RSS Route March: ಚಿತ್ತಾಪುರ ಪಥಸಂಚಲನಕ್ಕೆ 2 ದಿನಾಂಕ ಫಿಕ್ಸ್? ಪ್ರಸ್ತಾವನೆಯಲ್ಲಿ ಏನಿದೆ?

Kannadaprabha News, Ravi Janekal |   | Kannada Prabha
Published : Nov 06, 2025, 08:15 AM IST
RSS route march in Chittapur update

ಸಾರಾಂಶ

ಆರ್‌ಎಸ್‌ಎಸ್‌ 100 ವರ್ಷ ಪೂರೈಸಿದ ಹಿನ್ನೆಲೆ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ. ಹೈಕೋರ್ಟ್‌ ಸೂಚನೆ ಮೇರೆಗೆ ನಡೆದ ಶಾಂತಿ ಸಭೆಯಲ್ಲಿ, ನ.13 ಅಥವಾ 16ರಂದು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಪಥಸಂಚಲನ ನಡೆಸುವ ಬಗ್ಗೆ ವಿವರಿಸಲಾಗಿದೆ.

ಬೆಂಗಳೂರು (ನ.6): ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌) 100 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.13 ಅಥವಾ 16ರಂದು ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್‌ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ಪಥಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ಉಂಟಾಗಿರುವ ವಿವಾದ ಪರಿಹರಿಸಲು ರಾಜ್ಯ ಅಡ್ವೋಕೆಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಶಾಂತಿ ಸಭೆ ನಡೆಯಿತು.

ವಿವಾದ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರೂ ಆಗಿರುವ ಆರ್‌ಎಸ್‌ಎಸ್‌ ಕಲಬುರಗಿ ಜಿಲ್ಲಾ ಸಮನ್ವಯಕಾರ ಅಶೋಕ್‌ ಪಾಟೀಲ್‌, ಹಿರಿಯ ವಕೀಲ ಎಸ್‌.ಅರುಣ್‌ ಶ್ಯಾಮ್‌ ಸಮ್ಮುಖದಲ್ಲಿ ಎಜಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಪ್ರಸ್ತಾವನೆಯೊಂದಿಗೆ ಪಥಸಂಚಲನ ನಡೆಸುವ ಮಾರ್ಗ, ಸ್ವಯಂ ಸೇವಕರು ನಡೆಸಲಿರುವ ಸಭೆ, ವಾಹನಗಳ ನಿಲುಗಡೆಗೆ ಗುರುತಿಸಿರುವ ಜಾಗದ ಫೋಟೋಗಳನ್ನು ಸಹ ಸಲ್ಲಿಸಲಾಗಿದೆ. ಶಶಿಕಿರಣ್‌ ಶೆಟ್ಟಿ ಪ್ರತಿಕ್ರಿಯಿಸಿ, ಪ್ರಸ್ತಾವನೆ ಕುರಿತು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬೇಕಿದೆ. ನಿರ್ಧಾರ ಕೈಗೊಂಡು ನ.7ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಚಿತ್ತಾಪುರ ಪಥಸಂಚಲನ: ಪ್ರಸ್ತಾವನೆ ಏನು?:

ನ.13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಪಥಸಂಚಲನದಲ್ಲಿ ಚಿತ್ತಾಪುರ ತಾಲೂಕು ಆರ್‌ಎಸ್‌ಎಸ್‌ ಸ್ವಯಂ ಸೇವಕರು ಮಾತ್ರ ಭಾಗವಹಿಸುತ್ತಾರೆ. ನೆರೆಯ ತಾಲೂಕಿನವರು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಪಥಸಂಚಲನದಲ್ಲಿ 600ರಿಂದ 850 ಸ್ವಯಂ ಸೇವಕರು ಮಾತ್ರ ಗಣವೇಷದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ನಡೆಸುವ ನಾಲ್ಕು ಸಾಲಿನ ಬದಲು ಮೂರು ಸಾಲಿನಲ್ಲೇ ಮೂರು ಕಿ.ಮೀ. ಪಥಸಂಚಲನ ನಡೆಸಲಾಗುತ್ತದೆ. ಪಥ ಸಂಚಲ ಸುಮಾರು 37ರಿಂದ 45 ನಿಮಿಷದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಯಾರ ಭಾವನೆಗಳಿಗೂ ಆರೆಸ್ಸೆಸ್ ಧಕ್ಕೆ ತರುವುದಿಲ್ಲ:

ಪಥಸಂಚಲನ ವೇಳೆ ಯಾವುದೇ ಘೋಷಣೆ ಕೂಗುವುದಿಲ್ಲ. ಕೇವಲ ಬ್ಯಾಂಡ್‌ ವಾದ್ಯ ನುಡಿಸಲಾಗುತ್ತದೆ. ಯಾರ ಭಾವನೆಗಳಿಗೂ ಆರ್‌ಎಸ್‌ಎಸ್ ಧಕ್ಕೆ ತರುವುದಿಲ್ಲ. ಯಾರನ್ನೂ ಅಪಹಾಸ್ಯ ಮಾಡುವುದಿಲ್ಲ. ಶಾಂತಿ ಭಂಗ ತರುವುದಿಲ್ಲ. ಇಡೀ ಪಥಸಂಚಲವನ್ನು ಡ್ರೋನ್‌ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಲಾಗುತ್ತದೆ. ಗೂಗಲ್‌ ಮ್ಯಾಪ್‌ ಮೂಲಕ ಫೋಟೋಗಳನ್ನು ತೆಗೆಯಲಾಗುತ್ತದೆ.

ಪಥಸಂಚಲನಕ್ಕೆ ಪರವಾನಗಿ ನೀಡಲು ಜಿಲ್ಲಾಡಳಿತ ವಿಧಿಸುವ ಎಲ್ಲ ಷರತ್ತುಗಳನ್ನು ಪಾಲಿಸಲಾಗುವುದು. ಸ್ವಯಂಸೇವಕರ ವಾಹನಗಳನ್ನು ಬಜಾಜ್‌ ಕಲ್ಯಾಣ ಮಂಟಪ ಆವರಣದಲ್ಲಿ ನಿಲ್ಲಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಪಥಸಂಚಲನದ ಕೊನೆಯಲ್ಲಿ ಬಜಾಜ್‌ ಕಲ್ಯಾಣ ಮಂಟಪದೊಳಗೆ ಸ್ವಯಂಸೇವಕರ ಸಭೆ ನಡೆಸಲಿದ್ದು, ಅದಕ್ಕಾಗಿ ಈಗಾಗಲೇ ಅಗತ್ಯ ಅನುಮತಿ ಪಡೆಯಲಾಗಿದೆ ಎಂದು ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಭೆಯಲ್ಲಿ ಕಲಬುರಗಿ ಜಿಲ್ಲಾಡಳಿತದ ಅಧಿಕಾರಿಗಳು,ಕಡ್ಲೂರ್‌ ಸತ್ಯನಾರಾಯಣಾಚಾರ್ಯ ಮತ್ತಿತರರು ಭಾಗವಹಿಸಿದ್ದರು.

ಸಕಾರಾತ್ಮಕ ವಿಶ್ವಾಸ

ಹೈಕೋರ್ಟ್‌ ಸೂಚನೆಯಂತೆ ಅಡ್ವೋಕೆಟ್‌ ಜನರಲ್‌ ನಡೆಸಿದ ಶಾಂತಿ ಸಭೆಯಲ್ಲಿ ಭಾಗವಹಿಸಿ, ನ.13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಿದ್ದು, ಅನುಮತಿ ನೀಡಲು ಕೋರಲಾಗಿದೆ. ಎಜಿ ಅವರ ನೇತೃತ್ವದಲ್ಲಿ ಸಭೆಯು ಶಾಂತಿಯುತವಾಗಿ ನಡೆಯಿತು. ನಮ್ಮ ಪ್ರಸ್ತಾವನೆಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸವಿದೆ.

-ಅರುಣ್‌ ಶ್ಯಾಮ್‌, ಅರ್ಜಿದಾರರ ಪರ ಹಿರಿಯ ವಕೀಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!