
ತುಮಕೂರು, (ನ.6): ತುಮಕೂರು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ತುಮಕೂರು ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. 2 ಎಕರೆ ವಿವಾದಿತ ಜಾಗದ ಮೇಲಿನ ಈ ನಿರ್ಣಯ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ವಿಚಾರವಾಗಿ ಬಿಜೆಪಿ ತೀವ್ರ ಖಂಡಿಸಿದೆ.
ರಾಜ್ಯ ಸರ್ಕಾರವು ತುಮಕೂರು ಮಹಾನಗರ ಪಾಲಿಕೆಗೆ ಸೇರಿದ್ದ ಮರಳೂರು ದಿಣ್ಣೆಯಲ್ಲಿರುವ ಸರ್ವೇ ನಂ. 87/1 ಮತ್ತು 87/2ರ 2 ಎಕರೆ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ರಾಜೀವ್ ಗಾಂಧಿ ಭವನ ಟ್ರಸ್ಟ್‌ಗೆ ಮಂಜೂರು ಮಾಡಿತ್ತು. ಈ ಜಾಗದ ಮೌಲ್ಯ 25 ಕೋಟಿಗೂ ಹೆಚ್ಚಾಗಿದೆ. ಆದರೆ ಎರಡು ಎಕರೆ ಜಮೀನು ಕೇವಲ 17 ಲಕ್ಷಕ್ಕೆ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 13ರಂದು ಟ್ರಸ್ಟ್ ನೋಂದಣಿ ಮಾಡಿಸಿ, ಜಾಗವನ್ನು ನೋಂದಾಯಿಸಿ ನಿರ್ಮಾಣ ಕಾರ್ಯಾರಂಭಕ್ಕೆ ಮುಂದಾಗಿದ್ದ ಕಾಂಗ್ರೆಸ್. ಆದರೆ, ಈ ಜಾಗವು ಗಂಗಮ್ಮ ಎಂಬುವವರ ಕುಟುಂಬಕ್ಕೆ ಪಿತ್ರಾರ್ಜಿತ ಆಸ್ತಿಯೆಂದು ದಾವೆ ಹೂಡಿರುವ ಕುಟುಂಬಸ್ಥರು 2015ರಿಂದಲೇ ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿದ್ದರು (ಒ.ಎಸ್. ನಂ. 426/15 ಮತ್ತು 896/25). ಅ.31ರಂದು ತುಮಕೂರು ನ್ಯಾಯಾಲಯವು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ತಕ್ಷಣ ತಡೆಯಾಜ್ಞೆ ನೀಡಿ, ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಆದೇಶ ನೀಡಿತ್ತು. ವಿವಾದಿತ ಜಾಗದ ವಿಚಾರವಾಗಿ ತುಮಕೂರು ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ನಡುವೆಯೇ ಸರ್ಕಾರ ಜಾಗ ಮಂಜೂರಿ ಸರ್ಕಾರ ಎಡವಟ್ಟು ಮಾಡಿದೆ.
ಏತನ್ಮಧ್ಯೆ ಈ ವಿವಾದ ಇದೀಗ ರಾಜಕೀಯ ತಿರುವು ಪಡೆದಕೊಂಡಿದೆ. ನಿಯಾಮಾವಳಿಗಳನ್ನು ಗಾಳಿಗೆ ತೂರಿ ಮಂಜೂರು ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ರಾಜ್ಯ ಸರ್ಕಾರದ ನಡೆಗೆ ತುಮಕೂರು ಜಿಲ್ಲಾ ಬಿಜೆಪಿ ತಿರುಗಿಬಿದ್ದಿದೆ. ಅಧಿಕಾರಿಗಳನ್ನ ಕೈಗೊಂಬೆ ಮಾಡಿಕೊಂಡು ರೈತರ ಜಮೀನನ್ನ ಮಹಾನಗರ ಪಾಲಿಕೆ ಪಡೆದಿದೆ ಎಂಬ ಆರೋಪವಿದೆ. ಅದೇ ಜಾಗವನ್ನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿದೆ. ನಾವು ಯಾವುದೇ ಕಾರಣಕ್ಕೂ ಆ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್:
ತುಮಕೂರು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದಿತ ಜಾಗದ ತಡೆಯಾಜ್ಞೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದ್ದು, ಸರ್ಕಾರಕ್ಕೆ ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ. ತಡೆಯಾಜ್ಞೆ ತೆರವುಗೊಳಿಸಲು ಏಕಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ ಕಾಂಗ್ರೆಸ್. ನ್ಯಾ.ಎಸ್.ಜಿ.ಪಂಡಿತ್ ಹಾಗೂ ನ್ಯಾ.ಗೀತಾ ಕೆ.ಬಿ. ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಮೇಲ್ಮನವಿಯನ್ನು ತಿರಸ್ಕರಿಸಿ, ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ವಜಾಗೊಳಿಸಿದೆ. ಬಿಜೆಪಿ ಕೋರ್ಟ್‌ನ ಈ ನಿರ್ಣಯವನ್ನು ಸರ್ಕಾರದ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ