
ಆನಂದ್ ಎಂ. ಸೌದಿ
ಯಾದಗಿರಿ (ಏ.09): ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 38 ಕಿ.ಮೀ. ದೂರದಲ್ಲಿರುವ, ಗುರುಮಠಕಲ್ ತಾಲೂಕಿನ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿವಿಧ ರೀತಿಯ ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷ ಗಾಳಿಯಿಂದಾಗಿ ಬದುಕು ಅಸಹನೀಯವಾಗಿದೆ ಎಂಬ ಆರೋಪಗಳು ಮೂಡಿಬರುತ್ತಿವೆ. ತೆಲಂಗಾಣ ಗಡಿಯಂಚಿನ, ಭೀಮಾ-ಕೃಷ್ಣಾ ನದಿಗಳಿಗೆ ಕೂಗಳತೆ ದೂರದಲ್ಲಿರುವ, ಯಾದಗಿರಿ ಜಿಲ್ಲೆಯ ಕಡೇಚೂರು, ಬಾಡಿಯಾಳ, ಶೆಟ್ಟಿಹಳ್ಳಿ, ರಾಚನಹಳ್ಳಿ, ಬದ್ದೇಪಲ್ಲಿ, ಚಂದಾಪುರ, ಸೈದಾಪುರ, ಮುನುಗಲ್, ಸಂಗ್ವಾರ್, ಸೌರಾಷ್ಟ್ರಹಳ್ಳಿ, ಮಾವಿನಹಳ್ಳಿ, ಬೋಮಲಾರದೊಡ್ಡಿ, ಬೆಳಗುಂಡಿ, ಕ್ಯಾತನಾಳ, ದುಪ್ಪಲ್ಲಿ, ಸಾವೂರು ಮುಂತಾದ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜನಜೀವನ ಜರ್ಝರಿತಗೊಂಡಿದೆ.
ಕೋಕೋ ಕೋಲಾ, ಜವಳಿ ಪಾರ್ಕ್‌ನಂತಹ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ, ನೀರು, ಆಶ್ರಯ, ಶಿಕ್ಷಣ ಮುಂತಾದ ವ್ಯವಸ್ಥೆಗಳನ್ನು ನೀಡುವುದಾಗಿ ಹೇಳಿ, ದಶಕದ ಹಿಂದೆ 3232 ಎಕರೆ ಕೃಷಿ ಜಮೀನನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ದೊಡ್ಡ ದೊಡ್ಡ ಕೈಗಾರಿಕೆಗಳು ಬಂದ ನಂತರ ತಮ್ಮೂರು-ತಮ್ಮ ಬದುಕು ಉದ್ಧಾರವಾಗುತ್ತದೆ, ಉದ್ಯೋಗ ಸಿಕ್ಕು ಕೈತುಂಬಾ ಸಂಬಳ ಬರುತ್ತದೆ, ಮಕ್ಕಳ ಬದುಕು ಹಸನಾಗುತ್ತದೆ ಎಂದೆಲ್ಲಾ ಕನಸುಗಳ ಕಂಡ ಇಲ್ಲಿನ ಜನರಿಗೆ ಈಗ ಸಿಗುತ್ತಿರುವುದು ವಿಷಗಾಳಿ, ಕೆಮಿಕಲ್‌ಯುಕ್ತ ಕುಡಿಯುವ ನೀರು, ಕ್ಯಾನ್ಸರ್‌ನಂತಹ ರೋಗಗಳು ಮಾತ್ರ. ಈ ಮಧ್ಯೆ ಸರ್ಕಾರ, ಮತ್ತೇ ಬಲ್ಕ್ ಫಾರ್ಮಾ ಡ್ರಗ್ ಕಂಪನಿಗಳ ಸ್ಥಾಪನೆಗೆಂದು ಹೆಚ್ಚುವರಿಯಾಗಿ 3269 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆಯನ್ನೂ ಹೊರಡಿಸಿದೆ.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕ ರಾವಣ ರಾಜ್ಯ: ಜನಾಕ್ರೋಶ ಯಾತ್ರೆಯಲ್ಲಿ ಗುಡುಗಿದ ವಿಜಯೇಂದ್ರ
ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು: 38 ರಿಂದ 40 ವರ್ಷ ವಯಸ್ಸಿನವರಿಗೆ ದೃಷ್ಟಿದೋಷ, ಚರ್ಮ ವ್ಯಾಧಿ ಇಲ್ಲೀಗ ಸಾಮಾನ್ಯವಾದಂತಾಗಿದೆ. ಗರ್ಭದಲ್ಲೇ ಶಿಶುಗಳ ಬೆಳವಣಿಗೆ ಕುಂಠಿತಗೊಂಡು, ಗರ್ಭಿಣಿ ಹಾಗೂ ಬಾಣಂತಿಯರು ಹರಸಾಹಸದ ಜೀವನ ನಡೆಸುತ್ತಿದ್ದಾರೆ. ಹುಟ್ಟಿದ ಕೂಸಿಗೆ ಕೆಮ್ಮ- ದಮ್ಮು- ಅಸ್ತಮಾ ಸಹಜವೇನೋ ಅಂತೆಂಬ ಭಾವನೆ ಬೇರೂರಿದೆ. ಕೆಮಿಕಲ್‌ಯುಕ್ತ ತ್ಯಾಜ್ಯಗಳಿಂದಾಗಿ ಕಲುಷಿತಗೊಂಡ ಅಂತರ್ಜಲದಿಂದಾಗಿ ಕರಿಬಣ್ಣಕ್ಕೆ ತಿರುಗಿದ ಜೀವಜಲ ಇವರಿಗೆ ಅನಿವಾರ್ಯ. ತಲೆ ಸುತ್ತುವಿಕೆ, ವಾಂತಿ, ಹದಿಹರೆಯದಲ್ಲೇ ಮೆದುಳು-ಕಿಡ್ನಿ ಸಂಬಂಧಿ ಕಾಯಿಲೆಗಳು ಅಮಾಯಕರ ಜೀವ ಪಡದಿವೆ.
ವೃದ್ಧರು-ವಯೋವೃದ್ಧರದ್ದು ಈಗಲೋ-ಆಗಲೋ ಎನ್ನುವಂತಹ ದುಸ್ಥಿತಿ. 10-12 ವರ್ಷದಲ್ಲೇ ‘ದೊಡ್ಡವರಾ’ಗುವ ಚಿಕ್ಕ ಮಕ್ಕಳ ಆರೋಗ್ಯದ ಮೇಲಾಗುತ್ತಿರುವ ಪರಿಣಾಮ ಅವರ ಭವಿಷ್ಯಕ್ಕೆ ಮಾರಕವಾಗಿದ್ದರೆ, ಶಾಲೆಗಳಲ್ಲಿ ಮೂಗಿಗೇ ಬಟ್ಟೆ ಕಟ್ಟಿಕೊಂಡೇ ಪಾಠ ಮಾಡುವ ಶಿಕ್ಷಕರು- ಪಾಠ ಕೇಳುವ ಮಕ್ಕಳ ಅನಿವಾರ್ಯತೆ ಈ ಭಾಗದ ಮಕ್ಕಳ ಶಿಕ್ಷಣದ ಮೇಲೆಯೂ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಹೀಗಾಗಿ, ಉಸಿರಾಡಲೂ ಕಷ್ಟವಾಗಿರುವ ಈ ಭಾಗದ ಗ್ರಾಮೀಣರು, ತಮ್ಮ ಮುಂದಿನ ಪೀಳಿಗೆಯಾದರೂ ಆರೋಗ್ಯವಾಗಿ ಬದುಕಲಿ ಎಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳ ಸಮೇತ ಮಹಾನಗರಗಳಿಗೆ ಗುಳೇ ಹೋಗುತ್ತಿದ್ದಾರೆ. ಕೆಲವರು ಮನೆ-ಮಠ ಹೊಲಗದ್ದೆಗಳ ಮಾರಿ ಊರು ತೊರೆದರೆ, ಕೆಲವರು ಸದ್ದಿಲ್ಲದೆ ಸಾವಿನ ಮನೆಗಳತ್ತ ತೆರಳುತ್ತಿದ್ದಾರೆ.
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಫ್ಯಾಕ್ಟರಿಗಳು, ಬೃಹತ್ ಕಂಪನಿಗಳ ಅವೈಜ್ಞಾನಿಕ ಚಟುವಟಿಕೆಗಳು ಇಲ್ಲಿನ ಮನುಕುಲಕ್ಕೆ ಮಾರಕವಾಗುವತ್ತ ದಾಪುಗಾಲು ಇಡುತ್ತಿದೆ. ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿಗಳು, ಜೀವ-ಜಲಚರಗಳು, ಪ್ರಕೃತಿ-ಗಾಳಿ ಮುಂತಾದವುಗಳ ಬದುಕು ಅಸಹನೀಯವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ಜನರ ಆತಂಕ. ಇಲ್ಲಿನ ಕಲುಷಿತ ವಾತಾವರಣ, ಹದಗೆಟ್ಟ ಜನ-ಜೀವನ, ಅಧೋಗತಿಗೆ ಇಳಿದಿರುವ ಕೃಷಿ- ಅನ್ನದಾತನ ಅಳಲು, ಭವಿಷ್ಯದಲ್ಲಿ ಇಲ್ಲಿನ ಹಾಗೂ ಇಲ್ಲಿನವರ ಸ್ಥಿತಿಗತಿಯೇನು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ವಾಸ್ತವಾಂಶ ಮರೆ ಮಾಚುತ್ತಿವೆ ಎಂಬ ಆರೋಪಗಳಿವೆ.
ಫ್ಯಾಕ್ಟರಿಗಳನ್ನು ಬಂದ್ ಮಾಡಿಸಿ: ಕಂದಕೂರು ಎಚ್ಚರಿಕೆ: ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಜನರ ದುಸ್ಥಿತಿ ಬಗ್ಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ದನಿಯೆತ್ತಿದ್ದಾರೆ, ಆತಂಕ-ನೋವು ವ್ಯಕ್ತಪಡಿಸಿದ್ದಾರೆ. ವಿಷಗಾಳಿ- ಅಲ್ಲಿನ ಜನರ ಹೀನಾಯ ಸ್ಥಿತಿ-ಗತಿ ಕುರಿತ ಅವರ ದನಿ ಸದನದಲ್ಲಿ ಪ್ರತಿಧ್ವನಿಸಿದೆ. ವಿಷಗಾಳಿ ಸೂಸುವ ಫ್ಯಾಕ್ಟರಿಗಳ ಸರ್ಕಾರ ಬಂದ್ ಮಾಡಿಸುತ್ತದೆಯೋ ಅಥವಾ ನಾವೇ ಬಲವಂತವಾಗಿ ಬಂದ್ ಮಾಡೋಣವೇ ಎಂದು ಅವರು ಸದನದಲ್ಲಿ ಗುಡುಗಿದ್ದಾರೆ.
ಇದನ್ನೂ ಓದಿ: ವಿಧಾನಸೌಧ ಇನ್ನು ಮುಂದೆ ಪ್ರವಾಸಿ ತಾಣ: ರಾಷ್ಟ್ರಪತಿ ಭವನ ರೀತಿ ಗೈಡೆಡ್ ಟೂರ್ ವ್ಯವಸ್ಥೆ
ಕನ್ನಡಪ್ರಭ ಸರಣಿ ವರದಿಗಳು: ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಜನರ ಬದುಕು-ಬವಣೆ ಕುರಿತು ‘ಕನ್ನಡಪ್ರಭ’ ಸರಣಿ ವರದಿಗಳ ಪ್ರಕಟಿಸುತ್ತಿದೆ. ಅಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಸರ್ಕಾರದ ಗಮನ ಸೆಳೆದು, ಕೆಮಿಕಲ್ ಫ್ಯಾಕ್ಟರಿಗಳು, ಕೈಗಾರಿಕೆಗಳಿಂದ ಹೊರಸೂಸೂವ ವಿಷಾನಿಲದಿಂದಾಗಿ ಭವಿಷ್ಯದಲ್ಲಿ ಮನುಕುಲದ ಮೇಲಾಗುವ ದುಷ್ಪರಿಣಾಮಗಳ ತಪ್ಪಿಸಲು ಈ ವರದಿಗಳು ಜನಜಾಗೃತಿ ಮೂಡಿಸುವ ಪ್ರಯತ್ನವಾಗಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ