ಕೊರೋನಾ ಎಫೆಕ್ಟ್: ಟ್ರಾವೆಲ್ಸ್‌ ಉದ್ಯಮ ತತ್ತರ, ಬಿಸಿನೆಸ್‌ ಇಲ್ಲದೇ ಭಾರೀ ನಷ್ಟ

By Kannadaprabha NewsFirst Published Aug 17, 2020, 7:12 AM IST
Highlights

ಟ್ರಾವೆಲ್ಸ್‌ನವರಿಗೆ ಬಿಸಿತುಪ್ಪವಾದ ಐಷಾರಾಮಿ ಕಾರುಗಳು| ನಗರದಲ್ಲಿ ಸುಮಾರು 20 ಸಾವಿರ ಐಷಾರಾಮಿ ಕಾರುಗಳಿವೆ| ಕಳೆದ ಐದು ತಿಂಗಳಿಂದ ಬಾಡಿಗೆ ಇಲ್ಲದೆ ಈ ಐಷಾರಾಮಿ ಕಾರುಗಳನ್ನು ಶೆಡ್‌, ಟ್ರಾವಲ್ಸ್‌ ಆವರಣ, ಮೈದಾನಗಳಲ್ಲಿ ನಿಲುಗಡೆ| 

ಬೆಂಗಳೂರು(ಆ.17): ರಾಜಧಾನಿಯಲ್ಲಿ ಕೊರೋನಾ ಆರ್ಭಟ ಮುಂದುವರೆಯುತ್ತಿರುವ ಪರಿಣಾಮ ಐಷಾರಾಮಿ ಕಾರುಗಳನ್ನು ಹೊಂದಿರುವ ಟ್ರಾವಲ್ಸ್‌ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟ್ರಾವಲ್ಸ್‌

ಇಡೀ ಸಾರಿಗೆ ಉದ್ಯಮವೇ ಕುಸಿದಿದ್ದು, ಖಾಸಗಿ ವಾಹನ ಟ್ರಾವಲ್ಸ್‌ಗಳು ಹಾಗೂ ಮಾಲೀಕರು ತತ್ತರಿಸಿದ್ದಾರೆ. 50 ಲಕ್ಷ ರು.ನಿಂದ 1 ಕೋಟಿ ರು. ಮೌಲ್ಯದ ಬೆಂಜ್‌, ಆಡಿ, ವೋಲ್ವೊ, ಬಿಎಂಡಬ್ಲ್ಯೂ ಸೇರಿದಂತೆ ವಿವಿಧ ಮಾದರಿಯ ಐಷಾರಾಮಿಗಳನ್ನು ಹೊಂದಿರುವ ಟ್ರಾವಲ್ಸ್‌ ಮಾಲೀಕರು ಇತ್ತ ಆದಾಯವೂ ಇಲ್ಲದೆ ಅತ್ತ ಕಾರುಗಳನ್ನು ನಿರ್ವಹಣೆ ಮಾಡಲಾಗದೆ ಪರದಾಡುತ್ತಿದ್ದಾರೆ.

ಮತ್ತೋರ್ವ ಬಿಜೆಪಿ ಶಾಸಕರಿಗೆ ಕೊರೋನಾ ದೃಢ

ನಗರದ ಬಹುತೇಕ ಐಟಿ-ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿವೆ. ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಂಡಿದೆ. ನಗರದಲ್ಲಿ ಆರ್ಥಿಕ, ತಾಂತ್ರಿಕತೆ, ವಿಜ್ಞಾನ, ಕೈಗಾರಿಕೆಗಳ ಕ್ಷೇತ್ರ ಸೇರಿದಂತೆ ಯಾವುದೇ ದೊಡ್ಡ ಸಮಾವೇಶ, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೊರರಾಜ್ಯದ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಪ್ರತಿಷ್ಠಿತರು ಕೊರೋನಾ ಭೀತಿಯಿಂದ ರಾಜ್ಯ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮ ಖಾಸಗಿ ಟ್ರಾವಲ್ಸ್‌ಗಳು ಆದಾಯ ಇಲ್ಲದೆ ಪರಿತಪಿಸತ್ತಿದ್ದಾರೆ.

ದೇಶ-ವಿದೇಶಗಳಿಂದ ನಗರಕ್ಕೆ ಬರುವ ಕೈಗಾರಿಕೋದ್ಯಮಿಗಳು, ಪ್ರತಿಷ್ಠಿತ ವ್ಯಕ್ತಿಗಳು, ಗಣ್ಯರು ನಗರದಲ್ಲಿ ಸಂಚರಿಸಲು ಐಷಾರಾಮಿ ಕಾರುಗಳನ್ನು ಬಳಸುತ್ತಾರೆ. ಅಂತಾರಾಷ್ಟ್ರೀಯ ವಿಮಾನ ಸೇವೆ ನೀಡುವ ವಿಮಾನಯಾನ ಕಂಪನಿಗಳು, ಪ್ರತಿಷ್ಠಿತ ಹೋಟೆಲ್‌ಗಳು ಗ್ರಾಹಕರನ್ನು ಸೆಳೆಯಲು ವಿಮಾನ ನಿಲ್ದಾಣದಿಂದ ಹೋಟೆಲ್‌, ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಉಚಿತ ಐಷಾರಾಮಿ ಕಾರು ಪ್ರಯಾಣದ ಆಫರ್‌ ನೀಡುತ್ತವೆ. ಹೀಗಾಗಿ ಪ್ರತಿ ನಿತ್ಯ ಸಾವಿರಾರು ಐಷಾರಾಮಿಗಳು ಕಾರಗಳನ್ನು ಮುಂಗಡವಾಗಿ ಬುಕ್‌ ಮಾಡಲಾಗುತ್ತಿತ್ತು. ಇದೀಗ ಈ ಎಲ್ಲವೂ ಸ್ಥಗಿತವಾಗಿದೆ ಎಂದು ರಾಜ್ಯ ಟ್ರಾವಲ್ಸ್‌ ಆಪರೇಟರ್‌ಗಳ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಹೇಳಿದರು.

ಧೂಳು ತಿನ್ನುತ್ತಿರುವ ಕಾರುಗಳು

ನಗರದಲ್ಲಿ ಸುಮಾರು 20 ಸಾವಿರ ಐಷಾರಾಮಿ ಕಾರುಗಳಿವೆ. ಕಳೆದ ಐದು ತಿಂಗಳಿಂದ ಬಾಡಿಗೆ ಇಲ್ಲದೆ ಈ ಐಷಾರಾಮಿ ಕಾರುಗಳನ್ನು ಶೆಡ್‌, ಟ್ರಾವಲ್ಸ್‌ ಆವರಣ, ಮೈದಾನಗಳಲ್ಲಿ ನಿಲುಗಡೆ ಮಾಡಲಾಗಿದೆ. ಒಂದೆಡೆ ವಾಹನಗಳ ಖರೀದಿಗೆ ಬ್ಯಾಂಕ್‌, ಖಾಸಗಿ ಹಣಕಾಸು ಸಂಸ್ಥೆಗಳಿಂದ ಲಕ್ಷಾಂತರ ರು. ಸಾಲ ಪಡೆದಿದ್ದೇವೆ. ಸಾಲದ ಕಂತು ಪಾವತಿಸುವುದು ಕಷ್ಟವಾಗಿದೆ. ಮತ್ತೊಂದೆಡೆ ಈ ಕಾರುಗಳನ್ನು ಮಾರಾಟ ಮಾಡೋಣವೆಂದರೂ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎಂದು ಮಾಲೀಕರು ಅಳಲು ತೋಡಿಕೊಂಡರು.

ನೆಲಕಚ್ಚಿರುವ ಖಾಸಗಿ ಸಾರಿಗೆ ಉದ್ಯಮ ಉಳಿಯಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಬೇಕು. ವಾಹನಗಳ ಸಾಲ ಪಾವತಿಗೆ ಡಿಸೆಂಬರ್‌ವರೆಗೂ ಅವಕಾಶ ನೀಡಬೇಕು. ವಾಹನ ತೆರಿಗೆ, ರಸ್ತೆ ತೆರಿಗೆ ಸೇರಿದಂತೆ ಎಲ್ಲ ರೀತಿಯ ತೆರಿಗೆಗಳಲ್ಲಿ ವಿನಾಯಿತಿ ನೀಡಬೇಕು ಎಂದು ರಾಜ್ಯ ಟ್ರಾವಲ್ಸ್‌ ಆಪರೇಟರ್‌ಗಳ ಸಂಘದ ಅಧ್ಯಕ್ಷ ಕೆ.ರಾಧಕೃಷ್ಣ ಹೊಳ್ಳ ಅವರು ತಿಳಿಸಿದ್ದಾರೆ. 

click me!