ಲಾಕ್‌ಡೌನ್ ಸಡಿಲಿಕೆ ಎಫೆಕ್ಟ್: ಮೇ ತಿಂಗಳ ಅಂತ್ಯದಲ್ಲಿ ರಾಜ್ಯದಲ್ಲಿ 6000 ಕೇಸು?

By Kannadaprabha NewsFirst Published May 6, 2020, 7:50 AM IST
Highlights

ಮೇ ತಿಂಗಳ ಅಂತ್ಯದಲ್ಲಿ ರಾಜ್ಯದಲ್ಲಿ 6000 ಕೇಸು?| ಅನ್‌ಲಾಕ್‌ ಎಫೆಕ್ಟ್: ಸೋಂಕು ಹೆಚ್ಚಳ ಸಾಧ್ಯತೆ| ರಾಜ್ಯ ಆರೋಗ್ಯ ಇಲಾಖೆಯಿಂದ ಅಂದಾಜು

ಬೆಂಗಳೂರು(ಮೇ.06): ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆಯಿಂದ ಸಾರ್ವಜನಿಕರು ಸಹಜ ಜೀವನಕ್ಕೆ ಮರಳುತ್ತಿರುವ ಪರಿಣಾಮ ಮೇ ಅಂತ್ಯಕ್ಕೆ ಸೋಂಕಿನ ಪ್ರಮಾಣ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಪ್ರಾಥಮಿಕ ಅಂದಾಜಿನ ಪ್ರಕಾರ ಮೇ ಅಂತ್ಯಕ್ಕೆ 5 ರಿಂದ 6 ಸಾವಿರ ಪ್ರಕರಣಗಳು ವರದಿಯಾಗಬಹುದು ಎನ್ನಲಾಗುತ್ತಿದೆ.

ಲಾಕ್‌ಡೌನ್‌ ಹಿಂಪಡೆದಿದ್ದರೆ ಮೇ ಅಂತ್ಯಕ್ಕೆ 20 ಸಾವಿರ ಕೇಸ್‌, ಲಾಕ್‌ಡೌನ್‌ ಮುಂದುವರಿಸಿದ್ದರೆ 6ರಿಂದ 7 ಸಾವಿರ ಕೇಸ್‌ ದಾಖಲಾಗುತ್ತಿತ್ತು ಎಂದು ರಾಜ್ಯ ಆರೋಗ್ಯ ಇಲಾಖೆ ಏಪ್ರಿಲ್‌ ಕೊನೆಯ ವಾರ ನಡೆಸಿದ ಅಧ್ಯಯನದಲ್ಲಿ ಅಂದಾಜಿಸಲಾಗಿತ್ತು. ಆದರೆ, ಆಗ ಸೋಂಕು ಪ್ರತಿ 12 ದಿನಕ್ಕೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಈಗ ಈ ದರ 17 ದಿನಕ್ಕೆ ಮುಟ್ಟಿರುವುದು ಸ್ವಲ್ಪ ಮಟ್ಟಿಗೆ ಆತಂಕ ದೂರವಾಗಿದೆ. ಆದರೆ, ವಿದೇಶದಿಂದ 10,800 ಜನರು ಹಾಗೂ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿರುವುದರಿಂದ ಇವರಿಂದ ಸೋಂಕು ಹಬ್ಬಿದರೆ ಆಗ ಭಾರೀ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ 12 ಸೇರಿ ಕರ್ನಾಟಕದಲ್ಲಿ ನಿನ್ನೆ 22 ಕೇಸ್‌!

ಪ್ರಸ್ತುತ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಮಂಗಳವಾರದ ವೇಳೆಗೆ ವರದಿಯಾಗಿರುವ 673 ಪ್ರಕರಣಗಳಲ್ಲಿ 331 ಮಂದಿಗೆ ಗುಣಮುಖವಾಗಿದ್ದಾರೆ. ಕೊನೆಯ 100 ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದ ರಾಷ್ಟ್ರೀಯ ಸರಾಸರಿ ಸೋಂಕು ಬೆಳವಣಿಗೆ ದರ ಶೇ.12.7 ರಷ್ಟಿದ್ದರೆ ರಾಜ್ಯದಲ್ಲಿ ಶೇ.5.6 ರಷ್ಟಿದೆ. ಒಟ್ಟು ಸರಾಸರಿ ಬೆಳವಣಿಗೆ ದರ ಶೇ.3.3ರಷ್ಟುಮಾತ್ರ ಇದೆ. ದೇಶದಲ್ಲಿ ಪ್ರತಿ 100 ಪರೀಕ್ಷೆಗಳಿಗೆ 4 ಸೋಂಕು ದೃಢಪಡುತ್ತಿದ್ದರೆ, ರಾಜ್ಯದಲ್ಲಿ 1 ಮಾತ್ರ ವರದಿಯಾಗುತ್ತಿದೆ. ಅಲ್ಲದೆ, ಸೋಂಕು ಪರೀಕ್ಷೆಯನ್ನೂ ರಾಜ್ಯದಲ್ಲಿ ಹೆಚ್ಚಾಗಿ ಮಾಡಲಾಗಿದೆ.

ಜನರೇ ನಿರ್ಣಾಯಕ:

ಲಾಕ್‌ಡೌನ್‌ ಸಡಿಲಿಕೆಗೆ ಜನರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದರ ಮೇಲೆ ಸೋಂಕು ಹೆಚ್ಚುವುದು ಅಥವಾ ನಿಯಂತ್ರಣಕ್ಕೆ ಬರುವುದು ಅವಲಂಬಿತ. ಜನರು ನಿಯಮ ಪಾಲಿಸಿದರೆ 5ರಿಂದ 6 ಸಾವಿರ ಪ್ರಕರಣಗಳು ವರದಿಯಾಗಬಹುದು. ಇಲ್ಲದಿದ್ದರೆ ಸೋಂಕು ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಕಾಶ್‌ಕುಮಾರ್‌ ಹೇಳುತ್ತಾರೆ.

ಗುಡ್‌ ನ್ಯೂಸ್ : ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ!

ಕೊರೋನಾ ವಾರ್‌ ರೂಂ ಉಸ್ತುವಾರಿ ಮುನಿಷ್‌ ಮೌದ್ಗಿಲ್‌ ಪ್ರಕಾರ, ಪ್ರಸ್ತುತ ಇರುವ ದ್ವಿಗುಣ ದರದ ಪ್ರಕಾರ ಮೇ 20ರ ವೇಳೆಗೆ 1,300 ಪ್ರಕರಣಗಳಷ್ಟೇ ವರದಿಯಾಗಬೇಕು. ಆದರೆ ಲಾಕ್‌ಡೌನ್‌ ಸಡಿಲಿಕೆಯಿಂದ ಜನರು ಹೊರಬರುವುದು ಹೆಚ್ಚಾಗಿದೆ. ಇದರಿಂದ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗಬಹುದು. ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ ಎಂದಿದ್ದಾರೆ.

click me!