಟು ಪ್ರಮಾಣದಲ್ಲಿ ಬಡ್ಡಿ ಬ್ಯಾಂಕ್ ನಲ್ಲಿ ಏರಿಕೆ ಆಗಿರುತ್ತದೆ. ಹತ್ತು ರೂಪಾಯಿ ಹಣ ಇದ್ದರೆ, ಸರ್ಕಾರ ಲಕ್ಷ ರೂಪಾಯಿಗೆ ಕೆಲಸ ಮಾಡಿಸಿರುತ್ತದೆ. ಅನುದಾನಕ್ಕಿಂತ ಮಿಗಿಲಾಗಿ ಕೆಲಸವಾಗುತ್ತದೆ ಎಂದು ಬಲರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ಗ್ರಾಂಟ್ ಅಲೋಕೇಷನ್ ಸಮಾನವಾಗಿ ಹಂಚಿಕೆ ಮಾಡ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಸಾಲದ ಶೂಲಕ್ಕೆ ಸಿಲುಕಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಬಿಲ್ ಪೆಂಡಿಂಗ್ ಆಗಬಾರದು ಅನ್ನೋ ಕಾರಣಕ್ಕೆ ಲಂಚ ಕೊಡ್ತಾರೆ, ದುಡ್ಡು ಯಾರು ಜಾಸ್ತಿ ಕೊಡ್ತಾರೆ ಅವರಿಗೆ ಮೊದಲು ಹಣ ರಿಲೀಸ್ ಮಾಡ್ತಾರೆ. ನಾವು ಲಂಚವನ್ನು ಅಧಿಕಾರಿಗಳಿಗೆ ಕೊಡ್ತೇವೆ, ಅವ್ರು ರಾಜಕಾರಣಿಗಳಿಗೆ ಕೊಡ್ತಾರೆ. ಇನ್ನೂ ಕೆಲ ಶಾಸಕರು ದುಡ್ಡು ಕೊಟ್ಟರೆ ಮಾತ್ರ ಕಾಮಗಾರಿ ಗುದ್ದಲಿ ಪೂಜೆಗೆ ಬರ್ತಾರೆ. ಬಜೆಟ್ ನಲ್ಲಿ ಅನುದಾನವನ್ನು ಸುಮ್ಮನೆ ಘೋಷಣೆ ಮಾಡ್ತಾರೆ. ಅದನ್ನು ಎಲ್ಲಾ ಕ್ಷೇತ್ರಕ್ಕೂ ಹಂಚಿಕೆ ಮಾಡಲ್ಲ, ಸಚಿವರು ಅನುದಾನವನ್ನು ತಮ್ಮ ಬಳಿ ಇಟ್ಟುಕೊಂಡಿರ್ತಾರೆ. ಯಾವ ಎಂಎಲ್ಎ ಹೋಗಿ ಗಲಾಟೆ ಮಾಡ್ತಾರೋ ಅವರಿಗೆ ಅನುದಾನ ಕೊಡ್ತಾರೆ ಎಂದು ಆರೋಪಿಸಿದ್ದಾರೆ.
ನೇರವಾಗಿಯೇ ಲಂಚ ಕೇಳುತ್ತಾರೆ: ಸಚಿವ, ಶಾಸಕರ ವಿರುದ್ಧ ಗುತ್ತಿಗೆದಾರರ ‘ಬಾಂಬ್’, ಪ್ರಮುಖರ ಹೆಸರು ಬಹಿರಂಗ!
ಪರ್ಸಂಟೇಜ್ ಮೊದಲಿನಿಂದಲೂ ಇತ್ತು: ಪರ್ಸಂಟೇಜ್ ವ್ಯವಸ್ಥೆ ಈಗಿನ ಸರ್ಕಾರದಲ್ಲ, ಮೊದಲಿನಿಂದಲೂ ಇದು ಇತ್ತು. ಆದರೆ, ಇಷ್ಟೊಂದು ಅವ್ಯವಸ್ಥೆ ಎಲ್ಲೂ ಇರ್ಲಿಲ್ಲ. ಶಾಸಕ ಪತ್ರ ಕೊಟ್ಟರೆ ಅನುದಾನ ರಿಲೀಸ್ ಮಾಡ್ತಾರೆ ಅದಕ್ಕೆ ಭ್ರಷ್ಟಾಚಾರ ಹೆಚ್ಚಾಗ್ತಿದೆ. ಮೊದಲು ಎಲ್ಲಾ 224 ಕ್ಷೇತ್ರಗಳಿಗೆ ಅನುದಾನ ಸಮಾನವಾಗಿ ಹಂಚಿಕೆ ಆಗ್ತಿತ್ತು. ಒಂದಿಷ್ಟು ಎಮರ್ಜೆನ್ಸಿ ಹಣ ಇಟ್ಟುಕೊಳ್ಳುತ್ತಿದ್ದರು. ಈಗ ಇದೆಲ್ಲಾ ಇಲ್ಲ, ಸಮಾನವಾದ ನಿಧಿ ಹಂಚಿಕೆ ಆಗ್ತಿಲ್ಲ. ಸಚಿವರುಗಳು ಬಜೆಟ್ ಹಣವನ್ನು ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಬಲರಾಮಯ್ಯ ಹೇಳಿದ್ದಾರೆ.
40% ಕೊಡ್ತಾನೆ ಅಂದ್ರೆ ಆತ ಉತ್ತಮನಾ? ಗುತ್ತಿಗೆದಾರರಿಗೆಯೇ ಪ್ರಶ್ನಿಸಿದ ಸಚಿವ
ಶಾಸಕರ ಬಾಲಕ್ಕೆ ಅನುದಾನ: ಶಾಸಕರ ಬಾಲಂಗೋಚಿಗೆ ಕಂಟ್ರ್ಯಾಕ್ಟರ್ ಅನುದಾನ ಸಿಗುತ್ತೆ. ಆತ ಕ್ಯಾಶ್ ನಲ್ಲಿಯೇ ಲಂಚ ಕೊಡ್ತಾನೆ. ಕೆಲ ಅಧಿಕಾರಿಗಳು ಮೊದಲು ತೆಗೆದುಕೊಳ್ಳುತ್ತಾರೆ, ಕೆಲವರು ಕೆಲಸದ ನಂತರ ತೆಗೆದುಕೊಳ್ಳುತ್ತಾರೆ. ಇನ್ನೊಂದೆಡೆ ಶಾಸಕ ಲೆಟರ್ ಕೊಡೊದಿಕ್ಕೆ ಲಂಚ ತೆಗೆದುಕೊಳ್ತಾರೆ ಎಂದು ಆರೋಪಿಸಿದ್ದಾರೆ.