ಕೊರೋನಾ ಅಟ್ಟಹಾಸದ ಮಧ್ಯೆಯೂ ಪ್ರವಾಸಿಗರ ಬೇಜ​ವಾ​ಬ್ದಾರಿ ನಡೆ: ಹೆಚ್ಚುತ್ತಿದೆ ಆತಂಕ

By Kannadaprabha News  |  First Published Oct 13, 2020, 12:50 PM IST

ಮುಂದುವರಿದ ಪ್ರವಾಸಿಗರ ಬೇಜ​ವಾ​ಬ್ದಾರಿ ನಡೆ| ಪ್ರವಾಸೋದ್ಯಮದ ಚೇತರಿಕೆಯ ಜತೆಗೇ ಹೆಚ್ಚುತ್ತಿದೆ ಆತಂಕ| ಮಾಸ್ಕ್‌ ಧರಿಸದೆ, ಅಂತರ ಕಾಯ್ದುಕೊಳ್ಳದೆ ಸುತ್ತಾಟ| ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಸೋಂಕಿಗೆ ತುತ್ತಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳ| 


ಬೆಂಗ​ಳೂರು(ಅ.13): ಕೋವಿಡ್‌ ಅನ್‌ಲಾಕ್‌ ಬಳಿಕ ವಾರಾಂತ್ಯ ಮಾತ್ರವಲ್ಲದೆ ವಾರದ ಉಳಿದ ದಿನಗಳಲ್ಲೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿಧಾನವಾಗಿ ಜನಜಂಗುಳಿ ಕಾಣಸಿಗುತ್ತಿದೆ. ಇದರ ಜತೆಗೆ ಕೋವಿಡ್‌ ಮಹಾಮಾರಿ ಅಂಕೆ ಮೀರಿ ವ್ಯಾಪಿಸುತ್ತಿರುವ ಈ ಹೊತ್ತಿನಲ್ಲಿ ಪ್ರವಾಸಿಗರ ಹುಚ್ಚಾಟವೂ ಹೆಚ್ಚುತ್ತಿದೆ. ನೂರಾರು ಸಂಖ್ಯೆಯಲ್ಲಿ ಜನ ಸೇರುವ ಈ ಜಾಗಗಳಲ್ಲಿ ಮಾಸ್ಕ್‌ ಧರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಕನಿಷ್ಠ ನಿಯಮಾವಳಿಗಳನ್ನು ಪಾಲಿಸದೆ ಪ್ರವಾಸಿಗರು ಮೋಜಿನಲ್ಲಿ ತೊಡಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗಳಿಗೆ ಭಾನುವಾರ 2 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರೆ ಸೋಮವಾರ ಮೋಡ ಕವಿದ ವಾತಾವರಣದ ನಡುವೆಯೂ ಸುಮಾರು 500ರಿಂದ 600 ಮಂದಿ ಭೇಟಿ ಕೊಟ್ಟಿದ್ದಾರೆ. 

Latest Videos

undefined

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಉಡುಪಿಯ ಮಲ್ಪೆ, ಕಾಪು ಬೀಚ್‌ಗಳಿಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಪ್ರವಾಸಿಗರು ಅರಬ್ಬೀಸಮುದ್ರದ ಸೊಬಗನ್ನು ಸವಿದಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ಭಣಗುಡುತ್ತಿದ್ದ ಮಂಡ್ಯದ ಕೆಆರ್‌ಎಸ್‌ ಡ್ಯಾಂ, ರಂಗನತಿಟ್ಟು, ಬಲಮುರಿ, ಎಡಮುರಿ, ಗಗನಚುಕ್ಕಿ ಜಲಪಾತ, ಮುತ್ತತ್ತಿ, ಕಲ್ಲಹಳ್ಳಿ, ಕೊಡಗಿನ ರಾಜಾಸೀಟು, ದುಬಾರೆ, ಚಿಕ್ಲಿಹೊಳೆ, ಕಾವೇರಿ ನಿಸರ್ಗಧಾಮ, ಅಬ್ಬಿಜಲಪಾತ, ಮಲ್ಲಳ್ಳಿ, ಚೇಲವಾರ ಸೇರಿ ವಿವಿಧೆಡೆ ಪ್ರವಾಸಿಗರು ಇದ್ದರು. ಆದರೆ, ಶಿವಮೊಗ್ಗದ ತಾವರೆಕೆರೆ ನಿಸರ್ಗಧಾಮ, ವಿಶ್ವಪ್ರಸಿದ್ಧ ಜೋಗ ಜಲಪಾತದಲ್ಲಿ ಪ್ರವಾಸಿಗರ ಸಂಖ್ಯೆ ಕೊಂಚ ಕಡಿಮೆ ಇತ್ತು. ಇನ್ನು ಬಾಗಲಕೋಟೆ ಜಿಲ್ಲೆ ಬಾದಾಮಿಯ ಐಹೊಳೆ, ಪಟ್ಟದಕಲ್ಲು, ಹಾಸನದ ಬೇಲೂರು, ಹಳೆಬೀಡು, ಬೆಂಗಳೂರು ಸಮೀಪದ ನಂದಿಬೆಟ್ಟಕ್ಕೂ ರಜಾ ದಿನ ಅಲ್ಲದಿದ್ದರೂ ಪ್ರವಾಸಿಗರು ಆಗಮಿಸಿದ್ದರು. 

ಪ್ರವಾಸಿ ತಾಣಗಳಲ್ಲಿ ವೀಕೆಂಡ್ ಮೋಜು ಮಸ್ತಿ; ಪ್ರವಾಸಿಗರ ಹುಚ್ಚಾಟ ತರಲಿದೆ ಸಂಕಷ್ಟ

ಬಳ್ಳಾರಿ ಜಿಲ್ಲೆಯ ಪಾರಂಪರಿಕ ತಾಣ ಹಂಪಿಗೂ ದಿನೇ ದಿನೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಈವರೆಗೆ ಖಾಲಿ ಹೊಡೆಯುತ್ತಿದ್ದ ರೆಸಾರ್ಟ್‌ಗಳಿಗೂ ಜೀವಕಳೆ ಬಂದಿದೆ. ಚಿಕ್ಕಮಗಳೂರಿನ ಗಿರಿಧಾಮಗಳಿಗೂ ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ಕೊಟ್ಟಿದ್ದು ಪ್ರಕೃತಿಯ ಸೊಬಗು ಸವಿದಿದ್ದಾರೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಲವು ತಿಂಗಳುಗಳ ಬಳಿಕ ಹೀಗೆ ಸಮುದ್ರದಡದಲ್ಲಿ ವಿಹರಿಸುವ, ಬೆಟ್ಟಗುಡ್ಡದ ಸ್ವಚ್ಛಂದ ಗಾಳಿಗೆ ಮೈಯೊಡ್ಡುವ ಭರದಲ್ಲಿ ಪ್ರವಾಸಿಗರು ಸರ್ಕಾರದ ಕೋವಿಡ್‌ ಕಟ್ಟಲೆಗಳನ್ನು ಮೀರುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಸೋಂಕಿಗೆ ತುತ್ತಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರವಾಸಿಗರ ಈ ರೀತಿಯ ಅತಿರೇಕ ಆರೋಗ್ಯ ಇಲಾಖೆ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಪ್ರವಾಸಿಗರು ಈ ರೀತಿ ಕೋವಿಡ್‌ ನಿಯಮಾವಳಿ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರವಾಸಿ ಮಿತ್ರ ಹೆಸರಿನಲ್ಲಿ ಗೃಹರಕ್ಷಕ ದಳದವರ ಮೂಲಕ ಕೊರೋನಾ ನಿಯಮಾವಳಿ ಕುರಿತು ಸಾರ್ವಜನಿಕರಿಗೆ ತಿಳಿಹೇಳುವ ಪ್ರಯತ್ನ ನಡೆಸುತ್ತಿದೆ. ಜತೆಗೆ ಅಲ್ಲಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಲೂ ನಿರ್ಧರಿಸಿದೆ.
 

click me!