ಓಲಾ, ಉಬರ್‌ಗೆ ಲಗಾಮು ಹಾಕಿದ ಸಾರಿಗೆ ಇಲಾಖೆ ಆಯುಕ್ತ ಎತ್ತಂಗಡಿ!

By Kannadaprabha NewsFirst Published Nov 7, 2022, 8:30 AM IST
Highlights
  • ಓಲಾ, ಉಬರ್‌ಗೆ ಲಗಾಮು ಹಾಕಿದ ಅಧಿಕಾರಿ ಎತ್ತಂಗಡಿ!
  • ಹೈಕೋರ್ಚ್‌ಗೆ ದರ ಪಟ್ಟಿಸಲ್ಲಿಸುವ ಮುನ್ನ ವರ್ಗ
  • ಇದು ಶಿಕ್ಷೆ: ಆಟೋ ಚಾಲಕರ ಸಂಘದ ಆಕ್ರೋಶ

ಬೆಂಗಳೂರು (ನ.7) : ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋರಿಕ್ಷಾಗಳ ನೂತನ ದರ ಪಟ್ಟಿಯನ್ನು ಸಾರಿಗೆ ಇಲಾಖೆಯು ಹೈಕೋರ್ಚ್‌ಗೆ ಸಲ್ಲಿಸುವ ಕೆಲ ದಿನಗಳ ಮುಂಚೆ ರಾಜ್ಯ ಸಾರಿಗೆ ಇಲಾಖೆ ಆಯುಕ್ತ ಎಚ್‌.ಎಂ.ಟಿ. ಕುಮಾರ್‌ ವರ್ಗಾವಣೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಕುಮಾರ್‌ ಅವರ ಸ್ಥಾನಕ್ಕೆ ಐಪಿಎಸ್‌ ಅಧಿಕಾರಿ ಸಿದ್ದರಾಮಪ್ಪ ಅವರನ್ನು ನೇಮಿಸಲಾಗಿದೆ.

ಬೆಂಗಳೂರು: 100 ಕನಿಷ್ಠ ದರಕ್ಕೆ ಆ್ಯಪ್‌ ಆಟೋ ಬೇಡಿಕೆ..!

ಆಟೋ ರಿಕ್ಷಾ ದರ ನಿಗದಿ ಕುರಿತು ರಾಜ್ಯ ಸಾರಿಗೆ ಇಲಾಖೆ ದರ ಪಟ್ಟಿಸಿದ್ಧಪಡಿಸುತ್ತಿದ್ದ ಸಂದರ್ಭದಲ್ಲಿಯೇ ಸಾರಿಗೆ ಇಲಾಖೆ ಆಯುಕ್ತರ ವರ್ಗಾವಣೆಯಾಗಿರುವುದಕ್ಕೆ ಆಟೋಚಾಲಕ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಆ್ಯಪ್‌ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾದ ಇಲಾಖೆ ಆಯುಕ್ತರಿಗೆ ರಾಜ್ಯ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ ಎಂಬ ಆರೋಪವು ಕೇಳಿ ಬಂದಿದೆ.

ಗ್ರಾಹಕರಿಂದ ಓಲಾ, ಉಬರ್‌ ದುಪ್ಪಟ್ಟು ದರ ವಸೂಲಿ ಮಾಡುತ್ತಿವೆ ಎಂದು ಕಳೆದ ತಿಂಗಳು ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರಾಗಿದ್ದ ಎಚ್‌ಎಂಟಿ ಕುಮಾರ್‌ ಅ.7ರಂದು ಅಗ್ರಿಗೇಟರ್ಸ್‌ಗಳಿಗೆ ಕೂಡಲೇ ಆಟೋರಿಕ್ಷಾ ಸೇವೆ ನಿಲ್ಲಿಸುವಂತೆ ನೋಟಿಸ್‌ ನೀಡಿದ್ದರು. ಬಳಿಕ ಕಂಪನಿಗಳ ಜತೆ ಸಭೆ ನಡೆಸಿ ಸರ್ಕಾರ ನಿಗದಿ ಪಡಿಸಿರುವ ಮೀಟರ್‌ ದರವನ್ನು ಪಡೆಯುವಂತೆ ಸೂಚಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಆ್ಯಪ್‌ ಕಂಪನಿಗಳು ಹೈಕೋರ್ಚ್‌ ಮೊರೆಹೋಗಿದ್ದವು. ಹೈಕೋರ್ಚ್‌ ಕೂಡಾ ಸಭೆ ನಡೆಸಿ ನ.7ರೊಳಗೆ ಸೂಕ್ತದರ ನಿಗದಿ ಪಡಿಸುವಂತೆ, ಅಲ್ಲಿಯವರೆಗೂ ಸರ್ಕಾರದ ನಿಗದಿ ಪಡಿಸಿದ ಮೀಟರ್‌ ದರದಲ್ಲಿ ಆಟೋರಿಕ್ಷಾ ಸೇವೆ ನೀಡುವಂತೆ ಸೂಚಿಸಿತ್ತು. ಸದ್ಯ ಸಭೆಗಳನ್ನು ನಡೆಸಿದ್ದು, ದರ ಪಟ್ಟಿಯನ್ನು ಹೈಕೋರ್ಚ್‌ಗೆ ಸಲ್ಲಿಸುವ ಕೆಲ ದಿನಗಳ ಮುಂಚೆ ಆಯುಕ್ತರ ವರ್ಗಾವಣೆಯಾಗಿದೆ.

ಓಲಾ, ಉಬರ್‌ಗೆ 30,000 ಆಟೋ ಗುಡ್‌ಬೈ!

ಭಾರತ್‌ ಟ್ರಾನ್ಸ್‌ಪೋರ್ಚ್‌ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷ ಜಯಣ್ಣ ಮಾತನಾಡಿ, ಸರ್ಕಾರ ಓಲಾ, ಉಬರ್‌ ಕಂಪನಿಗಳ ಪರವಾಗಿದೆ. ಹೀಗಾಗಿಯೇ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಸಾರಿಗೆ ಆಯುಕ್ತರ ವರ್ಗಾವಣೆ ಮಾಡಿದೆ. ಆರು ತಿಂಗಳ ಹಿಂದಷ್ಟೇ ಸಾರಿಗೆ ಇಲಾಖೆಗೆ ಬಂದಿದ್ದರು. ಇಲಾಖೆ ತಿಳಿದುಕೊಳ್ಳುವ ಮುಂಚೆ ವರ್ಗಾವಣೆ ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

click me!