ಇತರ ವಿದ್ಯಾರ್ಥಿಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ಒಟ್ಟು ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ವಕ್ಕರಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಹಾಸನ, (ಜೂನ್.27): ಕೊರೋನಾ ಭೀತಿಯಲ್ಲೂ ಹಲವರ ವಿರೋಧದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿದೆ. ರಾಜ್ಯ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪರೀಕ್ಷೆ ನಡೆಸಿದೆ.
ಆದ್ರೆ, ಏನು ಆಗಬಾರದು ಅಂದುಕೊಳ್ಳಲಾಗಿತ್ತೋ, ಅದು ಆಗ್ಬಿಟ್ಟಿದೆ. ಪರೀಕ್ಷೆ ಬರೆಯುತ್ತಿದ್ದ ಒಟ್ಟು ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಬಾಗಲಕೋಟೆ ಜಿಲ್ಲೆಯ ಇಬ್ಬರು ಮತ್ತು ಹಾಸನದ ಓರ್ವ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇವರೊಂದಿಗೆ ಪರೀಕ್ಷೆ ಬರೆದ ಇತರೆ ವಿದ್ಯಾರ್ಥಿಳಿಗೆ ಕೊರೋನಾ ಭೀತಿ ಶುರುವಾಗಿದೆ.
ಪರೀಕ್ಷಾ ಕೇಂದ್ರದ ಪಕ್ಕದಲ್ಲಿರುವ ಗರ್ಭಿಣಿಗೆ ಕೋವಿಡ್ 19; ವಿದ್ಯಾರ್ಥಿಗಳಿಗೆ ಭಯ..ಭಯ..!
ಬಾಗಲಕೋಟೆಯಲ್ಲಿ ಇಬ್ಬರಿಗೆ
ಬಾಗಲಕೋಟೆ: ತಾಲೂಕಿನ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಅಂತಾ ಡಿಡಿಪಿಐ ಶ್ರೀಶೈಲ ಬಿರಾದಾರ್ ತಿಳಿಸಿದ್ದಾರೆ.
ಕಲಾದಗಿ ಗ್ರಾಮದ ಪರೀಕ್ಷಾ ಕೇಂದ್ರದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೊದಲ ದಿನ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಥರ್ಮಲ್ ಸ್ಕ್ಯಾನ್ ಮಾಡಿದಾಗ ಶೀತ, ನೆಗಡಿ, ಕೆಮ್ಮಿನ ಲಕ್ಷಣಗಳಿದ್ದವು. ಒಟ್ಟು 9 ವಿದ್ಯಾರ್ಥಿಗಳಲ್ಲಿ ಆ ಲಕ್ಷಣ ಕಾಣಿಸಿದ್ದವು. ಈ ಹಿನ್ನೆಲೆಯಲ್ಲಿ 9 ವಿದ್ಯಾರ್ಥಿಗಳನ್ನ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಆ 9 ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಅಂತಾ ಹೇಳಿದ್ರು. ಈ ಇಬ್ಬರು ವಿದ್ಯಾರ್ಥಿಗಳಿಗೆ ಉಳಿದ ಪರೀಕ್ಷೆಗಳನ್ನ ಬರೆಯಲು ಅವಕಾಶ ಇರುವುದಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕರನ್ನ ಕ್ವಾರಂಟೀನ್ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಅಂತರ ಕಾಪಾಡುವಲ್ಲಿ PUC ವಿದ್ಯಾರ್ಥಿಗಳನ್ನು ಮೀರಿಸಿದ SSLC ಮಕ್ಕಳು!
ಹಾಸನದಲ್ಲಿ ಓರ್ವ ವಿದ್ಯಾರ್ಥಿಗೆ ಕೊರೋನಾ
ಹಾಸನದಲ್ಲಿ ಒಟ್ಟು 16 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಶನಿವಾರ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದೆ. ಈ ವಿದ್ಯಾರ್ಥಿ ಡೆಂಗ್ಯು ಜ್ವರದಿಂದ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಆ ವಿದ್ಯಾರ್ಥಿಗೆ ಅಷ್ಟಾಗಿ ಕೊರೋನಾ ಗುಣಲಕ್ಷಣ ಇರಲಿಲ್ಲ, ಜ್ವರದ ಲಕ್ಷಣ ಇರಲಿಲ್ಲ ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದರು.
ಇನ್ನು ಪರೀಕ್ಷೆ ಕೇಂದ್ರದಲ್ಲಿದ್ದ 18 ಮಕ್ಕಳು, ಒಬ್ಬರು ಶಿಕ್ಷಕರನ್ನು ನಾವು ಪ್ರತ್ಯೇಕಿಸಿದ್ದೇವೆ. ಕೊರೋನಾ ಪಾಸಿಟಿವ್ ಕಂಡು ಬಂದ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನಿಂಗ್ನಲ್ಲಿ ಯಾವುದೇ ಲಕ್ಷಣ ಇಲ್ಲ, ಕೊರೊನಾ ಲಕ್ಷಣ ಕಂಡು ಬರದ ಹಿನ್ನೆಲೆ ಒಟ್ಟಿಗೆ ಪರೀಕ್ಷೆ ಬರೆಸಿದ್ದೆವು. ಕೊರೋನಾ ಪಾಸಿಟಿವ್ ವಿದ್ಯಾರ್ಥಿಯನ್ನು ಎಲ್ಲರೊಟ್ಟಿಗೆ ಪರೀಕ್ಷೆ ಬರೆಸಿದ್ದಕ್ಕೆ ಜಿಲ್ಲಾಧಿಕಾರಿ ಅವರು ಸಮರ್ಥನೆ ನೀಡಿದರು.