ಕೊರೋನಾ ಕಾಟ: ಮೃತ KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ 30 ಲಕ್ಷ ಪರಿಹಾರ

By Kannadaprabha News  |  First Published Oct 13, 2020, 12:14 PM IST

ಸರ್ಕಾರಕ್ಕೆ 4 ನಿಗಮಗಳ ನೌಕರರ ಆಗ್ರಹ| ಕೊರೋನಾ ಸೋಂಕಿಗೆ ಒಳಗಾಗಿ ಮೃತಪಡುವ ಸರ್ಕಾರಿ ನೌಕರರಿಗೆ 30 ಲಕ್ಷ ರು. ವಿಮೆ ಪರಿಹಾರ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ| ನಾಲ್ಕು ನಿಗಮಗಳಲ್ಲಿ 50ಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿಗೆ ಬಲಿ| 


ಬೆಂಗ​ಳೂರು(ಅ.13): ಕರ್ತವ್ಯ ನಿರ್ವಹಣೆ ವೇಳೆ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ಸಾರಿಗೆ ನೌಕರರಿಗೂ 30 ಲಕ್ಷ ರು. ವಿಮೆ ಪರಿಹಾರ ನೀಡುವಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನಾ ವಾರಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುವಾಗ ಸೋಂಕಿಗೆ ಒಳಗಾಗಿ ಮೃತಪಡುವ ಸರ್ಕಾರಿ ನೌಕರರಿಗೆ 30 ಲಕ್ಷ ರು. ವಿಮೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಕೊರೋನಾ ವಾರಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳಲ್ಲಿ ಈವರೆಗೆ ಸುಮಾರು 3,500ಕ್ಕೂ ಹೆಚ್ಚು ನೌಕರರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ಅಧಿಕ ಮಂದಿ ನೌಕರರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ನೌಕರರು ಆರೋಪಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಾರಿಗೆ ನೌಕರರನ್ನು ಈ ವಿಮೆ ವ್ಯಾಪ್ತಿಗೆ ತರುವುದಾಗಿ ಘೋಷಿಸಿದ್ದರು. ಆದರೆ, ಈವರೆಗೂ ಘೋಷಣೆ ಜಾರಿಗೆ ಬಂದಿಲ್ಲ.

Latest Videos

undefined

ಸಾರಿಗೆ ನಿಗಮಗಳ ಆಡಳಿತ ವರ್ಗದಿಂದಲೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕೊರೋನಾಗೆ ಬಲಿಯಾದ ನೌಕರರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಹೀಗಾಗಿ ಸರ್ಕಾರ ಕೂಡಲೇ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರು. ವಿಮೆ ಪರಿಹಾರ ನೀಡಬೇಕು ಎಂದು ರಾಜ್ಯ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್‌ ಒತ್ತಾಯಿಸಿದ್ದಾರೆ.

ಗುಡ್ ನ್ಯೂಸ್ : ಇವರಿಗೆಲ್ಲಾ ಉಚಿತ KSRTC ಬಸ್ ಪಾಸ್

ಎರಡು ಬಾರಿ ಪತ್ರ:

ಕರ್ತವ್ಯ ನಿರ್ವಹಣೆ ವೇಳೆ ಸೋಂಕಿಗೆ ತುತ್ತಾಗಿ ಮೃತಪಡುವ ಸಾರಿಗೆ ನೌಕರರಿಗೆ 30 ಲಕ್ಷ ರು. ಪರಿಹಾರ ನೀಡುವ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಎರಡು ಬಾರಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈವರೆಗೂ ಇಲಾಖೆ ಅಥವಾ ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊರೋನಾದಿಂದ ಸಾರಿಗೆ ನಿಗಮಗಳು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಮೃತ ನೌಕರರಿಗೆ ಪರಿಹಾರ ನೀಡುವುದರ ಬಗ್ಗೆ ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

50ಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿ

ನಾಲ್ಕು ಸಾರಿಗೆ ನಿಗಮಗಳ ಪೈಕಿ ಬಿಎಂಟಿಸಿಯಲ್ಲಿ 900, ಕೆಎಸ್‌ಆರ್‌ಟಿಸಿಯಲ್ಲಿ ಒಂದು ಸಾವಿರ, ವಾಯವ್ಯ ಸಾರಿಗೆ ನಿಗಮದಲ್ಲಿ 700, ಹಾಗೂ ಈಶಾನ್ಯ ಸಾರಿಗೆ ನಿಗಮದಲ್ಲಿ ಒಂದು ಸಾವಿರ ಸೇರಿದಂತೆ ಒಟ್ಟು 3,500ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಈ ನಾಲ್ಕು ನಿಗಮಗಳಲ್ಲಿ 50ಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
 

click me!